ಬೆಂಗಳೂರು [ಸೆ.12]: ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿನ ಸರ್ಕಾರಿ ಜಾಗದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿಕೊಂಡಿರುವ 10 ಸಾವಿರ ಮನೆಗಳನ್ನು ಕಾನೂನುಬದ್ಧಗೊಳಿಸಿ, ನವೆಂಬರ್‌ ತಿಂಗಳಲ್ಲಿ ಹಕ್ಕುಪತ್ರ ನೀಡುವುದಾಗಿ ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 10 ಸಾವಿರ ಮನೆಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದು, 15ರಿಂದ 20ವರ್ಷ ವಾಸವಿದ್ದವರಿಗೆ ರಾಜ್ಯ ಭೂ ಕಂದಾಯ ಕಾಯಿದೆ 1964ರ 94ಸಿಸಿ ಅಡಿಯಲ್ಲಿ ಸಕ್ರಮ ಮಾಡಿಕೊಡಲಾಗುವುದು ಎಂದರು.

ನಿವೇಶನದ ಸುತ್ತಳತೆ 30/40 ಚದರ ಅಡಿಯೊಳಗಿದ್ದರೆ ಮಾತ್ರ ಸಕ್ರಮ ಮಾಡಿಕೊಡಲಾಗುವುದು. ಫಲಾನುಭವಿಗಳು ಕೇವಲ .50 ನೋಂದಣಿಗೆ ಕಟ್ಟಬೇಕು. ನಿವೇಶನವನ್ನು ನೋಂದಣಿ ಮಾಡಿದ ಬಳಿಕವೇ ವಿತರಿಸಲಾಗುವುದು. ಇದರಲ್ಲಿ ಯಾವುದೇ ಅಕ್ರಮಗಳು ನಡೆಯಬಾರದು ಎಂಬ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ನೋಂದಣಿ ಮಾಡಿಸಿದ ದಾಖಲೆಯ ಮೂರು ಪ್ರತಿಗಳನ್ನು ಮಾಡಲಾಗುವುದು. ಸರ್ಕಾರಿ ದಾಖಲೆಗಾಗಿ, ಸಬ್‌ರಿಜಿಸ್ಟ್ರಾರ್‌ ಮತ್ತು ಫಲಾನುಭವಿಯಲ್ಲಿ ತಲಾ ಒಂದು ಪ್ರತಿ ನೀಡಲಾಗುವುದು ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅನಧಿಕೃತವಾಗಿ ನಿರ್ಮಿಸಿರುವ ಮನೆಗಳ ಸಕ್ರಮೀಕರಣಕ್ಕಾಗಿ 52,813 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. 11,964 ಅರ್ಜಿಗಳಿಗೆ ಮಂಜೂರಾಗಿದ್ದು, 25,553 ಅರ್ಜಿಗಳು ತಿರಸ್ಕೃತಗೊಂಡಿವೆ. ಬಾಕಿ 15,296 ಅರ್ಜಿಗಳು ಇವೆ ಎಂದು ಮಾಹಿತಿ ನೀಡಿದ ಕಂದಾಯ ಸಚಿವರು, ನವೆಂಬರ್‌ ತಿಂಗಳಲ್ಲಿ ಅರಮನೆ ಮೈದಾನ ಅಥವಾ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಿ 10 ಸಾವಿರ ಮಂದಿಗೆ ನೋಂದಣಿಯಾದ ಹಕ್ಕುಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.