Dharwad: ತಳಪಾಯ ಹಂತದಲ್ಲೇ ಉಳಿದ ಮನೆಗಳು: ಅತಂತ್ರರಾದ ಫಲಾನುಭವಿಗಳು
* ಅತಿವೃಷ್ಟಿ ಹಾನಿಯಾದ ಮನೆಗಳ ಪರಿಹಾರದ ಜಿಪಿಎಸ್ ಬ್ಲಾಕ್
* ಪರಿಹಾರ ಜಮೆ ಹೇಗೆ...?
* ಧಾರವಾಡ ಜಿಲ್ಲೆಯಲ್ಲಿ 180 ಮನೆಗಳು ಬ್ಲಾಕ್
ವರದಿ: ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ(ಏ.09): ಜಿಲ್ಲೆಯಲ್ಲಿ 2019, 2020, 2021 ರಲ್ಲಿ ಅತಿವೃಷ್ಟಿಯಾಗಿತ್ತು ಅತಿಯಾದ ಮಳೆಯಿಂದ ಹಾನಿಯಾದ ಮನೆಗಳನ್ನು ಪುನರ್ ನಿರ್ಮಿಸಿಕೊಳ್ಳಲು ಸರ್ಕಾರ ಪರಿಹಾರ ನೀಡುತ್ತಿದೆ. ಆದರೆ, 2020ರ ಮಳೆಗೆ ಹಾನಿಯಾದ ಮನೆಗಳ ಪರಿಹಾರದ(Compensation) ಮೊತ್ತವನ್ನು ಎರಡು ತಿಂಗಳಿಂದ ತಡೆಹಿಡಿಯಲಾಗಿದೆ. ಫಲಾನುಭವಿಗಳು ಸ್ವಯಂ ತಪ್ಪಿನಿಂದ ಹೀಗೆ ಆಗಿದೆ ಅಂತ ಅಧಿಕಾರಿಗಳು ಫಲಾನುಭವಿಗಳ(Beneficiaries)ಮೇಲೆ ಹಾಕ್ತಾ ಇದಾರೆ. ಸದ್ಯ ಅಧಿಕಾರಿಗಳು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.
ಮಳೆಯಿಂದ(Rain) ಹಾನಿಗೊಳಗಾದ ಮನೆಗಳನ್ನು ಎ, ಬಿ, ಸಿ ಕೆಟಗರಿಗಳನ್ನಾಗಿ ವಿಂಗಡಿಸಿ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ. ಕಂದಾಯ, ಪಂಚಾಯತ್‌ರಾಜ್ ಹಾಗೂ ಇಂಜಿನಿಯರಿಂಗ್ ವಿಭಾಗದವರು ಹಾನಿ(Damage) ಪರಿಶೀಲಿಸಿ ಕೆಟಗರಿ ನೀಡಿದ್ದಾರೆ. 2020 ರಲ್ಲಿ ಹಾನಿಗೊಳಗಾದ ಮನೆಗಳನ್ನು ನಿಗಮದಲ್ಲಿ ಎಂಟ್ರಿ ಮಾಡಲಾಗಿತ್ತು. ಜುಲೈನಿಂದ ಅಕ್ಟೋಬರ್‌ವರೆಗಿನ ಮಳೆಗೆ ಅನುಗುಣವಾಗಿ ನಂತರದ ದಿನಗಳಲ್ಲಿ ಡಾಟಾ ಎಂಟ್ರಿ ಮಾಡಲಾಗಿದೆ.
ಹುಬ್ಬಳ್ಳಿಯಿಂದ, ಮಂಗಳೂರು- ಮೈಸೂರಿಗೆ ವಿಮಾನ ಸೇವೆ ಶೀಘ್ರದಲ್ಲೇ ಆರಂಭ!
ಸಂಪೂರ್ಣ ಹಾನಿಯಾದ ಮನೆಗಳನ್ನು A ಕೆಟಗರಿಯಲ್ಲಿ ದಾಖಲಿಸಿ 5 ಲಕ್ಷ ರೂ. ಪರಿಹಾರಕ್ಕೆ ಅರ್ಹಗೊಳಿಸಲಾಗಿದೆ. ಅದೇರೀತಿ ಭಾಗಶಃ ಹಾನಿಯಾದವರಿಗೆ B ಕೆಟಗೇರಿ ಎಂದು ನಮೂದಿಸಿ 3 ಲಕ್ಷ ರೂ. ಮತ್ತು ಈ ಕೆಟಗರಿಯವರು ತಮ್ಮ ಮನೆಯನ್ನು ಸಂಪೂರ್ಣ ಕೆಡವಿ ಪುನರ್ ನಿರ್ಮಾಣಕ್ಕೆ ಅನುಮತಿ ನೀಡಿದರೆ B1 ಎಂದು ನಮೂದಿಸಿ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಅಲ್ಪಸ್ವಲ್ಪ ಹಾನಿಯಾದವರಿಗೆ ಸಿ ಕೆಟಗರಿಯಲ್ಲಿ ನಮೂದಿಸಿ ಅವರ ಖಾತೆಗೆ 50,000 ರೂ. ಪರಿಹಾರದ ಮೊತ್ತ ಜಮಾ ಮಾಡಲಾಗಿದೆ.
ಜಿಲ್ಲೆಯಲ್ಲಿ 180 ಮನೆಗಳು ಬ್ಲಾಕ್
A,B, ಮತ್ತು B1 ಕೆಟಗರಿಯ ಫಲಾನುಭವಿಗಳಿಗೆ ತುರ್ತು ಪರಿಹಾರವಾಗಿ 95,000 ರೂ.ಗಳನ್ನು ಖಾತೆಗೆ ಜಮೆ ಮಾಡಲಾಗಿದೆ. ಬಿದ್ದ ಮನೆಯ ಅವಶೇಷಗಳನ್ನು ತೆಗೆದು ತಳಪಾಯ ಹಾಕಿಕೊಳ್ಳಲು 6 ತಿಂಗಳು ಗಡುವು ನೀಡಲಾಗಿತ್ತು. ಆದರೆ, 180 ಫಲಾನುವಿಗಳು ತಳಪಾಯ ಹಾಕಿಕೊಳ್ಳದೆ ಹಾಗೇ ಬಿಟ್ಟಿದ್ದರು.
ಫೆಬ್ರವರಿ ಮೊದಲ ವಾರದಲ್ಲಿ ಈ ಫಲಾನುಭವಿಗಳಿಗೆ ಆಯಾ ತಹಸೀಲ್ದಾರರಿಂದ ನೋಟಿಸ್(Notice) ಜಾರಿ ಮಾಡಲಾಗಿತ್ತು. ಬಿಡುಗಡೆಯಾದ ಪರಿಹಾರದ ಮೊತ್ತವನ್ನು ಬಳಸಿಕೊಂಡು ಮನೆ ನಿರ್ಮಾಣ ಕಾರ್ಯ ಆರಂಭಿಸಬೇಕು ಎಂದು ಫೆ. 12ಕ್ಕೆ ಗಡುವು ನೀಡಲಾಗಿತ್ತು ಅಷ್ಟು ದಿನ ಮನೆ(Home) ನಿರ್ಮಾಣವನ್ನೇ ಮರೆತಿದ್ದ ಫಲಾನುಭವಿಗಳು ಕಾರ್ಯಪ್ರವೃತ್ತರಾಗಿ ತಳಪಾಯ ಹಾಕಿಸಿದ್ದಾರೆ. 2 ನೇ ಕಂತಿನ ಹಣ ಪಡೆಯಲು ಜಿಪಿಎಸ್ ಮಾಡಿಸಲು ಮುಂದಾದಾಗ ಬ್ಲಾಕ್ ಆಗಿರುವುದು ಗೊತ್ತಾಗಿದೆ. ಫಲಾನುಭವಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷದಿಂದ ಫಲಾನುಭವಿಗಳು ಈಗ ಪರಿತಪಿಸುತ್ತಿದ್ದಾರೆ.
MM Kalburgi Murder Case: ಕಲಬುರ್ಗಿ ಹತ್ಯೆ ಕೇಸ್ ವಿಚಾರಣೆ ಮೇ 10ಕ್ಕೆ ಮುಂದೂಡಿಕೆ
ಪರಿಹಾರ ಜಮೆ ಹೇಗೆ...?
ಮನೆ ಹಾನಿಗೆ ಅರ್ಹರಾದ ಫಲಾನುಭವಿಗಳಿಗೆ ಕೆಟಗರಿವಾರು ಪರಿಹಾರಕ್ಕೆ ಅರ್ಹಗೊಳಿಸಲಾಗಿದೆ. 5 ಲಕ್ಷ ರೂ.ಗಳ ಮನೆಯ ಮೊದಲ ಕಂತು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್(NDRF) ಮಾರ್ಗಸೂಚಿಗಳ ಅನ್ವಯ ಮಳೆಗಾಲದ ಸಂದರ್ಭದಲ್ಲಿ ತುರ್ತಾಗಿ 95,000 ರೂ. ಪರಿಹಾರ ಜಮೆ ಮಾಡಲಾಗಿದೆ. ತಳಪಾಯ ಹಾಕಿಕೊಂಡ ನಂತರ 2 ನೇ ಕಂತು 1 ಲಕ್ಷ ರೂ., ಗೋಡೆ ಕಟ್ಟಿದ ನಂತರ 3 ನೇ ಕಂತು 1 ಲಕ್ಷ ರೂ., ಛಾವಣಿ ಹಾಕಿದಾಗ 4 ನೇ ಕಂತು 1 ಲಕ್ಷ ರೂ. ಹಾಗೂ ಮನೆ ನಿರ್ಮಾಣ ಸಂಪೂರ್ಣವಾದಾಗ ಫಲಾನುಭವಿಯನ್ನು ಮನೆಯ ಮುಂದೆ ನಿಲ್ಲಿಸಿ ಫೋಟೊ ತೆಗೆದು ಅಪ್‌ಲೋಡ್ ಮಾಡಿದಾಗ ಕೊನೆಯ ಕಂತು 1 ಲಕ್ಷ ರೂ. ಜಮೆಯಾಗುತ್ತದೆ. ಜಿಪಿಎಸ್ ಕಾರ್ಯವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯವರು (ಪಿಡಿಒ, ಆಪರೇಟರ್) ನಿರ್ವಹಿಸುತ್ತಿದ್ದು, ಹಂತವಾರು ಫೋಟೊಗಳನ್ನು ತೆಗೆದು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದಾಗ ಫಲಾನುಭವಿಯ ಖಾತೆಗೆ ಹಣ ನೇರ ಜಮೆಯಾಗುತ್ತದೆ.
2020 ರ ಮಳೆ ಹಾನಿಯ ಫಲಾನುಭವಿಗಳಿಗೆ ಫೆಬ್ರವರಿಯಲ್ಲಿ ನೋಟಿಸ್ ನೀಡಲಾಗಿತ್ತು. ಕೊರೋನಾ(Coronavirus), ಲಾಕ್‌ಡೌನ್‌ನಿಂದಾಗಿ(Lockdown) ತಳಪಾಯ ಹಾಕುವುದು ವಿಳಂಬವಾಗಿದೆ. ಅಲ್ಲದೆ, ಕೆಲ ಪ್ರಕರಣಗಳಲ್ಲಿ ತಕರಾರು ಇದ್ದಿದ್ದರಿಂದ ಬಗೆಹರಿಸಿಕೊಳ್ಳುವಲ್ಲಿ ಹಿನ್ನಡೆಯಾಗಿದೆ. ಈಗ ಮನೆಯ ತಳಪಾಯ ಹಾಕಲಾಗಿದ್ದು, ತಡೆಯನ್ನು ತೆಗೆದು ಮುಂದಿನ ಕಂತುಗಳ ಹಣವನ್ನು ಬಿಡುಗಡೆ ಮಾಡಲು ಅನುಕೂಲ ಕಲ್ಪಿಸಬೇಕಿದೆ.