Asianet Suvarna News Asianet Suvarna News

ಹಾವೇರಿ ಜಿಲ್ಲೆ ವಿವಿಧ ಸೂಚ್ಯಂಕಗಳಲ್ಲಿ ತೀರಾ ಕಳಪೆ, ಪ್ರಗತಿ ಸಾಧಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

ಹಾವೇರಿ ಜಿಲ್ಲೆ ಆರೋಗ್ಯ, ಆದಾಯ, ಮಾನವ ಅಭಿವೃದ್ಧಿ, ಶಿಕ್ಷಣ ಸೂಚ್ಯಂಕದಲ್ಲಿ ರಾಜ್ಯದ ಸರಾಸರಿಗಿಂತ ಅತ್ಯಂತ ಹಿಂದುಳಿದಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯು ಈ ಎಲ್ಲ ವಲಯಗಳ ಸೂಚ್ಯಂಕಗಳಲ್ಲಿ ಪ್ರಗತಿ ಕಾಣುವಂತೆ ಕೆಲಸ ಮಾಡಲು ಸಿಎಂ  ಸೂಚಿಸಿದ್ದಾರೆ.

Below state average in index of various sectors CM Siddaramaiah strict instructions to make progress in haveri  gow
Author
First Published Jul 25, 2023, 9:23 PM IST

 ವರದಿ: ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್

ಹಾವೇರಿ (ಜು 25): ಹಾವೇರಿ ಜಿಲ್ಲೆ ಆರೋಗ್ಯ, ಆದಾಯ, ಮಾನವ ಅಭಿವೃದ್ಧಿ, ಶಿಕ್ಷಣ ಸೂಚ್ಯಂಕದಲ್ಲಿ ರಾಜ್ಯದ ಸರಾಸರಿಗಿಂತ ಅತ್ಯಂತ ಹಿಂದುಳಿದಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯು ಈ ಎಲ್ಲ ವಲಯಗಳ ಸೂಚ್ಯಂಕಗಳಲ್ಲಿ ಪ್ರಗತಿ ಕಾಣುವಂತೆ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾವೇರಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿ ಹಾವೇರಿಗೆ ಭೇಟಿ ನೀಡಿ ಜಿಲ್ಲಾಡಳಿತ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ನಡೆಸಿದರು. 

ಹಾವೇರಿ ಜಿಲ್ಲೆಯು ಆರೋಗ್ಯ ಸೂಚ್ಯಂಕದಲ್ಲಿ 17ನೇ ಸ್ಥಾನ, ಆದಾಯ ಸೂಚ್ಯಂಕದಲ್ಲಿ 21ನೇ ಸ್ಥಾನ, ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ 27 ನೇ ಸ್ಥಾನ, ಶಿಕ್ಷಣ ಸೂಚ್ಯಂಕದಲ್ಲಿ 28ನೇ ಸ್ಥಾನದಲ್ಲಿದೆ. ರಾಜ್ಯದ ಸರಾಸರಿ ಆದಾಯಕ್ಕಿಂತ ಹಾವೇರಿ ಜಿಲ್ಲೆಯ ಸರಾಸರಿ ಆದಾಯ ಬಹಳ ಕಡಿಮೆ ಇದೆ. ಹೀಗಾಗಿ ಹಾವೇರಿ ಜಿಲ್ಲೆ ಅತ್ಯಂತ ಹಿಂದುಳಿದಿದೆ ಎಂಬುದನ್ನು ಗಮನಿಸಿದ ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಿಲ್ಲೆಯನ್ನು ಪ್ರಗತಿ ಪಥದಲ್ಲಿ ಮುನ್ನಡೆಸುವಂತೆ ಸೂಚನೆ ನೀಡಿದರು.

ಮಳೆ ಅಬ್ಬರ ಅವಘಡಗಳ ಸರಣಿ, ಮುಳ್ಳಯ್ಯನಗಿರಿಯಲ್ಲಿ ಭೂ ಕುಸಿತ , ಪ್ರವಾಸಿಗರಿಗೆ ನಿರ್ಬಂಧ

ಉದ್ಯೋಗ ಸೃಷ್ಟಿಗೆ ಕ್ರಿಯಾ ಯೋಜನೆ:
ಈ ಜಿಲ್ಲೆ ಮುಖ್ಯವಾಗಿ ಕೃಷಿ ಮತ್ತು ಪಶುಸಂಗೋಪನೆಯನ್ನು ಅವಲಂಬಿಸಿದೆ. ಸಣ್ಣ ರೈತರೇ ಇಲ್ಲಿ ಹೆಚ್ಚಾಗಿದ್ದಾರೆ. ಉದ್ಯೋಗ ಸೃಷ್ಟಿಸದೆ ಬೇರೆ ದಾರಿ ಇಲ್ಲ. ಈ ಕುರಿತು ಕ್ರಿಯಾ ಯೋಜನೆ ಸಿದ್ದಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. 

ನಾಡಿನ ಜನತೆ ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡು ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ. ಈ ನಿರೀಕ್ಷೆಗಳಿಗೆ ತಕ್ಕಂತೆ ಅಧಿಕಾರಿಗಳು ಕ್ರಿಯಾಶಿಲವಾಗಿ ಕೆಲಸ ಮಾಡಬೇಕು. ಉದಾಸೀನ, ಬೇಜವಾಬ್ದಾರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ. ಜನರ ನಿರೀಕ್ಷೆಗಳಿಗೆ ತಕ್ಕಂತೆ ಚುರುಕಾಗಿ, ದಕ್ಷವಾಗಿ ಕಾರ್ಯ ನಿರ್ವಹಿಸಿ ಎಂದು ಎಚ್ಚರಿಕೆಯ ಮಾತುಗಳ ಜತೆಗೆ ತಿಳಿ ಹೇಳಿದರು. 

ಮಹಾರಾಷ್ಟ್ರದಲ್ಲಿ ಹೆಚ್ಚಿದ ಮಳೆ, ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ!

ಕಳಪೆ ಬೀಜದ ದೂರು ವಿರುದ್ಧ ಕ್ರಮಕ್ಕೆ ಸೂಚನೆ
ಜಿಲ್ಲೆಯಲ್ಲಿ ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳಿಗೆ ಸಮಸ್ಯೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಔಷಧ, ಗೊಬ್ಬರದ ಜತೆಗೆ ಗುಣಮಟ್ಟದ ಬೀಜ ಸರಬರಾಜು ಅಗಬೇಕು. ಕಳಪೆ ಬೀಜದ ದೂರುಗಳು ಬಂದರೆ ಕೂಡಲೇ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರಿಂದ ದೂರು ಬಂದರೆ ನಿಮ್ಮನ್ನೇ ನೇರವಾಗಿ ಹೊಣೆ ಮಾಡಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರಿಗೆ ಎಚ್ಚರಿಕೆ ನೀಡಿದರು.

ಡಿಸಿಸಿ ಬ್ಯಾಂಕ್‍ ಎಂಡಿ ಮತ್ತು ಸಹಕಾರ ಸಂಘಗಳ ಜಂಟಿ ನಿಬಂಧಕರು ಸಭೆಯಲ್ಲಿ ಹಾಜರಿಲ್ಲದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಸಭೆಯ ಸೂಚನೆ ಕೊಟ್ಟರೂ ಅವರು ಗೈರಾಗಿರುವುದಕ್ಕೆ ಕಾರಣ ಕೇಳಿ ನೋಟಿಸ್‍ ನೀಡಿ, ಮೂರು ದಿನಗಳಲ್ಲಿ ಸಮರ್ಪಕ ಉತ್ತರ ಬರದಿದ್ದರೆ ಅಮಾನತು ಮಾಡಿ ಎಂದು ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ  ಸಭೆಯಲ್ಲೇ ಸೂಚನೆ ನೀಡಿದರು. 

ಆಯವ್ಯಯ ಜಾರಿ
ಆಗಸ್ಟ್‌ 1 ರಿಂದ ಬಜೆಟ್‍ ಜಾರಿಗೆ ಬರುತ್ತದೆ. ರೈತರ ಬಡ್ಡಿ ರಹಿತ ಸಾಲವನ್ನು 3 ರಿಂದ 5 ಲಕ್ಷಕ್ಕೆ ಏರಿಸಿರುವುದನ್ನು ರೈತರ ಗಮನಕ್ಕೆ ತರಬೇಕು. ರೈತರಿಗೆ ಸಮಸ್ಯೆ ಆಗದಂತೆ 5 ಲಕ್ಷದವರೆಗೂ ಬಡ್ಡಿ ರಹಿತ ಸಾಲ ನೀಡಬೇಕು. ವಾರ್ಷಿಕ ಶೇ.3 ಬಡ್ಡಿ ದರದಲ್ಲಿ 15 ಲಕ್ಷದವರೆಗೂ ಸಾಲಸೌಲಭ್ಯವನ್ನು ರೈತರಿಗೆ ಒದಗಿಸಿಕೊಡಬೇಕು ಎಂದು ಸೂಚಿಸಿದರು.

ಆಯವ್ಯಯದಲ್ಲಿ ಘೋಷಿಸಿದಂತೆ ಆಗಸ್ಟ್‌ 1 ರಿಂದ ಕೃಷಿಭಾಗ್ಯ ಯೋಜನೆಗೆ ಮರು ಚಾಲನೆ ನೀಡಬೇಕು. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನಡೆಸಿರುವ ಮೌಲ್ಯಮಾಪನದಲ್ಲಿ ಕೃಷಿಹೊಂಡಗಳಿಂದ ರೈತ ಸಮುದಾಯಕ್ಕೆ ಬಹಳ ಅನುಕೂಲವಾಗಿದೆ ಎನ್ನುವ ವರದಿ ಬಂದಿದೆ. ಆದ್ದರಿಂದ ಇದನ್ನು ಮತ್ತೆ ಚಾಲನೆ ನೀಡಬೇಕು ಹಾಗೂ ಕೃಷಿ ಯಂತ್ರಧಾರೆ ಯೋಜನೆ ಪರಿಣಾಮಕಾರಿ ಜಾರಿ ಆಗುವಂತೆ ನೋಡಿಕೊಳ್ಳಲು ಸೂಚನೆ ನೀಡಲಾಯಿತು.

ಗ್ಯಾರಂಟಿ ಯೋಜನೆಗಳು 
ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಯಾವ ಪ್ರಮಾಣದಲ್ಲಿದೆ? ಅನುಷ್ಠಾನ ಮಾಡಲು ಏನಾದರೂ ತೊಂದರೆಗಳಿವೆಯೇ ಎಂದು ಆಹಾರ ಇಲಾಖೆ, ಸಾರಿಗೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ  ಚೆಸ್ಕಾಂ ಅಧಿಕಾರಿಗಳನ್ನು ಒಬ್ಬೊಬ್ಬರನ್ನಾಗಿ ವಿವರವಾಗಿ ಪ್ರಶ್ನಿಸಿ ಸಮರ್ಪಕ ಜಾರಿಗೆ ಸ್ಪಷ್ಟ ಸೂಚನೆ ನೀಡಿದರು.  

ಜಿಲ್ಲಾ ಆಸ್ಪತ್ರೆ, ಶಿಗ್ಗಾಂವಿ ಬಸ್‍ ನಿಲ್ದಾಣದ ಅವ್ಯವಸ್ಥೆ, ಅಂಗನವಾಡಿಗಳಿಗೆ ಕಳಪೆ ಮೊಟ್ಟೆ ಪೂರೈಕೆ, ಸೈಬರ್‍ ಅಪರಾಧ ಪ್ರಕರಣಗಳ ಹೆಚ್ಚಳ, ಚರಂಡಿ ದುರವಸ್ಥೆ, ಕುಡಿಯುವ ನೀರಿನ ಸಮಸ್ಯೆ ಸೇರಿ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಓದಿ ಸಂಬಂಧಪಟ್ಟ ಅಧಿಕಾರಿಗಳಿಗೆ ಆ ಕುರಿತಾಗಿ ಪ್ರಶ್ನಿಸಿ ಏನು ಕ್ರಮ ಕೈಗೊಂಡಿದ್ದೀರಿ ಎಂದು ಉತ್ತರ ಕೇಳಿದರು. ಸೂಕ್ತವಾಗಿ ಉತ್ತರಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತಕ್ಷಣ  ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು. ಮುಂದಿನ ಸಭೆಗೆ ಬರುವವೇಳೆಗೆ ಈ ರೀತಿಯ ಸಮಸ್ಯೆಗಳು ಇರಬಾರದು. ಪ್ರಗತಿ ಪಥದಲ್ಲಿ ಜಿಲ್ಲೆ ಇನ್ನಷ್ಟು ಸಾಧನೆ ಮಾಡಬೇಕು ಎಂದು ಸೂಚಿಸಿದರು. 

ಸಭೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ, ಕಾನೂನು ಸಚಿವ ಎಚ್.ಕೆ.ಪಾಟೀಲ್, ಜವಳಿ ಸಚಿವ ಶಿವಾನಂದ ಪಾಟೀಲ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಶಾಸಕ ಶ್ರೀನಿವಾಸ್ ಮಾನೆ, ವಿಧಾನ‌ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹಮದ್ ಮತ್ತು ಜಿಲ್ಲೆಯ ಎಲ್ಲಾ ಶಾಸಕರು ಉಪಸ್ಥಿತರಿದ್ದರು.

AEE ಅಮಾನತು 
ಹಾವೇರಿಗೆ ಪ್ರವೇಶ ಪಡೆಯುತ್ತಿದ್ದಂತೆ ಜಿಲ್ಲಾ ಆಸ್ಪತ್ರೆಗೆ ದಿಡೀರ್ ಭೇಟಿ ನೀಡಿದ ಮುಖ್ಯಮಂತ್ರಿಗಳು ಮಳೆಗೆ ನೀರು ಸೋರುತ್ತಿದ್ದರೂ ಅದೇ ವಾರ್ಡ್ ನಲ್ಲಿ ತಾಯಿ ಮಕ್ಕಳಿಗೆ ಚಿಕಿತ್ಸೆ ಕೊಡುತ್ತಿದ್ದದ್ದನ್ನು ಮತ್ತು ಅಲ್ಲಿನ ಅವ್ತವಸ್ಥೆಗಳನ್ನು ನೋಡಿ ಕಾರ್ಯಪಾಲಕ‌ ಅಭಿಯಂತರರಿಗೆ, ಜಿಲ್ಲಾ ಸರ್ಜನ್ ಅವರಿಗೆ ತರಾಟೆಗೆ ತೆಗೆದುಕೊಂಡರು. ಬಳಿಕ ಕರ್ತವ್ಯಲೋಪಕ್ಕಾಗಿ ಆರೋಗ್ಯ ಇಲಾಖೆ ಕಾಮಗಾರಿ ವಿಭಾಗದ AEE ಮಂಜಪ್ಪ ಅವರನ್ನು ಅಮಾನತುಗೊಳಿಸಿ ಸ್ಥಳದಲ್ಲೇ ಆದೇಶ ಹೊರಡಿಸಿದರು.

Follow Us:
Download App:
  • android
  • ios