ಸಿಬಿಐ ದಾಳಿ ಬೆನ್ನಲ್ಲಿಯೇ ಬೆಳಗಾವಿ ದಂಡು ಮಂಡಳಿ ಸಿಇಒ ಅನುಮಾನಾಸ್ಪದ ಸಾವು
ಬೆಳಗಾವಿಯ ದಂಡು ಮಂಡಳಿಯ ಮೇಲೆ ಸಿಬಿಐ ದಾಳಿ ಮಾಡಿ ತೀವ್ರ ವಿಚಾರಣೆಗೆ ಒಳಪಡಿಸಿದ ಒಂದು ವಾರದಲ್ಲಿಯೇ ದಂಡು ಮಂಡಳಿ ಸಿಇಒ ಕೆ. ಆನಂದ್ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಬೆಳಗಾವಿ (ನ.25): ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದಲ್ಲಿರುವ ದಂಡುಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ತಾವು ವಾಸವಿದ್ದ ಮನೆಯ ಕೋಣೆಯಲ್ಲಿಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ದಂಡುಮಂಡಳಿ ಸಿಇಒ ಕೆ. ಆನಂದ ನಿಗೂಢ ಸಾವು ಪ್ರಕರಣದ ಕುರಿತು ಮೃತದೇಹ ಪರಿಶೀಲನೆ ಬಳಿಕ ಡಿಸಿಪಿ ರೋಹನ್ ಜಗದೀಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಕೆ. ಆನಂದ ಅವರು 2015 ನೇ ಬ್ಯಾಚ್‌ನ ಐಡಿಎಎಸ್ ಅಧಿಕಾರಿ ಆಗಿದ್ದಾರೆ.ಕಳೆದ ಎರಡು ದಿನಗಳಿಂದ ಮನೆಯ ರೂಮಿನೊಳಗಿದ್ದರು. ಅನುಮಾನಗೊಂಡ ಸಿಬ್ಬಂದಿ ಇಂದು ಕ್ಯಾಂಪ್ ಪೊಲೀಸರಿಗೆ ಮಾಹಿತಿ ನೀಡಿದರು. ಆಗ, ಬಾಗಿಲು ತೆರೆದು ನಮ್ಮ ಸಿಬ್ಬಂದಿ ನೋಡಿದಾಗ ಕೆ.ಆನಂದ ಶವವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿಸಿದರು.
ಬೆಳಗಾವಿ ದಂಡು ಮಂಡಳಿ ಕಚೇರಿ ಮೇಲೆ ಸಿಬಿಐ ದಾಳಿ
ವೈದ್ಯಕೀಯ ತಪಾಸಣೆ ನಡೆಸಿದ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಸಹಜ ಸಾವೋ? ಕೊಲೆಯೋ? ಆತ್ಮಹತ್ಯೆಯೋ? ಎಂಬುದು ನಿಖರ ಮಾಹಿತಿ ಇಲ್ಲ. ಹಿರಿಯ ಅಪರಾಧ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆ. ಆನಂದ ಆನಂದ ಅವರ ಕುಟುಂಬಸ್ಥರಿಗೂ ಮಾಹಿತಿ ನೀಡಲಾಗಿದೆ. ಮರಣೋತ್ತರ ಪರೀಕ್ಷೆ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ನೆರವೇರಿಸಲಾಗುವುದು. ಆ ನಂತರ ಸಾವಿನ ಬಗ್ಗೆ ಪೂರ್ಣ ಖಚಿತ ಮಾಹಿತಿ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದಲ್ಲಿರುವ ದಂಡುಮಂಡಳಿ ಕಚೇರಿ ಮೇಲೆ ನವೆಂಬರ್ 18ರಂದು ದಾಳಿ ಮಾಡಿದ ಸಿಬಿಐ ಅಧಿಕಾರಿಗಳು ಸಿಇಒ ಕೆ.ಆನಂದ ಸೇರಿ ಹಿರಿಯ ಅಧಿಕಾರಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಬೆಂಗಳೂರು, ದೆಹಲಿಯ ಸಿಬಿಐ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದರು. ದಂಡುಮಂಡಳಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಕುರಿತು ಅಭ್ಯರ್ಥಿಯೊಬ್ಬರು ನೀಡಿದ ದೂರಿನ ಮೇರೆಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲಿಸಿದ್ದರು.
ಕರ್ನಾಟಕ ಬ್ಯಾಂಕ್‌ನ ಚೀಫ್ ಕಂಪ್ಲೇಟ್ ಆಫೀಸರ್ ವಾದಿರಾಜ್ ಸಾವು: ಕತ್ತು ಸೀಳಿದ ಸ್ಥಿತಿಯಲ್ಲಿ ದೇಹ ಪತ್ತೆ
ಬೆಳಗಾವಿ ದಂಡುಮಂಡಳಿ ಕಚೇರಿಯಲ್ಲಿ ಕಳೆದ 10 ವರ್ಷಗಳಿಂದ ವಿವಿಧ ಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಹಲವಾರು ಬಾರಿ ದೂರು ನೀಡಿದ್ದರೂ ಈವರೆಗೆ ಯಾರೂ ಕ್ರಮ ಕೈಗೊಂಡಿರಲಿಲ್ಲ ಎಂದು ಕ್ಲೇಟನ್ ಕೊಯ್ಲಿಲೋ ಆರೋಪಿಸಿದ್ದರು. ಈ ಕುರಿತು ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ್ದ ಕ್ಲೇಟನ್ ಕೊಯ್ಲಿಲೋ ಅವರು, ದಂಡುಮಂಡಳಿಯಲ್ಲಿ ನಡೆದ ಅಕ್ರಮ ನೇಮಕಾತಿ ಕುರಿತು ಕ್ಯಾಂಪ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ದಂಡುಮಂಡಳಿ ವ್ಯಾಪ್ತಿಯಲ್ಲಿ ನಡೆದ ಕಟ್ಟಡ ನಿರ್ಮಾಣದಲ್ಲಿಯೂ ಅಕ್ರಮ ಎಸಗಲಾಗಿದೆ. ನಾನು ಟ್ವೀಟರ್ ಮೂಲಕ ನೀಡಿದ ದೂರಿನ ಮೇರೆಗೆ ಸಿಬಿಐ ದಂಡುಮಂಡಳಿ ಕಚೇರಿ ಮೇಲೆ ದಾಳಿ ನಡೆಸಿದೆ. ದಂಡುಮಂಡಳಿಯ ಎಲ್ಲ ಅವ್ಯವಹಾರ ಕುರಿತು ಸಂಪೂರ್ಣ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದರು.
ಆದರೆ, ಇಂದು ದಂಡುಮಂಡಳಿ ಸಿಇಒ ಕೆ. ಆನಂದ ಅವರು ಅನುಮಾನಾಸ್ಪದವಾಗಿ ಮೃಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದರ ಬೆನ್ನಲ್ಲಿಯೇ ಅವರ ಸಾವಿನ ಸುತ್ತ ಅನುಮಾನದ ಹುತ್ತಗಳು ತೆರೆದುಕೊಂಡಿವೆ. ಸಾವಿಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ.