ಖಾನಾಪುರದಿಂದ ಹೆಮ್ಮಡಗಾ ಗ್ರಾಮಕ್ಕೆ ಹೊಸ ಬಸ್ ಸೇವೆ ಆರಂಭವಾಗಿದ್ದು, ಇದು ಪ್ರತಿನಿತ್ಯ ಎರಡು ಟ್ರಿಪ್ ಸಂಚರಿಸಲಿದೆ. ಇದೇ ವೇಳೆ, ಹತ್ತರಗುಂಜಿ ಮತ್ತು ಮಾಚಾಳಿ-ಸಾತನಾಳಿ ಸೇರಿದಂತೆ ಹಲವು ಗ್ರಾಮಗಳಿಗೆ ಬಸ್ ಸೌಲಭ್ಯ ಒದಗಿಸುವಂತೆ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಬೆಳಗಾವಿ: ಖಾನಾಪುರ ಪಟ್ಟಣದಿಂದ ಭೀಮಗಡ ವನ್ಯಧಾಮ ವ್ಯಾಪ್ತಿಯ ಹೆಮ್ಮಡಗಾ ಗ್ರಾಮಕ್ಕೆ ಜೂ.10ರಿಂದ ಪ್ರತಿನಿತ್ಯ ನಿಯಮಿತವಾದ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಹೆಮ್ಮಡಗಾ ಹಾಗೂ ಸುತ್ತಲಿನ ಗ್ರಾಮಗಳ ಜನರು ಈ ಬಸ್ ಸೇವೆಯ ಪ್ರಯೋಜನ ಪಡೆಯಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಕರೆ ನೀಡಿದರು.
ಬಸ್ ಸಮಯ ಈ ರೀತಿಯಾಗಿದೆ
ಬುಧವಾರ ಹೆಮ್ಮಡಗಾ ಗ್ರಾಮಕ್ಕೆ ಆಗಮಿಸಿದ ಬಸ್ ಸ್ವಾಗತಿಸಿ ಮಾತನಾಡಿದ ಅವರು, ನಿತ್ಯ ಮುಂಜಾನೆ 7ಕ್ಕೆ ಖಾನಾಪುರ ಬಸ್ ನಿಲ್ದಾಣದಿಂದ ಹೊರಡುವ ಬಸ್ ಹರೂರಿ ಕ್ರಾಸ್, ಮಂತುರ್ಗಾ, ಶಿರೋಲಿ, ಡೊಂಗರಗಾಂವ ಕ್ರಾಸ್ ಮಾರ್ಗವಾಗಿ 8ಕ್ಕೆ ಹೆಮ್ಮಡಗಾ ಗ್ರಾಮ ತಲುಪಲಿದೆ. ಅಲ್ಲಿಂದ 8.15ಕ್ಕೆ ಹೊರಟು ಮರಳಿ 9ಕ್ಕೆ ಖಾನಾಪುರ ಪಟ್ಟಣ ತಲುಪಲಿದೆ. ಇದೇ ಬಸ್ ಸಂಜೆ 4ಕ್ಕೆ ಖಾನಾಪುರ-ಹೆಮ್ಮಡಗಾ ನಡುವೆ ಮತ್ತೊಂದು ಟ್ರಿಪ್ ಸಂಚರಿಸಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿಜಯ ಮಾದಾರ, ನಾಗಪ್ಪ ಗಾವಡೆ, ಬಬನ ಗಾವಡೆ, ಮಧುಕರ ಕಾಟಗಾಳಕರ, ಗೋವಿಂದ ದೇಸಾಯಿ, ಅಶೋಕ ಅಯ್ಯರ ಮತ್ತಿತರರು ಇದ್ದರು.
ಹತ್ತರಗುಂಜಿ ಮತ್ತು ಮಾಚಾಳಿ-ಸಾತನಾಳಿ ಗ್ರಾಮಗಳಿಗೆ ಬಸ್ ಸೇವೆ ಒದಗಿಸಲು ಆಗ್ರಹಿಸಿ ಮನವಿ
ಖಾನಾಪುರ: ಪಟ್ಟಣದಿಂದ ಮೂರ‌್ನಾಲ್ಕು ಕಿಮೀ ದೂರದಲ್ಲಿರುವ ಡುಕ್ಕರವಾಡಿ, ಮುಡೇವಾಡಿ ಮತ್ತು ಹತ್ತರಗುಂಜಿ ಗ್ರಾಮಗಳಿಗೆ ಖಾನಾಪುರ ಪಟ್ಟಣದಿಂದ ಹಾಗೂ ಮಾಚಾಳಿ-ಸಾತನಾಳಿ, ಮಾಂಜರಪೈ, ಘಾರ್ಲಿ ಗ್ರಾಮಗಳಿಗೆ ಲೋಂಡಾ-ರಾಮನಗರದಿಂದ ನಿಯಮಿತವಾದ ಬಸ್ ಸೌಲಭ್ಯ ಆರಂಭಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಯೋಜಕ ಸಂಘಟನೆಯ ಪದಾಧಿಕಾರಿಗಳು ಬುಧವಾರ ವಾಯುವ್ಯ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹಿಂಡಲಗಿ, "ಈ ಗ್ರಾಮಗಳಿಗೆ ಕಳೆದ ಹಲವಾರು ವರ್ಷಗಳಿಂದ ಬಸ್ ಸೇವೆ ನೀಡಲಾಗಿಲ್ಲ. ಇದರಿಂದ ಗ್ರಾಮಸ್ಥರು, ರೈತರಿರು ಮತ್ತು ಶಾಲಾ ಕಾಲೇಜುಗಳ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ. ಸಾರಿಗೆ ಸಂಸ್ಥೆಯವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಹತ್ತರಗುಂಜಿ ಮತ್ತು ಸಾತನಾಳಿ-ಮಾಚಾಳಿ ಮಾರ್ಗದಲ್ಲಿ ಬಸ್ ಸೇವೆ ಆರಂಭಿಸಬೇಕು" ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರವಿ ಮಾದರ, ಬಸವರಾಜ ಮಾದರ, ಮಂಜುನಾಥ ಮಾದರ, ಸಂಜಯ ದೇಸಾಯಿ, ಸುಜಾತಾ ದೇಸಾಯಿ, ಪುಂಡಲೀಕ ದಳವಿ ಹಾಗೂ ವಿವಿಧ ಗ್ರಾಮಗಳ ಗ್ರಾಮಸ್ಥರು, ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.


