ನಾನೇ ಹಲವು ಬಾರಿ ಸಮಸ್ಯೆ ಅನುಭವಿಸಿದ್ದೇನೆ, ಶೀಘ್ರವೇ ಪರಿಹಾರ: ಸಂಸದ CN ಮಂಜುನಾಥ್
ಬೆಂಗಳೂರು ಗ್ರಾಮಾಂತರ ಸಂಸದ ಡಾ.ಮಂಜುನಾಥ್ ಅವರು ಆನೇಕಲ್-ಅತ್ತಿಬೆಲೆ ರಸ್ತೆಯಲ್ಲಿನ ರೈಲು ಗೇಟ್ ಬಳಿ ಮೇಲ್ಸೇತುವೆ ನಿರ್ಮಿಸಲು ಸೂಚಿಸಿದ್ದಾರೆ. ಸುಮಾರು ₹70 ಕೋಟಿ ವೆಚ್ಚದ ಈ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಆನೇಕಲ್-ಅತ್ತಿಬೆಲೆ ರಸ್ತೆಯಲ್ಲಿನ ರೈಲು ಗೇಟ್
ಬೆಂಗಳೂರು: ಆನೇಕಲ್-ಅತ್ತಿಬೆಲೆ ರಸ್ತೆಯಲ್ಲಿನ ರೈಲು ಗೇಟ್ ಬಳಿ ಆದಷ್ಟು ಬೇಗ ಮೇಲ್ಸೇತುವೆ ನಿರ್ಮಿಸಲು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಮಂಜುನಾಥ್ ತಿಳಿಸಿದ್ದಾರೆ.
ತಾತ್ಕಾಲಿಕವಾಗಿ ತಡೆಗೆ ಸೂಚನೆ
ಆನೇಕಲ್ ರೈಲು ನಿಲ್ದಾಣ ಕಾಮಗಾರಿ ವೀಕ್ಷಣೆ ಹಾಗೂ ಸಾರ್ವಜನಿಕರಿಂದ ರಸ್ತೆಯ ಅಗಲೀಕರಣ, ಸ್ಟೇಷನ್ ಉನ್ನತೀಕರಣ ಸಮಸ್ಯೆ ಆಲಿಸಿ ಮಾತನಾಡಿ, ಆನೇಕಲ್ ರೈಲು ಗೇಟ್ ರಾಜ್ಯ ಹೆದ್ದಾರಿಯಲ್ಲಿದ್ದು, ನಾನೇ ಹಲವು ಬಾರಿ ಸಮಸ್ಯೆ ಅನುಭವಿಸಿದ್ದೇನೆ. ಗೇಟ್ 112 ಬಳಿ ತಾತ್ಕಾಲಿಕವಾಗಿ ತಡೆ ಕಂಬಿ ಹಾಕಲು ಸೂಚಿಸಿದ್ದು, ವಾಹನ ಸಂಚಾರ ಸ್ವಲ್ಪ ಸುಧಾರಿಸುತ್ತದೆ ಎಂದು ಹೇಳಿದರು.
ಅಂದಾಜು ₹70 ಕೋಟಿ, ಮೇಲ್ಸೇತುವೆ ನಿರ್ಮಾಣ
ಇಲ್ಲಿ ಮೇಲ್ಸೇತುವೆ ನಿರ್ಮಾಣ ಅನಿವಾರ್ಯವಾಗಿದ್ದು, ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಮತ್ತು ರಾಜ್ಯ ಸಚಿವರಾದ ಸೋಮಣ್ಣ ಅವರ ಜೊತೆ ಚರ್ಚಿಸಿರುವೆ. ಇದಕ್ಕಾಗಿ ಅಂದಾಜು ₹70 ಕೋಟಿ ಮಂಜೂರಾಗಿದ್ದು, ಅಧಿಕಾರಿಗಳ ಜೊತೆ ಸಭೆ ನಡೆಸಿ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಡಾ.ಮಂಜುನಾಥ್ ಮಾಹಿತಿ ನೀಡಿದರು.
ಜನವಸತಿ ಪ್ರದೇಶಗಳಿಗೆ ಸುರಕ್ಷಿತ ಸಂಪರ್ಕ
ಇದೇ ವೇಳೆ ಚಿಂತಲಮಡಿವಾಳ, ಗೋಟಮಾರಮ್ಮನಹಳ್ಳಿ, ಲಕ್ಷ್ಮೀನಾರಾಯಣಪುರ ಸೇರಿದಂತೆ ಸುತ್ತಮುತ್ತಲಿನ ಜನವಸತಿ ಪ್ರದೇಶಗಳಿಗೆ ಸುರಕ್ಷಿತ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಹೊಸ RUB/ROB ನಿರ್ಮಾಣದ ಸಾಧ್ಯತೆಗಳ ಬಗ್ಗೆ ಸಂಸದರು ಮಾಹಿತಿ ಪಡೆದುಕೊಂಡರು. ಆನೇಕಲ್ ರಸ್ತೆ ಮತ್ತು ಹುಸ್ಕೂರು ರೈಲ್ವೆ ನಿಲ್ದಾಣಗಳ ನಡುವಿನ ರೈಲ್ವೆ ಮೂಲಸೌಕರ್ಯಗಳ ಸಮಗ್ರ ಪರಿಶೀಲನೆ ನಡೆಸಿ, ಜನರ ಅಗತ್ಯತೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಸಂಸದರಿಗೆ ಸ್ಥಳೀಯ ನಾಯಕರ ಸಾಥ್
ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ , ಆನೇಕಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಹುಲ್ಲಳ್ಳಿ ಶ್ರೀನಿವಾಸ್, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶಿವಪ್ಪ, ಆನೇಕಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಅಶೋಕ್ ರೆಡ್ಡಿ,ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಅರವಿಂದ್ ರೆಡ್ಡಿ, ಎನ್‌ಡಿಎ ಮೈತ್ರಿಕೂಟದ ಮುಖಂಡರು ಉಪಸ್ಥಿತರಿದ್ದರು.

