ಮುಸ್ಲಿಮರಿಂದ ದರ್ಗಾ ಗಲ್ಲಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಕೆ!
ಬೆಳಗಾವಿಯಲ್ಲಿ ಹಿಂದೂ - ಮುಸ್ಲಿಮರು ಭಾವೈಕ್ಯತೆಯಿಂದ ದರ್ಗಾದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಕೆ ಮಾಡಿದ್ದಾರೆ.
ಚಿಕ್ಕೋಡಿ (ಸೆ.08): ಬೆಳಗಾವಿಯಲ್ಲಿ ಹಿಂದೂ - ಮುಸ್ಲಿಮರು ಭಾವೈಕ್ಯತೆಯಿಂದ ದರ್ಗಾದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ದೇಶದಲ್ಲಿ ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣಬೇಕು ಎಂದು ಸರ್ವಧರ್ಮ ಸಮಾಭಾವದ ಸಂದೇಶ ಸಾರುತ್ತಿದ್ದ ಅನೇಕ ಮಹಾನ್ ವ್ಯಕ್ತಿಗಳ ಕಸನು ಕೊನೆಗೂ ನನಸಾಗಿದೆ.
ಬ್ರಿಟೀಷರ ಆಡಳಿತದಲ್ಲಿ ನಲುಗುತ್ತಿದ್ದ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಬಾಲಗಂಗಾಧರ ತಿಲಕ್ ಸೇರಿದಂತೆ ಅನೇಕ ನಾಯಕರು ದೇಶದ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸುವ ಉದ್ದೇಶದಿಂದ ಸಂಘನೆಯಾಗಲು ಗಣೇಶ ಹಬ್ಬವನ್ನು ಆಚರಣೆ ಮಾಡಲು ಮುಂದಾದರು ಎಂಬ ಇತಿಹಾಸವಿದೆ. ಇದಾದ ನಂತರ ದೇಶದ ಎಲ್ಲ ಮಹಾನಗರಗಳು, ನಗರ, ಪಟ್ಟಣಗಳು ಹಾಗೂ ಗ್ರಾಮೀಣ ಭಾಗದ ಗಲ್ಲಿ ಗಲ್ಲಿಗಳಲ್ಲಿಯೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಲಾಗುತ್ತಿದೆ. ಗಣೇಶ ಹಬ್ಬ ದೇಶದ ಸಾರ್ವತ್ರಿಕ ಹಬ್ಬದಂತೆ ಆಚರಣೆ ಮಾಡಲಾಗುತ್ತಿದೆ.
ಗಣೇಶ ಹಬ್ಬವನ್ನು ಹಿಂದೂಗಳು ಆಚರಣೆ ಮಾಡುತ್ತಾರೆ. ಮನೆ ಮನೆಗಳಿಂದ ಪಟ್ಟಿಯನ್ನು ಸಂಗ್ರಹಿಸಿ, ಜೊತೆಗೆ ತಾವೊಂದಿಷ್ಟು ಹಣವನ್ನು ಹಾಕಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಅದನ್ನು ಪೂಜಿಸಿ ನಂತರ ವಿಸರ್ಜನೆ ಮಾಡಿ ಬರುತ್ತಾರೆ. ಆದರೆ, ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಉಗಾರ ಬುದ್ರುಕ್ ಗ್ರಾಮದಲ್ಲಿ ಹಿಂದೂಗಳ ಜೊತೆಗೆ ಮುಸ್ಲಿಂ ಯುವಜನರು ಸೇರಿಕೊಂಡು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಗಣೇಶ ಮೂರ್ತಿ ತರಲು, ಪೂಜೆ ಮಾಡಲು ಹಾಗೂ ವಿಸರ್ಜನೆ ಮಾಡುವ ಕಾರ್ಯದಲ್ಲಿಯೂ ಮುಸ್ಲಿಂ ಯುವಕರು ಸಾಥ್ ನೀಡಿದ್ದಾರೆ.
ಜರ್ಮನ್ ಖ್ಯಾತ ಯ್ಯೂಟೂಬರ್ ಯೂನೆಸ್ ಜರೂ ನಟ ಪುನೀತ್ ರಾಜ್ ಕುಮಾರ್ ಅಭಿಮಾನಿ!
ಹಿಂದೂ ಮುಸ್ಲಿಂ ಭಾವೈಕ್ಯತೆ ಗ್ರಾಮ: ನಮ್ಮ ಕರ್ನಾಟಕ ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಹಿಂದೂ ಮುಸ್ಲಿಂ ನಡುವೆ ಸಾಮರಸ್ಯ ಕೊರತೆ ಕಂಡುಬರುತ್ತಿದೆ. ಅದರಲ್ಲಿಯೂ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಬೆರಳೆಣಿಕೆ ಜನರು ಹಿಂದೂ ಮುಸ್ಲಿಂ ಸಮುದಾಯವರೆಂದರೆ ಬದ್ಧ ವೈರಿಗಳಂತೆ ನೋಡುತ್ತಾರೆ. ಆದರೆ, ಬೆಳಗಾವಿಯ ಉಗಾರ ಬುದ್ರುಕ್ ಗ್ರಾಮದ ದರ್ಗಾ ಗಲ್ಲಿಯಲ್ಲಿ ಗಣೇಶ ಮೂರ್ತಿ ಕೂರಿಸಿ ಪೂಜೆ ಸಲ್ಲಕೆ ಮಾಡುವ ಮೂಲಕ ಹಿಂದೂ ಮುಸ್ಲಿಮರು ಭಾವೈಕ್ಯತೆ ಸಾರಿದ್ದಾರೆ. ಈ ಗ್ರಾಮದಲ್ಲಿ ಕಳೆದ 6 ವರ್ಷಗಳಿಂದ ಹಿಂದೂ ಮುಸ್ಲಿಂ ಯುವಕರು ಸೇರಿ ಗಣೇಶನನ್ನು ಕೂರಿಸುತ್ತಿದ್ದಾರೆ.
ಕೊಪ್ಪಳ: ಮಸೀದಿ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಭಾವೈಕ್ಯತೆಗೆ ಸಾಕ್ಷಿಯಾದ ಹನುಮಸಾಗರ ಗ್ರಾಮ
ಈ ಕುರಿತು ಮಾತನಾಡಿದ ಗ್ರಾಮಸ್ಥರೊಬ್ಬರು ನಮ್ಮ ಊರಿನಲ್ಲಿ ಗಣೇಶ ಹಬ್ಬದ ಆಚರಣೆಯನ್ನು ಮುಸ್ಲಿಮರು ಕೂಡ ತಮ್ಮದೇ ಧರ್ಮದ ಹಬ್ಬದಂತೆ ಆಚರಣೆ ಮಾಡುತ್ತಾರೆ. ಜೊತೆಗೆ, ಹಿಂದೂಗಳಾದ ನಾವು ಕೂಡ ಮುಸ್ಲಿಂರ ಹಬ್ಬಗಳಾದ ಉರುಸ್, ಇದ್ ಮಿಲಾದ್ ಸೇರಿದಂತೆ ಎಲ್ಲ ಹಬ್ಬಗಳನ್ನು ಆಚರಣೆ ಮಾಡುತ್ತೇವೆ. ನಾವೆಲ್ಲರೂ ಏಕತೆ ಭಾವದಿಂದ ಬೇಧ-ಭಾವ ಮಾಡದೇ ಹಬ್ಬ ಆಚರಿಸ್ತೇವೆ ಎಂದರು. ನಂತರ ಮಾತನಾಡಿದ ಮುಸ್ಲಿಂ ಬಾಂಧವ ವ್ಯಕ್ತಿಯೊಬ್ಬ, ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಕೋಮು ಸೌಹಾರ್ದತೆಯಿಂದ ಹಿಂದೂ- ಇಸ್ಲಾಂ ಧರ್ಮದ ಹಬ್ಬವನ್ನು ಆಚರಣೆ ಮಾಡ್ತೇವೆ ಎಂದು ಹೇಳಿದರು.