ಸಂಸದ ಜಗದೀಶ ಶೆಟ್ಟರ ಅವರು ಬೆಳಗಾವಿ-ಕಿತ್ತೂರು-ಧಾರವಾಡ ನೂತನ ರೈಲು ಮಾರ್ಗ, ಆರು ಪಥದ ಹೆದ್ದಾರಿ, ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಭೂಸ್ವಾಧೀನ, ಕಾಮಗಾರಿ ವಿಳಂಬ  ಹಲವು ಅಡಚಣೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು  

ಬೆಳಗಾವಿ: ಬೆಳಗಾವಿ-ಕಿತ್ತೂರು- ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಂಸದ ಜಗದೀಶ ಶೆಟ್ಟರ ಪ್ರಗತಿ ಪರಿಶೀಲನೆ ನಡೆಸಿದರು. ನಗರದಲ್ಲಿ ವಿವಿಧ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆಯಲ್ಲಿ ಮಾತನಾಡಿದ ಅವರು, ಬೆಳಗಾವಿ- ಕಿತ್ತೂರು- ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಸುಮಾರು 1200 ಎಕರೆ ಜಮೀನು ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ, ಈಗಾಗಲೇ ಸುಮಾರು 407 ಎಕರೆ ಜಮೀನು ಭೂಸ್ವಾಧೀನಕ್ಕೆ ರೈತರಿಗೆ ಹಂಚಲು ಅಂದಾಜು ₹ 149 ಕೋಟಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಂತಿನ ಅಧಿಸೂಚನೆ ಹೊರಡಿಸಿದ ಬಳಿಕ ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರ ಮಾಡಲು, ಟೆಂಡರ್‌ ಕರೆಯಲಾಗುವುದು ಎಂದರು.

ಬೆಳಗಾವಿ ಟಿಳಕವಾಡಿ ಹತ್ತಿರ ಎಲ್.ಸಿ ನಂ:381 ಬಳಿ ಎರಡನೆಯ ಲೈನ್ ನಿರ್ಮಾಣಕ್ಕೆ ಅಗತ್ಯ ವಾಹನ ಸಂಚಾರ ಮಾರ್ಗ ಬದಲಿಸಲು ಪೊಲೀಸ್‌ ಆಯುಕ್ತರಿಂದ ಪರವಾನಗಿ ಕೇಳಿರುವ ಬಗ್ಗೆ ರೇಲ್ವೆ ಅಧಿಕಾರಿಗಳು ತಿಳಿಸಿದ್ದು, ಶೀಘ್ರ ಕಾಮಗಾರಿ ಪ್ರಾರಂಭಿಸುವ ಬಗ್ಗೆ ನನ್ನ ಗಮನಕ್ಕೆ ತಂದರು. ಅದರಂತೆ ಎಲ್.ಸಿ ನಂ:382 ಮತ್ತು 383 ಹತ್ತಿರ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಕೆಲವು ಅಡತಡೆಗಳಿವೆ. ಅವುಗಳನ್ನು ಬಗಿಹರಿಸಿ ಶೀಘ್ರ ಕಾಮಗಾರಿ ಪ್ರಾರಂಭಿಸುವುದಾಗಿ ರೇಲ್ವೆ ಅಧಿಕಾರಿಗಳು ತಿಳಿಸಿದರು.

ಸುಳೇಭಾವಿ ಗ್ರಾಮದ ಹತ್ತಿರ ರೇಲ್ವೆ ಇಲಾಖೆ ನಿರ್ಮಿಸಿದ ರಸ್ತೆ ಮೇಲ್ಸೇತುವೆ ರೈತರಿಗೆ ಅವರ ಹೊಲಗಳಿಗೆ ಹೋಗಲು-ಬರಲು, ಫಸಲು ಸಾಗಿಸಲು ಇರುವ ಅನಾನುಕೂಲತೆ ನಿವಾರಿಸಲು ರೇಲ್ವೆ ಇಲಾಖೆ ಕೈಕೊಂಡ ಕ್ರಮದ ಬಗ್ಗೆ ಮಾಹಿತಿ ಪಡೆಯಲಾಗಿದೆ. ಈ ಕುರಿತು ಮುಂದಿನ ದಿನಗಳಲ್ಲಿ ರೈತರಿಗೆ ಶೀಘ್ರ ಅನುಕೂಲತೆ ಕಲ್ಪಿಸಿ ಕೊಡುವ ಭರವಸೆಯನ್ನು ರೇಲ್ವೆ ಅಧಿಕಾರಿಗಳು ನೀಡಿದರು.

ಖಾನಾಪೂರ ಹತ್ತಿರ ರೇಲ್ವೆ ಇಲಾಖೆ ರಸ್ತೆ ಮೇಲ್ಸೇತುವೆ ನಿರ್ಮಿಸುತ್ತಿದ್ದು, ಬೆಳಗಾವಿ ಅರಣ್ಯ ವಿಭಾಗದ ಅಧಿಕಾರಿಗಳು ಅನುಮತಿ ನೀಡದಿರುವುದರಿಂದ ಕಾಮಗಾರಿ ಪ್ರಾರಂಭಕ್ಕೆ ಅಡೆತಡೆವುಂಟಾದ ಬಗ್ಗೆ ರೇಲ್ವೆ ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದು, ಅವರಿಗೆ ಅಗತ್ಯ ಅನುಮೋದನೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ನೀಡುವಂತೆ ಸೂಚಿಸಲಾಗಿದೆ ಎಂಬುದನ್ನು ತಿಳಿಸಿದರು.

ಆರು ಪಥದ ಹೆದ್ದಾರಿ ಕಾಮಗಾರಿ ಶೀಘ್ರ ಮುಗಿಸುವಂತೆ ಸೂಚನೆ

ಅಲ್ಲದೇ, ಬೆಳಗಾವಿ - ಸಂಕೇಶ್ವರ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸುತ್ತಿರುವ ಆರು ಪಥದ ಹೆದ್ದಾರಿ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದೆ. ಇದರಿಂದಾಗಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಿ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಹಲಗಾ - ಮಚ್ಚೆ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವ ಕೊನೆಯ ದಿನಾಂಕ ಮುಕ್ತಾಯವಾಗಿ ವರ್ಷ ಕಳೆದಿದೆ. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು. ಮತ್ತು ಬೆಳಗಾವಿ - ಹುನಗುಂದ - ರಾಯಚೂರು ರಸ್ತೆ ನಿರ್ಮಾಣ ವಿಷಯವಾಗಿ ಫೇಸ್-1ರಡಿ 43.8 ಕಿ.ಮೀ ರಸ್ತೆ ಕಾಮಗಾರಿಗೆ ಈಗಾಗಲೇ 35 ಕಿಲೋಮೀಟರ್ ಉದ್ದಕ್ಕೆ ಭೂಸ್ವಾಧೀನ ಕಾರ್ಯ ಮುಕ್ತಾಯವಾಗಿದೆ. ಬರುವ ದಿನಗಳಲ್ಲಿ ಬಾಕಿ ಭೂ ಪ್ರದೇಶವನ್ನು ಸ್ವಾಧೀನ ಪಡೆಸಿಕೊಂಡು ಕಾಮಗಾರಿ ಪ್ರಾರಂಭಿಸುವ ಬಗ್ಗೆ ಭರವಸೆಯನ್ನು ನೀಡಿದರು.

ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ವಾಯು ಸೇನಾಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ

ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ಅಗತ್ಯವಿರುವ ಭೂಮಿಯನ್ನು ವಾಯುಸೇನೆ ನೀಡಬೇಕಿದೆ. ಆದರೆ, ವಾಯು ಸೇನಾಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ, ಇದರಿಂದಾಗಿ ಅಭಿವೃದ್ಧಿ ಕಾರ್ಯ ನಿಧಾನವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದಾಗ, ಈ ವಿಷಯವಾಗಿ ರಕ್ಷಣಾ ಸಚಿವರ ಗಮನ ಸೆಳೆಯುವುದಾಗಿ ಮತ್ತು ಸಂಸದೀಯ ರಕ್ಷಣಾ ಸಮಿತಿ ಸದಸ್ಯರಾಗಿರುವುದರಿಂದ ಸಮಿತಿಯ ಗಮನಕ್ಕೂ ಈ ವಿಷಯವನ್ನು ತಂದು, ಬೇಗ ಇತ್ಯರ್ಥಪಡಿಸುವುದಾಗಿ ತಿಳಿಸಿದರು.

ಈ ಸಭೆಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಗಳಾದ ಜೈನಾಪೂರ, ಚೌಹಾಣ, ಕವಿತಾ ಯೋಗಪ್ಪನವರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಭುವನೇಶ ಕುಮಾರ, ವಿಮಾನಯಾನ ಪ್ರಾಧಿಕಾರದ ನಿರ್ದೇಶಕ ತ್ಯಾಗರಾಜನ್ ಹಾಜರಿದ್ದರು.