ಬೆಳಗಾವಿ (ಮಾ.13):  ಮಹಾರಾಷ್ಟ್ರದಲ್ಲಿ ಕೊರೊನಾ‌ ಆರ್ಭಟ ಜೋರಾಗಿದ್ದರೂ ಬೆಳಗಾವಿ ಜಿಲ್ಲಾಡಳಿತ ಮಾತ್ರ  ಎಚ್ಚೆತ್ತುಕೊಂಡಿಲ್ಲ.  ಬೆಳಗಾವಿ ಹೊರವಲಯದ ಶಿನೋಳಿ ಚೆಕ್‌ಪೋಸ್ಟ್ ಬಳಿ ದಿವ್ಯನಿರ್ಲಕ್ಷ್ಯ ಕಂಡು ಬರುತ್ತಿದ್ದು ಮಹಾರಾಷ್ಟ್ರದಿಂದ ಆಗಮಿಸುವವರಿಗೆ ಕಟ್ಟುನಿಟ್ಟಾಗಿ ಆರೋಗ್ಯ ತಪಾಸಣೆಯೇ ನಡೆಸುತ್ತಿಲ್ಲ.

ಕಾಟಾಚಾರಕ್ಕೆ ಶಿನೋಳಿ ಚೆಕ್‌ಪೋಸ್ಟ್ ಬಳಿ ಆರೋಗ್ಯ ತಪಾಸಣೆ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ಚೆಕ್‌ಪೋಸ್ಟ್ ಬಳಿ‌ ಕೇವಲ ಇಬ್ಬರೇ ಇಬ್ಬರು ಸಿಬ್ಬಂದಿ ನೇಮಕ ಮಾಡಲಾಗಿದೆ. ಓರ್ವ ಆರೋಗ್ಯ ಇಲಾಖೆ ಸಿಬ್ಬಂದಿ, ಓರ್ವ ಪೇದೆ ಮಾತ್ರ ನೇಮಿಸಿದ್ದು,  ಮಹಾರಾಷ್ಟ್ರ ಪಾಸಿಂಗ್ ವಾಹನಗಳಲ್ಲಿ ಬರುವ ಪ್ರಯಾಣಿಕರ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.  ಕೇವಲ ಮಾಹಿತಿ ಸಂಗ್ರಹಿಸಿ ರಾಜ್ಯದೊಳಗೆ ಮಹಾರಾಷ್ಟ್ರ ಪ್ರಯಾಣಿಕರಿಗೆ ಪ್ರವೇಶ ನೀಡಲಾಗುತ್ತಿದೆ.

'ಮಹಾ' ದಲ್ಲಿ ಲಾಕ್‌ಡೌನ್, ಬಳ್ಳಾರಿಯಲ್ಲಿ ಆಫ್ರಿಕಾ ವೈರಸ್, ವ್ಯಾಕ್ಸಿನ್‌ಗೆ ಸವಾಲು..! ..

ಆರ್‌ಟಿಪಿಸಿಆರ್ ವರದಿ ಇದೆಯೋ ಇಲ್ವೋ ಎಂಬುದನ್ನೇ ಚೆಕ್ ಮಾಡುತ್ತಿಲ್ಲ. ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ವಾಹನಗಳು ಸಹ ಬಿಂದಾಸ್ ಆಗಿ ಪ್ರವೇಶಿಸುತ್ತಿದ್ದು, ವಾಹನಗಳು ಹೆಚ್ಚು ಬರುತ್ತಿದ್ದು ನಾನು ಒಬ್ಬನೇ  ಎಷ್ಟೆಂದು ಮಾಡಲಿ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

ನಿನ್ನೆ ಮಹಾರಾಷ್ಟ್ರದಲ್ಲಿ ಒಂದೇ ದಿನ 15,817 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು,   56 ಜನರು ಸಾವಿಗೀಡಾಗಿದ್ದಾರೆ.  ಮಹಾರಾಷ್ಟ್ರದಲ್ಲಿ ಈಗಾಗಲೇ 1 ಲಕ್ಷ 10 ಸಾವಿರದ 485 ಕೊರೊನಾ ಪಾಸಿಟಿವ್ ಆ್ಯಕ್ಟೀವ್ ಕೇಸ್ ಇದ್ದು, ಬೆಳಗಾವಿ ಜಿಲ್ಲಾಡಳಿತ ಮಾತ್ರ ಡೋಂಟ್ ಕೇರ್ ಎನ್ನುವಂತಿದೆ. ಅಲ್ಲಿ ದಿನ ದಿನ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಬೆಳಗಾವಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದಲ್ಲಿ ಅಪಾಯ ಖಂಡಿತವಾಗಿದೆ.