ಬೆಳಗಾವಿ (ಮಾ.30):  ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸತೀಶ್‌ ಜಾರಕಿಹೊಳಿ ಒಟ್ಟು ಆಸ್ತಿಯ ಮೌಲ್ಯ  126.82 ಕೋಟಿ ರು. ಆಗಿದ್ದು, ಎರಡೇ ವರ್ಷದಲ್ಲಿ ಅವರ ಆಸ್ತಿ ಮೌಲ್ಯ 95.82 ಕೋಟಿಯಷ್ಟುಹೆಚ್ಚಳವಾಗಿದೆ. 

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯ ವೇಳೆ ಸತೀಶ್‌ ಜಾರಕಿಹೊಳಿ ತಮ್ಮ ಆಸ್ತಿಯ ಮೌಲ್ಯ 31 ಕೋಟಿ ರು. ಎಂದು ಘೋಷಿಸಿದ್ದರು. ಸೋಮವಾರ ಜಿಲ್ಲಾ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರದ ಜೊತೆಗೆ ಸಲ್ಲಿಸರುವ ಅಫಿಡವಿಟ್‌ನಲ್ಲಿ ಅವರು ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ.

 ಸತೀಶ್‌ ಜಾರಕಿಹೊಳಿ ಅವರ ಹೆಸರಿನಲ್ಲಿ  13.62 ಕೋಟಿ ರು. ಚರಾಸ್ತಿ ಮತ್ತು  113.20 ಕೋಟಿ ರು. ಸ್ಥಿರಾಸ್ತಿ ಇದೆ. ಅವರ ಪತ್ನಿ ಶಕುಂತಲಾ ಜಾರಕಿಹೊಳಿ ಹೆಸರಿನಲ್ಲಿ 6.70 ಕೋಟಿ ರು. ಚರಾಸ್ತಿ,  7.27 ಕೋಟಿ ರು. ಸ್ಥಿರಾಸ್ತಿ ಇದೆ. ಪುತ್ರಿ ಪ್ರಿಯಾಂಕಾ ಹೆಸರಿನಲ್ಲಿ  3.13 ಕೋಟಿ ರು. ಚರಾಸ್ತಿ,  48.46 ಲಕ್ಷ ಸ್ಥಿರಾಸ್ತಿ ಇದ್ದರೆ, ಪುತ್ರ ರಾಹುಲ್‌ ಜಾರಕಿಹೊಳಿ ಹೆಸರಿನಲ್ಲಿ  1.89 ಕೋಟಿ ಚರಾಸ್ತಿ,  2.10 ಕೋಟಿ  ರು. ಸ್ಥಿರಾಸ್ತಿ ಇದೆ. ಈ ಮೂಲಕ ಸತೀಶ ಅವರ ಕುಟುಂಬದ ಒಟ್ಟು ಆಸ್ತಿಯ ಮೌಲ್ಯ  148.42 ಕೋಟಿ ರು. ಆಸ್ತಿಯಿದೆ.

ಕಾಂಗ್ರೆಸ್‌ಗೆ ಶುರುವಾಗಿದೆ ಸೋಲಿನ ಭೀತಿ ...

 6.75 ಕೋಟಿ ಸಾಲ:  ಕೋಟ್ಯಧೀಶರಾಗಿದ್ದರೂ ಸತೀಶ ಅವರ ಹೆಸರಿನಲ್ಲಿ  6.75 ಕೋಟಿ ರು, ಪತ್ನಿ ಹೆಸರಿನಲ್ಲಿ 4.48 ಕೋಟಿ, ಪುತ್ರಿ ಹೆಸರಿನಲ್ಲಿ 2.34 ಕೋಟಿ ಮತ್ತು ಪುತ್ರನ ಹೆಸರಿನಲ್ಲಿ  1.83 ಕೋಟಿ ರು. ಸೇರಿದಂತೆ ವಿವಿಧ ಬ್ಯಾಂಕ್‌ ಹಾಗೂ ಸೊಸೈಟಿಗಳಲ್ಲಿ ಒಟ್ಟು  15.41 ಕೋಟಿ ಸಾಲ ಮಾಡಿದ್ದಾರೆ.

 ವಿಧಾನಸಭೆ ಚುನಾವಣೆ ವೇಳೆ  31 ಕೋಟಿ ಆಸ್ತಿ ಘೋಷಿಸಿಕೊಂಡಿದ್ದ ಕೈ ಅಭ್ಯರ್ಥಿ :  ಸತೀಶ ಅವರ ಕೈಯಲ್ಲಿ  5,04,630 ರು., ಪತ್ನಿ ಬಳಿ  90,889 ರು., ಪುತ್ರಿ ಬಳಿ  9465 ರು. ಮತ್ತು ಪುತ್ರನ ಬಳಿ  18,350 ರು. ನಗದು ಹಣವಿದೆ. ಸತೀಶ ಜಾರಕಿಹೊಳಿ ಅವರು ಪತ್ನಿಗೆ  2,10,53,610 ರು. ಮತ್ತು ಪುತ್ರಿಗೆ  1,63,03,610 ರು. ಕೈಗಡ ಸಾಲವನ್ನು ನೀಡಿದ್ದಾರೆ.

2018ರಲ್ಲಿ ಅಫಿಡವಿಟ್‌ನಲ್ಲಿ ಅವರು ಚರಾಸ್ತಿ  11,99,24,094 ರು., ಸ್ಥಿರಾಸ್ತಿ  19,01,16,793 ರು. ಮೊತ್ತದ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದರು. ಈ ಮೂಲಕ  31 ಕೋಟಿ ರು. ಆಸ್ತಿಯ ಒಡೆಯನಾಗಿದ್ದ ಸತೀಶ ಜಾರಕಿಹೊಳಿ ಕೇವಲ ಎರಡು ವರ್ಷಗಳಲ್ಲಿ 95.82 ಕೋಟಿ ರು. ಆಸ್ತಿಯನ್ನು ಸಂದಾಪನೆ ಮಾಡಿರುವುದು ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಿಂದ ತಿಳಿದುಬಂದಿದೆ.