ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಲ್ಲಿ, ದಳ್ಳಾಳಿಗಳು ಮಹಾರಾಷ್ಟ್ರದ ಕ್ಯಾರೆಟ್ ಆಮದು ಮಾಡಿಕೊಂಡು ಸ್ಥಳೀಯ ಬೆಳೆಗೆ ಕೃತಕವಾಗಿ ಬೆಲೆ ಕುಸಿತ ಸೃಷ್ಟಿಸಿದ್ದಾರೆ. ಇದನ್ನು ಖಂಡಿಸಿ ರೈತರು ಪ್ರತಿಭಟನೆ ನಡೆಸಿದ್ದು, ಸ್ಥಳೀಯ ಕ್ಯಾರೆಟ್‌ಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿದ್ದಾರೆ.
ಬೆಳಗಾವಿ (ಜ.07): ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಆವರಣದಲ್ಲಿ ದಳ್ಳಾಳಿಗಳ ಅಕ್ರಮ ಕೂಟವೊಂದು ಸ್ಥಳೀಯ ರೈತರನ್ನು ಹತ್ತಿಕ್ಕಲು ನಡೆಸುತ್ತಿರುವ 'ಕುತಂತ್ರ' ಈಗ ಬಯಲಾಗಿದೆ. ಬೆಲೆ ಕುಸಿತದ ನೆಪವೊಡ್ಡಿ ಸ್ಥಳೀಯ ಕ್ಯಾರೆಟ್ ಬೆಳೆಗಾರರಿಗೆ ಅನ್ಯಾಯ ಮಾಡುತ್ತಿರುವುದನ್ನು ಖಂಡಿಸಿ ರೈತರು ಬುಧವಾರ ಮಾರುಕಟ್ಟೆ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸಿದರು.
ಘಟನೆಯ ವಿವರ:
ಕಳೆದ ಕೆಲವು ದಿನಗಳಿಂದ ಬೆಳಗಾವಿ ಮಾರುಕಟ್ಟೆಯಲ್ಲಿ ಕ್ಯಾರೆಟ್ ಬೆಲೆ ಉತ್ತಮವಾಗಿಯೇ ಇತ್ತು. ಮಂಗಳವಾರದವರೆಗೆ ಪ್ರತಿ 10 ಕೆಜಿ ಕ್ಯಾರೆಟ್‌ಗೆ ಅಂದಾಜು 350 ರೂಪಾಯಿ ದರವಿತ್ತು. ಆದರೆ, ಈ ಬೆಲೆಯನ್ನು ಕೃತಕವಾಗಿ ಕುಗ್ಗಿಸಲು ಮುಂದಾದ ದಳ್ಳಾಳಿಗಳು, ಪಕ್ಕದ ಮಹಾರಾಷ್ಟ್ರದ ನಾಸಿಕ್‌ನಿಂದ ಕ್ಯಾರೆಟ್ ಆಮದು ಮಾಡಿಕೊಳ್ಳುವ ಮೂಲಕ ಸ್ಥಳೀಯ ಮಾರುಕಟ್ಟೆಯ ಮೇಲೆ ಪ್ರಹಾರ ನಡೆಸಿದ್ದಾರೆ. ನಾಸಿಕ್‌ನಿಂದ ತರಿಸಲಾದ ಕ್ಯಾರೆಟ್‌ಗೆ ಕೇವಲ 180 ರೂಪಾಯಿ (10 ಕೆಜಿಗೆ) ನಿಗದಿಪಡಿಸುವ ಮೂಲಕ ಸ್ಥಳೀಯ ಬೆಳೆಗಾರರ ಬೆಲೆಗೂ ಕತ್ತರಿ ಹಾಕಲು ದಳ್ಳಾಳಿಗಳು ಸಂಚು ರೂಪಿಸಿದ್ದಾರೆ ಎಂಬುದು ರೈತರ ಗಂಭೀರ ಆರೋಪವಾಗಿದೆ.
ರೈತರ ಆಕ್ರೋಶ
ದಳ್ಳಾಳಿಗಳ ಈ ದ್ವಂದ್ವ ನೀತಿಯಿಂದ ಕಂಗಾಲಾದ ಸ್ಥಳೀಯ ರೈತರು, ಮಹಾರಾಷ್ಟ್ರದಿಂದ ಕ್ಯಾರೆಟ್ ಹೊತ್ತು ತಂದ ವಾಹನಗಳನ್ನು ಎಪಿಎಂಸಿ ಆವರಣದ ಹೊರಗೆಯೇ ತಡೆದು ಆಕ್ರೋಶ ಹೊರಹಾಕಿದರು. 'ನಾವು ರಕ್ತ ಸುರಿಸಿ ಬೆಳೆದ ಬೆಳೆಗೆ ಇಲ್ಲಿ ಬೆಲೆ ಇಲ್ಲದಂತಾಗಿದೆ. ಹೊರ ರಾಜ್ಯದ ಉತ್ಪನ್ನಗಳನ್ನು ತರಿಸಿ ನಮ್ಮ ಹೊಟ್ಟೆ ಮೇಲೆ ಹೊಡೆಯಲಾಗುತ್ತಿದೆ' ಎಂದು ಪ್ರತಿಭಟನಾ ನಿರತ ರೈತರು ಕಿಡಿಕಾರಿದರು.
ಪ್ರಮುಖ ಬೇಡಿಕೆಗಳು:
- ಸ್ಥಳೀಯ ಕ್ಯಾರೆಟ್‌ಗೆ ನಿನ್ನೆಯ ದರವಾದ 350 ರೂ. (10 ಕೆಜಿಗೆ) ನೀಡಿಯೇ ಖರೀದಿ ಮಾಡಬೇಕು.
- ಸ್ಥಳೀಯ ಬೆಳೆಗಳು ಮಾರುಕಟ್ಟೆಯಲ್ಲಿರುವಾಗ ಹೊರ ರಾಜ್ಯದಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು.
- ರೈತರನ್ನು ಶೋಷಿಸುವ ದಳ್ಳಾಳಿಗಳ ವಿರುದ್ಧ ಎಪಿಎಂಸಿ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು.
- ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಅಧಿಕಾರಿಗಳು ಮಧ್ಯಪ್ರವೇಶಿಸಿ ರೈತರ ಹಿತರಕ್ಷಣೆ ಮಾಡದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.


