'BJP ಬಗ್ಗೆ ಎಚ್ಚರವಾಗಿರುವುದೇ ಭವಿಷ್ಯದ ದೊಡ್ಡ ಸವಾಲು'
ಅಂಬೇಡ್ಕರ್ ಆಶಯದಂತೆ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸವಲತ್ತುಗಳನ್ನು ರದ್ದುಪಡಿಸಿರುವುದಾಗಿ ಹೇಳುತ್ತಿರುವುದು ಸುಳ್ಳಿನ ಕಂತೆ. ಬಿಜೆಪಿ ವಿರುದ್ಧ ಎಚ್ಚರವಾಗಿರುವುದೇ ಭವಿಷ್ಯದ ದೊಡ್ಡ ಸವಾಲು ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ಸಿ.ಕೆ.ಮಹೇಶ್ ಹೇಳಿದರು.
ಚಿತ್ರದುರ್ಗ(ಸೆ.09): ಅಂಬೇಡ್ಕರ್ ಆಶಯದಂತೆ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸವಲತ್ತುಗಳನ್ನು ರದ್ದುಪಡಿಸಿರುವುದಾಗಿ ಹೇಳುತ್ತಿರುವುದು ಸುಳ್ಳಿನ ಕಂತೆ ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ಸಿ.ಕೆ.ಮಹೇಶ್ ಹೇಳಿದರು.
ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ಪತ್ರಕರ್ತರ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಆರ್ಥಿಕ ಕುಸಿತ, ಉದ್ಯೋಗಗಳ ಕಡಿತ ಹಾಗೂ 370 ವಿಧಿ ಕುರಿತ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ವಿರುದ್ಧ ಎಚ್ಚರವಾಗಿರುವುದೇ ಭವಿಷ್ಯದ ದೊಡ್ಡ ಸವಾಲು ಎಂದರು.
ದಲಿತರನ್ನು ಸೆಳೆಯುವ ತಂತ್ರ:
ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಧಿ ವಿಶೇಷ ಸವಲತ್ತನ್ನು ಅಂಬೇಡ್ಕರ್ ಒಪ್ಪಿರಲಿಲ್ಲ. ಈ ಅಂಶವೊಂದನ್ನೇ ಪ್ರಧಾನವಾಗಿರಿಸಿಕೊಂಡು ಅವರ ಕನಸಿನಂತೆ 370 ವಿಧಿಯನ್ನು ರದ್ದುಪಡಿಸಿದ್ದೇವೆ ಎಂದು ಹೇಳುತ್ತ ದಲಿತರು, ಹಿಂದುಳಿದವರನ್ನು ತನ್ನತ್ತ ಸೆಳೆದುಕೊಳ್ಳುವ ತಂತ್ರಗಾರಿಕೆಯನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ಮಾಡುತ್ತಿದೆ ಎಂದರು.
ಅಂಬೇಡ್ಕರ್ ಹೋರಾಟ ನುಂಗಲಾಗಲ್ಲ:
ಜಮ್ಮು-ಕಾಶ್ಮೀರಕ್ಕೆ ಅದ್ಭುತವಾದ ಸಾಂಸ್ಕೃತಿಕ ನೆಲೆ ಇದೆ. ರಾಜರು ಆಳ್ವಿಕೆಯುಳ್ಳ ಪ್ರದೇಶ ಹಾಗೂ ಬುದ್ಧನ ನೆಲೆಯಾಗಿತ್ತು. ಜಮ್ಮು-ಕಾಶ್ಮೀರವನ್ನು ಕೇವಲ 75 ಲಕ್ಷ ರು.ಗಳಿಗೆ ಒಬ್ಬ ದೊರೆ ಮತ್ತೊಬ್ಬ ದೊರೆಗೆ ಮಾರಾಟ ಮಾಡಿದರೆಂಬುದನ್ನು ಇತಿಹಾಸ ಹೇಳುತ್ತದೆ. ನೆಹರು, ಸರ್ದಾರ್ ವಲ್ಲಭಾಯಿಪಟೇಲ್ ಅವರು ಅಂತಾರಾಷ್ಟ್ರೀಯ ಒತ್ತಡವನ್ನು ಮೀರಿ ಜಮ್ಮು-ಕಾಶ್ಮೀರವನ್ನು ಭಾರತಕ್ಕೆ ಸೇರಿಸಿಕೊಂಡು ಅಂದು ಅನಿವಾರ್ಯವಾಗಿ 370ನೇ ವಿಧಿಯಡಿ ವಿಶೇಷ ಸವಲತ್ತುಗಳನ್ನು ಕೊಟ್ಟರು ಎನ್ನುವುದನ್ನು ಕೋಮುವಾದಿಗಳು ಮರೆಯಬಾರದು ಎಂದರು.
ದೇಶದ ಆರ್ಥಿಕತೆಗೆ ಧಕ್ಕೆ:
ನಿವೃತ್ತ ಬ್ಯಾಂಕ್ ಮ್ಯಾನೇಜರ್ ತಿಪ್ಪೇಸ್ವಾಮಿ ಮಾತನಾಡಿ, ಐನೂರು ಹಾಗೂ ಒಂದು ಸಾವಿರ ರು.ಮುಖ ಬೆಲೆಯ ನೋಟುಗಳನ್ನು ಪ್ರಧಾನಿ ನರೇಂದ್ರಮೋದಿ ಅವರು ಅಮಾನ್ಯೀಕರಣಗೊಳಿಸಿದ್ದು, ದೇಶದ ಆರ್ಥಿಕ ಅಭಿವೃದ್ಧಿ ಮೇಲೆ ಪರಿಣಾಮ ಬೀರಿತು. ಇದು ಸಾಲದೆಂಬಂತೆ ಜಿಎಸ್‌ಟಿ ಜಾರಿಗೆ ತಂದಿದ್ದೂ, ಗಾಯದ ಮೇಲೆ ಬರೆ ಎಳೆದಂತಾಯಿತು. ಇದರಿಂದ ಕಪ್ಪುಹಣ, ಖೋಟಾ ನೋಟು, ಭಯೋತ್ಪಾದನೆ ನಿರ್ಮೂಲನೆಯಾಗಲಿಲ್ಲ. ಅದಕ್ಕೆ ಬದಲಾಗಿ ಸಣ್ಣ ಕೈಗಾರಿಕೆಗಳು ಮುಚ್ಚಿ ಸಣ್ಣಪುಟ್ಟವ್ಯಾಪಾರಿಗಳು ಕೈಸುಟ್ಟುಕೊಂಡು ವ್ಯಾಪಾರ ಬೇಡಿಕೆ ಕಡಿಮೆಯಾಯಿತು ಎಂದರು.
ಚಿತ್ರದುರ್ಗ: ಅನೈತಿಕ ಸಂಬಂಧ? ಲಾಡ್ಜ್‌ನಲ್ಲಿ ಮಕ್ಕಳನ್ನು ಮಲಗಿಸಿ ಮಹಿಳೆ ಕೊಲೆ ಮಾಡಿ ಆತ್ಮಹತ್ಯೆ
ಅಹಿಂದ ಹೋರಾಟಗಾರ ಮುರುಘರಾಜೇಂದ್ರ ಒಡೆಯರ್, ಕೆ.ಎಸ್.ನಾಗಪ್ಪ, ನಿವೃತ್ತ ಬ್ಯಾಂಕ್ ಅಧಿಕಾರಿ ನರಸಿಂಹಮೂರ್ತಿ ವೇದಿಕೆಯಲ್ಲಿದ್ದರು