ಬೆಂಗಳೂರು(ಫೆ.09): ಭಿಕ್ಷುಕನೊಬ್ಬನಿಗೆ ಬಿಎಂಟಿಸಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಆನಂದ್‌ರಾವ್‌ ವೃತ್ತದ ಮೇಲ್ಸೇತುವೆ ಮೇಲೆ ಸೋಮವಾರ ಸಂಜೆ ನಡೆದಿದೆ. ಮೃತ ವ್ಯಕ್ತಿಗೆ ಸುಮಾರು 35 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ.

ಘಟನೆ ಸಂಬಂಧ ಬಿಎಂಟಿಸಿ ಬಸ್‌ ಚಾಲಕ ಶಾಮಣ್ಣ ಎಂಬಾತನನ್ನು ಬಂಧಿಸಿ, ಬಸ್‌ ಜಪ್ತಿ ಮಾಡಲಾಗಿದೆ ಎಂದು ಉಪ್ಪಾರಪೇಟೆ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ. 

ಮೊಬೈಲ್‌ ಶಾಲೆಯಾದ ಬಿಎಂಟಿಸಿ ಹಳೆ ಬಸ್‌..!

ಮೃತ ವ್ಯಕ್ತಿ ಮೆಜೆಸ್ಟಿಕ್‌ ಸುತ್ತಮುತ್ತಲಿನ ಪ್ರದೇಶದಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ. ಸೋಮವಾರ ಸಂಜೆ ಐದು ಗಂಟೆ ಸುಮಾರಿಗೆ ಆನಂದ್‌ರಾವ್‌ ವೃತ್ತದ ಮೇಲ್ಸೇತುವೆ ಮೇಲೆ ವ್ಯಕ್ತಿ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಬಸ್‌ ಆತನಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಅಪಘಾತ ನಡೆದ ಬಳಿಕ ಹೆದರಿದ ಚಾಲಕ ಬಸ್ಸನ್ನು ಸ್ಥಳದಲ್ಲಿ ನಿಲ್ಲಿಸದೆ ನೇರವಾಗಿ ಉಪ್ಪಾರ ಠಾಣೆ ಬಳಿ ಬಂದಿದ್ದ. ಆತನನ್ನು ಬಂಧಿಸಲಾಗಿದೆ ಎಂದು ಸಂಚಾರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.