ಮೈಸೂರು (ಡಿ.20) : ಗ್ರಾಪಂ ಚುನಾವಣೆಯಲ್ಲೂ ಹಣವಿದ್ದವರನ್ನೇ ಜನ ಹೊತ್ತು ತಿರುಗುವ ಈ ಸಂದರ್ಭದಲ್ಲಿ ಇಲ್ಲಿನ ಗ್ರಾಮವೊಂದರಲ್ಲಿ ಭಿಕ್ಷುಕನೊಬ್ಬನನ್ನು ಸ್ಥಳೀಯರೇ ಸೇರಿ ಗ್ರಾಪಂ ಚುನಾವಣೆಗೆ ನಿಲ್ಲಿಸಿದ್ದಾರೆ.

ನಂಜನಗೂಡು ತಾಲೂಕು ಬೊಕ್ಕಹಳ್ಳಿಯಲ್ಲಿ ಯಾರೂ ಇಲ್ಲದ, ಭಿಕ್ಷೆ ಬೇಡಿ, ಒಂದು ಹೊತ್ತಿನ ಊಟಕ್ಕೆ ಸಣ್ಣ ಪುಟ್ಟಕೆಲಸ ಮಾಡಿ ಜೀವನ ಸಾಗಿಸುವ ವ್ಯಕ್ತಿಯನ್ನು ಗ್ರಾಮಸ್ಥರೇ ಸೇರಿ ಚುನಾವಣೆಗೆ ನಿಲ್ಲಿಸಿದ್ದಾರೆ. ಗ್ರಾಮದ ಅಂಕಪ್ಪ ನಾಯಕ ಸೊತ್ತ ಎಂಬ ಅಂಗವಿಕಲ ಹಾಗೂ ತನ್ನವರು ಎಂಬ ತೀರಾ ಹತ್ತಿರದ ಬಳಗವಿಲ್ಲದ ಏಕಾಂಗಿ ವ್ಯಕ್ತಿಯನ್ನು ಗ್ರಾಮಸ್ಥರೇ ಸೇರಿ ಚುನಾವಣೆಗೆ ನಿಲ್ಲಿಸಿದ್ದಾರೆ.

ಇದ್ದಕ್ಕಿದ್ದಂತೆ ಯೂ ಟರ್ನ್ ಹೊಡೆದ ಸಿದ್ದು; ವಿವಾದವಾಗ್ತಿದ್ದಂತೆ ಮಾತೇ ಬದಲಿಸಿ ಬಿಟ್ರು..! ..

ಐದು ವರ್ಷದಿಂದ ಚರಂಡಿ ಸಮಸ್ಯೆ ಸೇರಿ ಮೂಲಭೂತ ಸೌಲಭ್ಯ ನಿವಾರಿಸಲಾಗದ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶಗೊಂಡಿರುವ ಗ್ರಾಮಸ್ಥರು ಅಂಕಪ್ಪನನ್ನು ಚುನಾವಣಾ ಕಣಕ್ಕೆ ಇಳಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಂಕಪ್ಪ ಅವರಿಗೆ ಅಪ್ಪ, ಅಮ್ಮ ಇಲ್ಲ. ಇದ್ದೊಬ್ಬ ಸಹೋದರನೂ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಜೀವನ ನಿರ್ವಹಣೆಗೆ ನಂಜಗೂಡಿನ ಯಾವುದಾದರೂ ಅಂಗಡಿ, ಸಣ್ಣ ಹೊಟೇಲ್‌ಗೆ ನೀರು ತಂದು ಕೊಡುವುದು ಸೇರಿ ಸಣ್ಣಪುಟ್ಟಸಹಾಯ ಮಾಡಿ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಾರೆ.

ಈಗ ಗ್ರಾಮದ ಯುವಕರು ಮತ್ತು ಗ್ರಾಮಸ್ಥರು ಸೇರಿ ಪೇಟ ತೊಡಿಸಿ, ಕನ್ನಡಕ ಹಾಕಿಸಿ, ಹೊಸ ಬಟ್ಟೆಕೊಟ್ಟು ಕಾರಿನಲ್ಲಿ ಕರೆತಂದು ನಾಮಪತ್ರ ಹಾಕಿಸಿದ್ದಾರೆ. ಡಿ.27ಕ್ಕೆ ನಡೆಯುವ ಚುನಾವಣೆಯಲ್ಲಿ ಇವರ ವಿರುದ್ಧ ಕುರುಬ ಸಮುದಾಯದ ಮತ್ತೊಬ್ಬರು ಸ್ಪರ್ಧಿಸಿದ್ದಾರೆ. ಗ್ರಾಮಸ್ಥರು ಯಾರಿಗೆ ಮತ ಹಾಕುವರೋ ಕಾದು ನೋಡಬೇಕು.