ಬೆಂಗಳೂರು(ಮೇ.30): ಅದೇನು ಲಾಕ್‌ಡೌನ್‌ ಎಫೆಕ್ಟೋ ಅಥವಾ ಹಣಕಾಸು ಬಿಕ್ಕಟ್ಟಿನ ಪರಿಣಾಮವೋ ಗೊತ್ತಿಲ್ಲ. ಆದರೆ, ಸಾಮಾನ್ಯವಾಗಿ ವರ್ಷದ ಈ ಅವಧಿಯಲ್ಲಿ ಮದ್ಯ ಪ್ರಿಯರ ನೆಚ್ಚಿನ ಪೇಯವಾಗಿರುತ್ತಿದ್ದ ಬಿಯರ್‌ನ ಮಾರಾಟ ಕುಸಿದಿದೆ.

ಪ್ರತಿ ತಿಂಗಳು ಸಾಮಾನ್ಯವಾಗಿ 23ರಿಂದ 25 ಲಕ್ಷ ಬಾಕ್ಸ್‌ ಬಿಯರ್‌ (ಒಂದು ಬಾಕ್ಸ್‌ಗೆ 7.8 ಲೀ.) ವಹಿವಾಟು ನಡೆಯುತ್ತಿತ್ತು. ಈ ಬಾರಿ ಕೇವಲ 12ರಿಂದ 13 (ಮೇ 1ರಿಂದ 25ರ ವರೆಗೆ) ಲಕ್ಷ ಬಾಕ್ಸ್‌ಗಳಷ್ಟೇ ವಹಿವಾಟು ನಡೆದಿದೆ. ಬಿಯರ್‌ಗಿಂತ ವಿಸ್ಕಿಯಂಥ ಲೋಕಲ್‌ ಡ್ರಿಂಕ್ಸ್‌ ಬೆಲೆ ಕಡಿಮೆ. ಲಾಕ್‌ಡೌನ್‌ನಿಂದ ಹಣಕಾಸು ಮುಗ್ಗಟ್ಟು ಎದುರಾಗಿದೆ. ಹೀಗಾಗಿ ಬಿಯರ್‌ ಖರೀದಿಸಲು ಆಗುತ್ತಿಲ್ಲ. ಬೇಸಿಗೆ ಆಗಿರುವುದರಿಂದ ಹಾಗೂ ಬೆಳಗ್ಗೆ ಮಾತ್ರ ಮದ್ಯ ದೊರೆಯುತ್ತಿರುವುದರಿಂದ ಫ್ರಿಡ್ಜ್‌ ಇಲ್ಲದವರು ರಾತ್ರಿವರೆಗೆ ಬಿಯರ್‌ ಅನ್ನು ಕಾಪಾಡಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ‘ರಾತ್ರಿ ಮದ್ಯವ್ಯಸನಿಗಳು’ ವಿಸ್ಕಿಯಂತಹ ಪೇಯಗಳ ಖರೀದಿಗೆ ಮುಂದಾಗಿದ್ದಾರೆ ಇದರಿಂದ ಸಹಜವಾಗಿ ಬಿಯರ್‌ ವಹಿವಾಟು ಕುಸಿದಿದೆ.

ಅಬಕಾರಿ ಇಲಾಖೆಯ ಮಾಹಿತಿ ಪ್ರಕಾರ ಬಿಯರ್‌ ಮಾರಾಟ ಶೇ. 50ರಷ್ಟು ಕುಸಿದಿದೆ. ಬಿಯರ್‌ಗೆ ಹೋಲಿಸಿದರೆ ವಿಸ್ಕಿಯಂತಹ ಪೇಯಗಳ ವಹಿವಾಟು ಕೂಡ ಶೇ.5ರಿಂದ 10ರಷ್ಟು ಮಾತ್ರ ಕುಸಿದಿದೆ. ವಿಸ್ಕಿ, ಬ್ರಾಂದಿಯಂತಹ ಪೇಯಗಳು ಸಾಮಾನ್ಯವಾಗಿ ಪ್ರತಿ ತಿಂಗಳು 55 ಲಕ್ಷ ಬಾಕ್ಸ್‌ ಮಾರಾಟವಾಗುತ್ತದೆ. ಆದರೆ, ಮೇ ಮಾಸದಲ್ಲಿ 42 ಲಕ್ಷ ಬಾಕ್ಸ್‌ ವಹಿವಾಟು ನಡೆದಿದೆ ಎಂದು ತಿಳಿದು ಬಂದಿದೆ.

ಮೈಕೈ ನೋವಿಗೆ ಬಿಯರ್ ಮದ್ದು! ಇದು ಪ್ಯಾರಾಸಿಟಮಾಲ್‌ಗಿಂತ ಹೆಚ್ಚು ಎಫೆಕ್ಟಿವ್!

ಏಪ್ರಿಲ್‌ನಲ್ಲಿ ಹೆಚ್ಚು ವ್ಯಾಪಾರ: 

ಅಬಕಾರಿ ಇಲಾಖೆಯಲ್ಲಿ ಪ್ರತಿ ತಿಂಗಳು ಅಂದಾಜು ಎರಡು ಸಾವಿರ ಕೋಟಿ ರು. ವಹಿವಾಟು ನಡೆಯಲಿದೆ. ಆದರೆ, ಏಪ್ರಿಲ್‌ ತಿಂಗಳಿನಲ್ಲಿ ಜನತಾ ಕರ್ಫ್ಯೂ ಹೇರಿದ್ದರಿಂದ ಕಳೆದ ವರ್ಷ ಲಾಕ್‌ಡೌನ್‌ ಸಮಯದಲ್ಲಿ ಮದ್ಯ ನಿಷೇಧ ಮಾಡಿದ್ದರಿಂದ ಈ ಬಾರಿಯೂ ಅದೇ ಪರಿಸ್ಥಿತಿ ಎದುರಾಗಬಹುದು ಎಂಬ ಆಲೋಚನೆಯಿಂದ ಹೆಚ್ಚಿನ ಮದ್ಯಪ್ರಿಯರು ಮುಂಗಡವಾಗಿ ಮದ್ಯ ಸಂಗ್ರಹಿಸಿಟ್ಟುಕೊಂಡಿದ್ದರು. ಪರಿಣಾಮ, 2,200 ಕೋಟಿ ವಹಿವಾಟು ನಡೆದಿತ್ತು. ಆದರೆ, ಈ ತಿಂಗಳಿನಲ್ಲಿ (ಮೇ 25ರ ವರೆಗೆ) ಅಂದಾಜು 1,400 ಕೋಟಿ ರು. ವಹಿವಾಟು ನಡೆದಿದೆ. ಉಳಿದ 5 ದಿನಗಳಲ್ಲಿ ಸುಮಾರು 400ರಿಂದ 500 ಕೋಟಿ ರು. ವಹಿವಾಟು ನಡೆಯಬಹುದು ಎಂದು ಇಲಾಖೆ ಮೂಲಗಳು ತಿಳಿಸಿವೆ.

ಹವ್ಯಾಸಿ ಮದ್ಯಪ್ರಿಯ ಆಟೋ ಚಾಲಕ ಶಿವಕುಮಾರ್‌ ಮಾತನಾಡಿ, ‘ಸಾಮಾನ್ಯವಾಗಿ ವಾರದಲ್ಲಿ ಎರಡರಿಂದ ಮೂರು ದಿನ ಬಿಯರ್‌ ಸೇವಿಸುತ್ತಿದ್ದೆ. ಈಗ ಲಾಕ್‌ಡೌನ್‌ ಎದುರಾಗಿರುವುದರಿಂದ ಬಿಯರ್‌ ಬದಲು ಲೋಕಲ್‌ ಡ್ರಿಂಕ್ಸ್‌ ಓಲ್ಡ್‌ ಅಡ್ಮಿರಲ್‌ ಸೇವನೆಗೆ ಮುಂದಾಗಿದ್ದೇನೆ. ಬಿಯರ್‌ಗಿಂತ ಬೆಲೆ ಕಡಿಮೆ ಇರುವುದರಿಂದ ಹಾಗೂ ಕಿಕ್‌, ಫ್ಲೇವರ್‌ನಲ್ಲಿಯೂ ಚೆನ್ನಾಗಿರುವುದರಿಂದ ಓಲ್ಡ್‌ ಅಡ್ಮಿರಲ್‌ ಖರೀದಿಸುತ್ತಿದ್ದೇನೆ’ ಎಂದು ಹೇಳುತ್ತಾರೆ.

ಈ ಕುರಿತು ಮಾತನಾಡಿದ ಆವಲಹಳ್ಳಿ ಎಂಆರ್‌ಪಿ ಮಳಿಗೆಯ ಶಿವಶಂಕರ್‌, ‘ಲಾಕ್‌ಡೌನ್‌ ಇರುವುದರಿಂದ ಲೋಕಲ್‌ ಡ್ರಿಂಕ್ಸ್‌ ಖರೀದಿ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಕುಡಿತ ಚಟ ಬಿಡದವರು ಹಾಗೂ ಟೈಂಪಾಸ್‌ಗಾಗಿ ಕುಡಿಯುವವರು ಕಡಿಮೆ ಬೆಲೆಯ ಮದ್ಯದತ್ತ ಮುಖ ಮಾಡುತ್ತಿದ್ದಾರೆ’ ಎನ್ನುತ್ತಾರೆ.