ಚಾಮರಾಜನಗರದಲ್ಲಿ ನಡೆದ ಅನಾಹುತವನ್ನು ಮರೆ ಮಾಚಲು ಸರ್ಕಾರ ಬೆಡ್ ಬ್ಲಾಕಿಂಗ್ ದಂಧೆಯನ್ನು ಹೈ ಲೈಟ್ ಮಾಡುತ್ತಿದೆ. ಇದರೊಳಗೆ ಜಾತಿಯನ್ನು ಎಳೆದು ತಂದು ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ (ಮೆ.05): ಚಾಮರಾಜನಗರದಲ್ಲಿ ಆಮ್ಲಜನಕದ ಕೊರೆತಯಿಂದ 24 ಮಂದಿ ಪ್ರಾಣ ಕಳೆದುಕೊಂಡಿದ್ದು, ಈ ಅನಾಹುತ ಮರೆ ಮಾಚಲು ಬಿಜೆಪಿ ನಾಯಕರು ಬೆಡ್ ಬ್ಲಾಕಿಂಗ್ ವಿಷಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ.
ಮಂಡ್ಯದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಆಡಳಿತ ಪಕ್ಷದ ಸಂಸದರು, ಶಾಸಕರೇ ಈ ವಿಷಯವನ್ನು ದೊಡ್ಡ ಮಟ್ಟದಲ್ಲಿ ಎಕ್ಸ್‌ಪೋಸ್ ಮಾಡುತ್ತಿದ್ದಾರೆ. ಇದರೊಳಗೆ ಜಾತಿಯನ್ನು ಎಳೆದು ತಂದು ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದರು.
ಬೊಮ್ಮನಹಳ್ಳಿ ಕ್ಷೇತ್ರದ ಸೋಂಕಿತ ವ್ಯಕ್ತಿಗೆ ಆಕ್ಸಿಜನ್ ಕೊಡಿಸಲಾಗದ ಶಾಸಕ ಸತೀಶ್ ರೆಡ್ಡಿ ಬೆಡ್ ಬ್ಲಾಕಿಂಗ್ ದಂಧೆಯನ್ನು ಎಕ್ಸ್‌ಪೋಸ್ ಮಾಡಿದರೆಂದು ಬಿಂಬಿಸಿಕೊಳ್ಳಲು ಹೊರಟಿರುವುದು ಅಸಹ್ಯಕರ ಬೆಳವಣಿಗೆ ಎಂದರು.
ಬೆಡ್ ಮಾಫಿಯಾ : 17 ಸಿಬ್ಬಂದಿಗೆ ಗೇಟ್‌ಪಾಸ್, ಬಿಬಿಎಂಪಿ ಸಿಬ್ಬಂದಿಯೂ ಶಾಮೀಲು?
ಬಿಜೆಪಿ ನಾಯಕರ ಇಂತಹ ನಡವಳಿಕೆಗಳಿಂದ ಮುಂದೆ ವಾರ್ ರೂಂಗಳಲ್ಲಿ ಯಾವ ಅಧಿಕಾರಿಗಳು ಕೆಲಸ ಮಾಡಲು ಮುಂದೆ ಬರುತ್ತಾರೆ. ವಿನಾಕಾರಣ ಅನ್ಯರ ಮೇಲೆ ಗೂಬೆ ಕೂರಿಸುವ ಬದಲು ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಿ. ಸುಮ್ಮನೆ ಜನರನ್ನು ಭಯಗೊಳಿಸುವ, ಆತಂಕ ಸೃಷ್ಟಿಸುವ, ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಎಚ್ಚರಿಸಿದರು.
ಕೊರೋನಾ ವಾರಿಯರ್ಸ್‌ಗಳಲ್ಲೂ ಶೇ.5 ರಿಂದ 6ರಷ್ಟು ಮಂದಿ ದುಡ್ಡು ಮಾಡುವವರು ಇರಬಹುದು. ಹಾಗಂತ ಎಲ್ಲಾ ಕೊರೋನಾ ವಾರಿಯರ್ಸ್‌ಗಳ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಮಾಜಿ ಸಿಎಂ ಎಚ್.ಡಿ .ಕುಮಾರಸ್ವಾಮಿ ತಿಳಿಸಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
