Asianet Suvarna News Asianet Suvarna News

ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಿ : ಆಟೋ, ಟ್ಯಾಕ್ಸಿ ಚಾಲಕರಿಗೆ ಸಲಹೆ

ಟ್ಯಾಕ್ಸಿ ಹಾಗೂ ಆಟೋ ಚಾಲಕರು ಸಂಚಾರ ನಿಯಮಗಳನ್ನು ಪಾಲಿಸುವುದರ ಜೊತೆಗೆ ಪ್ರಾಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಸಲಹೆ ನೀಡಿದರು.

Be courteous to passengers Tips for auto, taxi drivers snr
Author
First Published Dec 28, 2022, 6:20 AM IST

  ಮೈಸೂರು (ಡಿ. 28 ):  ಟ್ಯಾಕ್ಸಿ ಹಾಗೂ ಆಟೋ ಚಾಲಕರು ಸಂಚಾರ ನಿಯಮಗಳನ್ನು ಪಾಲಿಸುವುದರ ಜೊತೆಗೆ ಪ್ರಾಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಸಲಹೆ ನೀಡಿದರು.

ಅಪರಾಧ ತಡೆ ಮಾಸಾಚರಣೆ ಅಂಗವಾಗಿ ನಗರ ಪೊಲೀಸ್‌ (Police)  ಹಾಗೂ ಸಂಚಾರ ಪೊಲೀಸರ ವತಿಯಿಂದ ಪುರಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಟ್ಯಾಕ್ಸಿ ಮತ್ತು ಆಟೋ (Auto)  ಚಾಲಕರಿಗೆ ಅಪರಾಧ ತಡೆ ಹಾಗೂ ಸಂಚಾರ ಅರಿವು ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಮೈಸೂರು ನಗರ ತನ್ನದೇ ಆದ ವಿಶಿಷ್ಟಇತಿಹಾಸ ಹೊಂದಿದೆ. ಇಡೀ ದೇಶದಲ್ಲೇ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವುದರಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಕೆಲವರಿಗೆ ಸ್ವಂತ ವಾಹನ ಇರುವುದಿಲ್ಲ. ನಿಮ್ಮನ್ನೇ ನಂಬಿ ಬರುತ್ತಾರೆ. ಟ್ಯಾಕ್ಸಿ ವ್ಯವಸ್ಥೆ ಸರಿಯಿಲ್ಲದಿದ್ದರೆ ಪ್ರವಾಸಿಗರು ಬರುವುದು ಕಷ್ಟ. ಹೀಗಾಗಿ, ನಿಮ್ಮನ್ನೇ ನಂಬಿ ಬರುವ ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ. ನಿಮ್ಮ ಕೆಲಸವನ್ನು ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡಿ ಎಂದು ಅವರು ಕಿವಿಮಾತು ಹೇಳಿದರು.

ನಿಮ್ಮನ್ನು ನಂಬಿ ಬರುವ ಮಹಿಳೆಯರು, ಹೆಣ್ಣುಮಕ್ಕಳನ್ನು ಸುರಕ್ಷಿತವಾಗಿ ಅವರ ಮನೆಗೆ ತಲುಪಿಸಿ. ನಿಮ್ಮ ಕುಟುಂಬದವರನ್ನು ಯಾವ ರೀತಿ ನೋಡುತ್ತೀರೋ ಅದೇ ದೃಷ್ಟಿಯಲ್ಲಿ ಪ್ರಯಾಣಿಕರನ್ನೂ ನೋಡಿ. ಆಟೋ ಚಾಲನೆ ಎಂದು ಕೀಳರಿಮೆ ಬೇಡ. ನಿಮ್ಮ ಕೆಲಸವನ್ನು ಖುಷಿಯಿಂದ, ನ್ಯಾಯಯುತವಾಗಿ ಮಾಡಿ ಎಂದು ಅವರು ತಿಳಿಸಿದರು.

ನಾನು ಬಂದ ಮೇಲೆ ಕಳೆದ ಒಂದೂವರೆ ತಿಂಗಳಲ್ಲಿ ಯಾವುದೇ ತೊಂದರೆ ಆಗಿಲ್ಲ. ನಮ್ಮ ಇಲಾಖೆಯಿಂದ ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ, ಸಂಚಾರ ನಿಯಮಗಳನ್ನು ಪಾಲಿಸಲೇಬೇಕು. ಕೆಲವು ವಾಹನಗಳಿಗೆ ನೋಂದಣಿ ಸಂಖ್ಯೆ, ಚಾಲನಾ ಪರವಾನಗಿಯೂ ಇರುವುದಿಲ್ಲ. ನಿಯಮ ಉಲ್ಲಂಘಿಸಿ ದಂಡ ವಿಧಿಸುತ್ತಾರೆ ಎಂದು ಆರೋಪಿಸುವುದು ಸರಿಯಲ್ಲ. ಏನೇ ಮಾಡಿದರೂ ಕಾನೂನಾತ್ಮಕವಾಗಿ ಮಾಡಿ. ಪರವಾನಗಿ ಇಲ್ಲದಿರುವವರಿಗೆ ಪರವಾನಗಿ ಕೊಡಿಸಲು ಬೇಕಾದ ಅಗತ್ಯ ಸಹಕಾರ ನೀಡುತ್ತೇವೆ. ನಿಮ್ಮ ಸೇವೆಗೆ ಇಲಾಖೆ ಸದಾ ಸಿದ್ಧವಿದ್ದು, ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ನೇರವಾಗಿ ನಮ್ಮ ಬಳಿ ಬರಬಹುದು ಎಂದರು.

ಸುಗಮ ಸಂಚಾರಕ್ಕೆ ಚಾಲಕರು ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಮ್ಮ ಗುರುತಿಗೆ ಇರುವಂತಹ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಿಯೇ ಚಾಲನೆ ಮಾಡಬೇಕು. ಚಾಲನಾ ಪರವಾನಗಿ ಸೇರಿದಂತೆ ಇತರೆ ದಾಖಲೆಗಳನ್ನು ಹೊಂದಿರಬೇಕು. ಚಾಲಕರು ದಾಖಲೆಯನ್ನು ಹೊಂದಿ ಪ್ರಯಾಣಿಕರಿಗೆ ಸುರಕ್ಷತೆಯಿಂದ ಸೇವೆ ಒದಗಿಸಿದಲ್ಲಿ ಮಾತ್ರ ಸಾರ್ಥಕ ಸೇವೆಯಾಗಲಿದೆ. ಅಕ್ರಮವಾಗಿ ದಾಖಲೆಗಳಿಲ್ಲದೆ, ಚಾಲನಾ ಪರವಾನಗಿ ಇಲ್ಲದೆ ಚಲಾಯಿಸಿ ಪ್ರಯಾಣಿಕರಿಗೆ ಅಸುರಕ್ಷತೆ ಉಂಟು ಮಾಡಿದ್ದಲ್ಲಿ ಕಾನೂನು ರೀತ್ಯಾ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಇದೇ ವೇಳೆ ಅಪರಾಧ ತಡೆ ಹಾಗೂ ಸಂಚಾರ ನಿಯಮ ಪಾಲನೆ ಸಂಬಂಧ ಕರ ಪತ್ರಗಳನ್ನು ಪೊಲೀಸ್‌ ಆಯುಕ್ತರು ಬಿಡುಗಡೆಗೊಳಿಸಿದರು. ಪ್ರಾದೇಶಿಕ ಸಾರಿಗೆ ಆಯುಕ್ತ ಭೀಮನಗೌಡ ಪಾಟೀಲ್‌, ಡಿಸಿಪಿ ಎಂ. ಎಸ್‌. ಗೀತಾ, ಎ ಸಿ ಪಿಗಳಾದ ಎಂ. ಎನ್‌. ಶಶಿಧರ್‌, ಗಂಗಾಧರಸ್ವಾಮಿ, ಅಶ್ವತ್ಥನಾರಾಯಣ್‌ ಇದ್ದರು. ಇನ್ಸ್‌ಪೆಕ್ಟರ್‌ ಡಿ. ಯೋಗೇಶ್‌ ಸ್ವಾಗತಿಸಿದರು. ಸುರೇಶ್‌ಕುಮಾರ್‌ ನಿರೂಪಿಸಿದರು.

 ಯಾರಾದರೂ ಅನುಮಾನಸ್ಪದ ವ್ಯಕ್ತಿಗಳು ನಿಮ್ಮ ವಾಹನದಲ್ಲಿ ಕಂಡು ಬಂದಲ್ಲಿ, ಅಪರಾಧ ಚಟುವಟಿಕೆ ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಅಪರಾಧಗಳನ್ನು ಪತ್ತೆ ಹಚ್ಚಲು ಆಟೋ, ಟ್ಯಾಕ್ಸಿ ಚಾಲಕರು ಪೊಲೀಸರಿಗೆ ನೆರವಾಗಬೇಕು.

- ರಮೇಶ್‌ ಬಾನೋತ್‌, ನಗರ ಪೊಲೀಸ್‌ ಆಯುಕ್ತ

Follow Us:
Download App:
  • android
  • ios