Mysuru : ತಮ್ಮ ರಕ್ತದ ಗುಂಪಿನ ಬಗ್ಗೆ ಅರಿವಿರಲಿ
ಪ್ರತಿಯೊಬ್ಬರು ತಮ್ಮ ರಕ್ತದ ಗುಂಪುಗಳನ್ನು ತಿಳಿದುಕೊಳ್ಳಬೇಕು ಎಂದು ಲಯನ್ಸ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಖಜಾಂಚಿ ಮಹೇಶ್ ತಿಳಿಸಿದರು.
ಮೈಸೂರು : ಪ್ರತಿಯೊಬ್ಬರು ತಮ್ಮ ರಕ್ತದ ಗುಂಪುಗಳನ್ನು ತಿಳಿದುಕೊಳ್ಳಬೇಕು ಎಂದು ಲಯನ್ಸ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಖಜಾಂಚಿ ಮಹೇಶ್ ತಿಳಿಸಿದರು.
ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್, ಲಯನ್ಸ್ ಬ್ಲಡ್ ಬ್ಯಾಂಕ್ ಜೀವಧಾರ ರಕ್ತನಿಧಿ ಕೇಂದ್ರವು ಗಾಂಧಿ ಜಯಂತಿ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ರಕ್ತದ ಗುಂಪು ಪರೀಕ್ಷೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತದ ಗುಂಪುಗಳನ್ನು ತಿಳಿದುಕೊಂಡಾಗ ಮಾತ್ರ ಬೇರೆಯವರಿಗೆ ಅವಶ್ಯಕತೆ ಇದ್ದಾಗ ರಕ್ತದಾನ ಮಾಡಿ, ಒಬ್ಬರ ಜೀವವನ್ನು ಉಳಿಸಬಹುದು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ ಮಾತನಾಡಿ, ರಕ್ತದ ಗುಂಪುಗಳು ಅವರವರ ವ್ಯಕ್ತಿತ್ವವನ್ನು ತಿಳಿಸುತ್ತದೆ. ರಕ್ತದ ಗುಂಪುಗಳ ಬಗ್ಗೆ ಅರಿಯುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಕಾಲೇಜಿನ ಉಪ ಪ್ರಾಂಶುಪಾಲ ಡಾ.ಜಿ. ಪ್ರಸಾದಮೂರ್ತಿ ಮಾತನಾಡಿ, ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನವಾಗಿದೆ. ಒಬ್ಬರ ಜೀವವನ್ನು ಉಳಿಸುವುದಕ್ಕಿಂತ ಶ್ರೇಷ್ಠವಾದದ್ದು ಯಾವುದೂ ಇಲ್ಲ. ರಕ್ತದ ಗುಂಪನ್ನು ತಿಳಿದುಕೊಳ್ಳುವುದು ಹಾಗೂ ರಕ್ತದಾನವನ್ನು ಮಾಡುವುದು ಎರಡೂ ಕೂಡ ಮುಖ್ಯ ಎಂದರು.
ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ದೇವಾಲಯಗಳಿಗೆ ಹೋಗುವುದು ಮಾತ್ರ ಪುಣ್ಯದ ಕೆಲಸವಲ್ಲ, ಬದಲಿಗೆ ಅನಿವಾರ್ಯತೆ ಇರುವವರಿಗೆ ರಕ್ತದಾನ ಮಾಡುವುದು ಕೂಡ ಪುಣ್ಯದ ಕೆಲಸವಾಗಿದೆ. ಅನ್ನದಾನ, ನೇತ್ರದಾನಗಳಂತೆ ರಕ್ತದಾನವು ಕೂಡ ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ಬಹಳ ಸಹಾಯಕವಾಗುತ್ತದೆ ಎಂದು ಹೇಳಿದರು.
ನಂತರ ಶ್ರೀ ನಟರಾಜ ಪದವಿ ಕಾಲೇಜಿನ 300 ಹೆಚ್ಚಿನ ವಿದ್ಯಾರ್ಥಿನಿಯರಿಗೆ ರಕ್ತದ ಗುಂಪು ಪರೀಕ್ಷೆ ಮಾಡಲಾಯಿತು. ಕಾಲೇಜಿನ ನಾಗೇಂದ್ರ, ಸುನೀಲ್, ಡಾ.ಎನ್.ಜಿ. ಲೋಕೇಶ್ ಇದ್ದರು. ಪವಿತ್ರದಾಸ್ ಪ್ರಾರ್ಥಿಸಿದರು. ಗಗನ ಸ್ವಾಗತಿಸಿದರು. ಟಿ.ಎನ್. ನಿಹಾರಿಕಾ ನಿರೂಪಿಸಿದರು.
ಮಾನವ ರಕ್ತಕ್ಕೆ ಯಾವುದೇ ಪರ್ಯಾಯ ಇಲ್ಲ
ಮೈಸೂರು : ನೀರು, ಆಹಾರ ಸೇರಿದಂತೆ ಪ್ರತಿಯೊಂದಕ್ಕೂ ಪರ್ಯಾಯವಿದೆ. ಆದರೆ, ರಕ್ತಕ್ಕೆ ಮಾತ್ರ ಪರ್ಯಾಯವಿಲ್ಲ. ರಕ್ತ ಅವಶ್ಯ ಇದ್ದಾಗ ರಕ್ತವನ್ನೇ ನೀಡಬೇಕು. ಹೀಗಾಗಿ, ಪ್ರತಿಯೊಬ್ಬರೂ ರಕ್ತದಾನಕ್ಕೆ ಮುಂದಾಗಬೇಕು ಎಂದು ಕೆ.ಆರ್. ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ವೈದ್ಯಕೀಯ ಅಧಿಕಾರಿ ಡಾ. ಮಂಜುನಾಥ್ ಕರೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನದ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಅತಿ ಹೆಚ್ಚು ರಕ್ತದಾನ ಶಿಬಿರಗಳ ಆಯೋಜಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಣ, ಭೂಮಿ, ಬಟ್ಟೆ, ಬಂಗಾರವನ್ನು ದಾನವಾಗಿ ನೀಡಿದರೂ ಜೀವ ಉಳಿಸಿದ ಸಾರ್ಥಕತೆ ಬರುವುದಿಲ್ಲ. ಆದರೆ, ತುರ್ತಾಗಿ ರಕ್ತ ಅವಶ್ಯ ಇರುವವರಿಗೆ ರಕ್ತ ನೀಡುವುದರಿಂದ ಮತ್ತೊಬ್ಬರ ಜೀವ ಉಳಿಸಿದ ತೃಪ್ತಿ ಸಿಗುತ್ತದೆ. ನೀವೆಲ್ಲರೂ ಒಂದು ರೀತಿಯಲ್ಲಿ ರೋಲ್ ಮಾಡೆಲ್ ಗಳಾಗಿದ್ದೀರಿ. ವಿದ್ಯಾರ್ಥಿಗಳು 18 ವರ್ಷ ಪೂರೈಸಿದ ಬಳಿಕ ರಕ್ತದಾನ ಮಾಡಬೇಕು. ಕುಟುಂಬದವರು ಹಾಗೂ ಸ್ನೇಹಿತರಿಗೂ ರಕ್ತದಾನ ಮಾಡುವಂತೆ ಪ್ರೋತ್ಸಾಹಿಸಬೇಕು ಎಂದು ಅವರು ತಿಳಿಸಿದರು.
ಅಪಘಾತಕ್ಕೆ ಒಳಗಾದವರು ಹಾಗೂ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ರಕ್ತದ ಅವಶ್ಯಕತೆ ಹೆಚ್ಚಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ರಕ್ತದಾನ ಮಾಡಲು ಹಿಂಜರಿಯಬಾರದು. ಎಷ್ಟೇ ಬಾರಿ ರಕ್ತ ನೀಡಿದರೂ ಹೊಸ ರಕ್ತ ಉತ್ಪಾದನೆ ಆಗುತ್ತಲೇ ಇರುತ್ತದೆ ಎಂದು ಅವರು ಹೇಳಿದರು.
ಇದೇ ವೇಳೆ ಅತಿ ಹೆಚ್ಚು ರಕ್ತದಾನ ಶಿಬಿರವನ್ನು ಆಯೋಜಿಸಿದ್ದ ಬ್ಲಡ್ ಆನ್ ಕಾಲ್ ಕ್ಲಬ್, ಎಂಎಂಕೆ ಮತ್ತು ಎಸ್ಡಿಎಂ ಕಾಲೇಜು, ರೋಟರಿ ಸಂಸ್ಥೆ, ದಿ ಬೆಟರ್ ಹ್ಯಾಂಡ್ಸ್, ತೆರಪಂತ್ ಯುವ ಪರಿಷದ್, ಎನ್ಐಇ, ಎಟಿಎಂಇ ಕಾಲೇಜ್, ಇನ್ಫೋಸಿಸ್, ಹಿಂದೂಸ್ತಾನ್ ಕಾಲೇಜು, ಬಿಇಎಂಎಲ್, ನೆಕ್ಸಾಸ್ ಸೆಂಟರ್ ಸಿಟಿ ಮಾಲ್, ಇಂಟರ್‌ನ್ಯಾಷನಲ್ ಯೂಥ್ ಹಾಸ್ಟೆಲ್ ಮುಖ್ಯಸ್ಥರಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು. ಅಲ್ಲದೆ, 30 ಹೆಚ್ಚು ಬಾರಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ 20 ಹೆಚ್ಚು ರಕ್ತದಾನಿಗಳಿಗೆ ಸನ್ಮಾನಿಸಲಾಯಿತು.
ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಅಧಿಕಾರಿ ಡಾ. ಮಹಮ್ಮದ್ ಸಿರಾಜ್ ಅಹಮದ್, ರೋಟರಿ ಸಂಸ್ಥೆಯ ಅಧ್ಯಕ್ಷ ಅರುಣ್ ಬೆಳವಾಡಿ, ಆಶಾ ಕಿರಣ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಗುರುರಾಜ್, ಲಯನ್ಸ್ ಸಂಸ್ಥೆಯ ಶ್ರೀನಿವಾಸ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಮುತ್ತಣ್ಣ, ರಶ್ಮಿ, ಮಮತಾ, ಸುರೇಶ್ ಮೊದಲಾದವರು ಇದ್ದರು.