ಅದ್ಧೂರಿ ಕೆಂಪೇಗೌಡ ಜಯಂತಿ ಆಚರಣೆಗೆ ಬಿಬಿಎಂಪಿ ನಿರ್ಧಾರ
ಕೊರೋನಾ ಸೋಂಕು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ‘ಕೆಂಪೇಗೌಡ ಜಯಂತಿ’ಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಬೆಂಗಳೂರು (ನ.09): ಕೊರೋನಾ ಸೋಂಕು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ‘ಕೆಂಪೇಗೌಡ ಜಯಂತಿ’ಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು. ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡ ಜಯಂತಿ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸುವ ಕುರಿತು ಪಾಲಿಕೆ ವಿಶೇಷ ಆಯುಕ್ತರುಗಳು ಮಂಗಳವಾರ ಪ್ರಾಥಮಿಕ ಸಭೆ ನಡೆಸಿದ್ದು, ಶೀಘ್ರದಲ್ಲಿ ಮತ್ತೆ ಸಭೆ ನಡೆಸಿ ಜಯಂತಿ ಆಚರಣೆಗೆ ದಿನಾಂಕ ನಿಗದಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗುವುದು ಎಂದರು.
ದಿನಾಂಕ ನಿಗದಿ ನಂತರ ಸ್ವಾಗತ ಸಮಿತಿ, ಆಚರಣೆ ಸಮಿತಿ, ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರ ಆಯ್ಕೆ ಸಮಿತಿ ರಚಿಸಲಾಗುತ್ತದೆ. ಈಗಾಗಲೇ ಬಿಬಿಎಂಪಿ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪುರಸ್ಕೃತರ ಆಯ್ಕೆ ಸಮಿತಿ ಇದ್ದರೂ ಜಯಂತಿ ದಿನ ನಿಗದಿ ಸಮಿತಿಯಲ್ಲಿ ಕೊಂಚ ಬದಲಾವಣೆ ಮಾಡಲಾಗುತ್ತದೆ. ಆ ಸಮಿತಿಗಳು ಜಯಂತಿ ಅಚರಣೆ, ಕಾರ್ಯಕ್ರಮಗಳ ಆಯೋಜನೆ ಕುರಿತು ಕ್ರಮ ಕೈಗೊಳ್ಳಲಿವೆ ಎಂದರು. 2020ರಲ್ಲಿ 30 ಸಾಧಕರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಲಾಗಿತ್ತು.
ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದು ಅವಮಾನ: ವಿದ್ಯಾರ್ಥಿ ಆತ್ಮಹತ್ಯೆ
ಕಳೆದ ಮಾರ್ಚ್‌ನಲ್ಲಿ ನಡೆದ ಪ್ರಶಸ್ತಿ ಪುರಸ್ಕೃತರ ಆಯ್ಕೆ ಸಮಿತಿ ಸಭೆಯಲ್ಲಿ 31 ಮಂದಿಗೆ ಪ್ರಶಸ್ತಿ ನೀಡುವುದು ಸೂಕ್ತ ಎಂದು ಸಮಿತಿ ಸದಸ್ಯರು ಅಭಿಪ್ರಾಯಪಟ್ಟಿದ್ದರು ಎಂದು ವಿವರಿಸಿದರು. ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ: ಕೆಂಪೇಗೌಡ ಜಯಂತಿಯಂತೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನೂ ಬಿಬಿಎಂಪಿ ಆಚರಿಸಿಲ್ಲ, ಹೀಗಾಗಿ ಕೆಂಪೇಗೌಡ ಜಯಂತಿ ನಂತರ ಒಂದೆರಡು ವಾರದೊಳಗೆ ಅಂಬೇಡ್ಕರ್ ಜಯಂತಿ ಆಚರಿಸಲಾಗುವುದು. ಈ ಸಂದರ್ಭದಲ್ಲಿ ಪೌರಕಾರ್ಮಿಕರು ಸೇರಿ ವಿವಿಧ ಸಿಬ್ಬಂದಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದರು.
ಕೆಂಪೇಗೌಡರ ರಥಕ್ಕೆ ಜಿಲ್ಲಾಡಳಿತ ಬೀಳ್ಕೊಡುಗೆ: ಕಳೆದ 15 ದಿನಗಳಿಂದ ಜಿಲ್ಲಾದ್ಯಂತ ಪವಿತ್ರ ಮಣ್ಣು (ಮೃತ್ತಿಕೆ) ಮತ್ತು ನೀರು ಸಂಗ್ರಹ ಮಾಡಿರುವ ಕೆಂಪೇಗೌಡ ರಥದ ವಾಹನಕ್ಕೆ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಮಂಗಳವಾರ ಜಿಲ್ಲಾಡಳಿತ ಭವನದ ಮುಂಭಾಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಪರವಾಗಿ ಪೂಜೆ ಸಲ್ಲಿಸಿ ಬೀಳ್ಕೊಡುಗೆ ನೀಡಿ ಪುತ್ಥಳಿ ಅನಾವರಣ ಸ್ಥಳಕ್ಕೆ ಕಳುಹಿಸಿ ಕೊಟ್ಟರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನ.11ಕ್ಕೆ ಅನಾವರಣಗೊಳ್ಳಲಿರುವ ನಾಡಪ್ರಭು ಕೆಂಪೇಗೌಡರ 108 ಅಡಿಯ ಕಂಚಿನ ಪ್ರತಿಮೆ ಉದ್ಘಾಟನೆ ಅಂಗವಾಗಿ ಜಿಲ್ಲೆಯ 157 ಗ್ರಾಮದಲ್ಲಿ ಸಂಚಾರ: ನಾಡಪ್ರಭು ಕೆಂಪೇಗೌಡ ರಥ ವಾಹನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆಗೊಂಡು ಅಕ್ಟೋಬರ್ 25 ರಿಂದ ಈ ವರೆಗೆ ಜಿಲ್ಲಾದ್ಯಂತ ಸಂಚರಿಸಿ 157 ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಜಿಲ್ಲೆಯ ಪ್ರಸಿದ್ಧ ಪಾರಂಪರಿಕ ಸ್ಥಳಗಳು ಮತ್ತು ಪುಣ್ಯ ಕ್ಷೇತ್ರಗಳಲ್ಲಿ ಪವಿತ್ರ ಮೃತ್ತಿಕೆ ಮತ್ತು ನೀರನ್ನು ಸಂಗ್ರಹಿಸಿದೆ ಎಂದರು.
ರಾಜ್ಯದ ಜನತೆ ಸಿದ್ದರಾಮಯ್ಯ ಜೇಬಲ್ಲಿದ್ದಾರಾ?: ಬಿಎಸ್‌ವೈ
ವಿಶೇಷವಾಗಿ ಜಿಲ್ಲೆಯ ಪ್ರಸಿದ್ಧ ಸ್ಥಳಗಳಾದ ವಿದುರಾಶ್ವತ್ಥ, ಕೈವಾರ, ರಂಗಸ್ಥಳ, ನಂದಿ, ಆಲಂಗಿರಿ, ಮುದ್ದೇನಹಳ್ಳಿ ಇನ್ನೂ ಮತ್ತಿತರ ಪುಣ್ಯ ಕ್ಷೇತ್ರಗಳಲ್ಲಿ ಮಣ್ಣು ಮತ್ತು ನೀರನ್ನು ಸಂಗ್ರಹಿಸಲಾಗಿದೆ. ಈ ಮೃತ್ತಿಕೆ ಮತ್ತು ನೀರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಾವರಣಗೊಳ್ಳಲಿರುವ ನಾಡಪ್ರಭು ಕೆಂಪೇಗೌಡರ 108 ಅಡಿಯ ಕಂಚಿನ ಪ್ರತಿಮೆಯ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಉದ್ಯಾನವನ (ಥೀಮ್ ಪಾರ್ಕ್) ಕ್ಕೆ ಉಪಯೋಗಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.