Asianet Suvarna News Asianet Suvarna News

Bengaluru: ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದು ಅವಮಾನ: ವಿದ್ಯಾರ್ಥಿ ಆತ್ಮಹತ್ಯೆ

ಕಿರು ಪರೀಕ್ಷೆಯಲ್ಲಿ ನಕಲು ಮಾಡಿದ್ದಕ್ಕೆ ಶಿಕ್ಷಕರು ತರಗತಿಯಿಂದ ನಿಲ್ಲಿಸಿದ್ದರಿಂದ ಬೇಸರಗೊಂಡು ತನ್ನ ಸ್ನೇಹಿತನ ಅಪಾರ್ಟ್‌ಮೆಂಟ್‌ಗೆ ತೆರಳಿ 14ನೇ ಮಹಡಿಯಿಂದ ಜಿಗಿದು ಖಾಸಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಂಗಳವಾರ ನಡೆದಿದೆ.

Tenth standard student commits suicide in Bengaluru gvd
Author
First Published Nov 9, 2022, 12:20 PM IST

ಬೆಂಗಳೂರು (ನ.09): ಕಿರು ಪರೀಕ್ಷೆಯಲ್ಲಿ ನಕಲು ಮಾಡಿದ್ದಕ್ಕೆ ಶಿಕ್ಷಕರು ತರಗತಿಯಿಂದ ನಿಲ್ಲಿಸಿದ್ದರಿಂದ ಬೇಸರಗೊಂಡು ತನ್ನ ಸ್ನೇಹಿತನ ಅಪಾರ್ಟ್‌ಮೆಂಟ್‌ಗೆ ತೆರಳಿ 14ನೇ ಮಹಡಿಯಿಂದ ಜಿಗಿದು ಖಾಸಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಂಗಳವಾರ ನಡೆದಿದೆ.

ನಾಗವಾರ ಸಮೀಪದ ಮೋಹಿನ್‌ ನಗರದ ನಿವಾಸಿ ಮಹಮ್ಮದ್‌ ನೂರ್‌ ಹಾಗೂ ನೌಹೇರಾ ದಂಪತಿ ಪುತ್ರ ಮೋಹಿನ್‌ ಖಾನ್‌ (15) ಮೃತ ದುರ್ದೈವಿ. ಶಾಲೆ ಮುಗಿದ ಬಳಿಕ ಆರ್‌.ಆರ್‌.ಸಿಗ್ನೇಚರ್‌ ಅಪಾರ್ಟ್‌ ಮೆಂಟ್‌ನಲ್ಲಿ ನೆಲೆಸಿರುವ ತನ್ನ ಗೆಳೆಯನ ಫ್ಲ್ಯಾಟ್‌ಗೆ ಮೋಹಿನ್‌ ತೆರಳಿದ್ದಾನೆ. ಆಗ ಅಪಾರ್ಟ್‌ಮೆಂಟ್‌ 14ನೇ ಮಹಡಿಗೆ ತೆರಳಿ ಆತ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಘಟನೆ ಕುರಿತು ಪೊಲೀಸರಿಗೆ ಅಪಾರ್ಟ್‌ಮೆಂಟ್‌ ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಜನತೆ ಸಿದ್ದರಾಮಯ್ಯ ಜೇಬಲ್ಲಿದ್ದಾರಾ?: ಬಿಎಸ್‌ವೈ

ತರಗತಿಯಿಂದ ಹೊರಗೆ ನಿಲ್ಲಿಸಿ ಶಿಕ್ಷೆ: ಹೆಗಡೆ ನಗರದ ಖಾಸಗಿ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಮೋಹಿನ್‌ ಓದುತ್ತಿದ್ದ. ಶಾಲೆಯಲ್ಲಿ ಮಂಗಳವಾರ ನಡೆದ ಇಂಗ್ಲೀಷ್‌ ಕಿರು ಪರೀಕ್ಷೆಯಲ್ಲಿ ಆತ ನಕಲು ಮಾಡಿ ಶಿಕ್ಷಕರಿಗೆ ಸಿಕ್ಕಿಬಿದ್ದಿದ್ದ. ಈ ತಪ್ಪಿಗೆ ತರಗತಿಯಿಂದ ಹೊರಗೆ ನಿಲ್ಲಿಸಿ ಮೋಹಿನ್‌ ಖಾನ್‌ಗೆ ಶಿಕ್ಷಕರು ಶಿಕ್ಷೆ ನೀಡಿದ್ದರು. ಇದರಿಂದ ಬೇಸರಗೊಂಡ ಮೋಹಿನ್‌, ಮಧ್ಯಾಹ್ನ ಶಾಲೆಯಿಂದ ಹೊರ ಬಂದಿದ್ದಾನೆ. ಕೂಡಲೇ ತಮ್ಮ ಮಗ ಶಾಲೆಯಿಂದ ಹೊರ ಹೋಗಿದ್ದಾನೆ ಎಂದು ಮೃತನ ಪೋಷಕರಿಗೆ ಶಾಲಾ ಸಿಬ್ಬಂದಿ ತಿಳಿಸಿದ್ದಾರೆ. ಈ ವಿಷಯ ತಿಳಿದು ಆತಂಕಗೊಂಡ ಮೋಹಿನ್‌ ಪೋಷಕರು, ಮಗನಿಗೆ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಆದರೆ ಎಲ್ಲಿಯೂ ಪತ್ತೆಯಾಗಿಲ್ಲ. ಕೊನೆಗೆ ಸಂಪಿಗೆಹಳ್ಳಿ ಠಾಣೆಯಲ್ಲಿ ಅವರು ದೂರು ನೀಡಿದ್ದಾರೆ.

ಆದರೆ ಸಂಜೆ ಶಾಲೆ ಮುಗಿಸಿಕೊಂಡು ಹೊರಬಂದ ತನ್ನ ಗೆಳೆಯನ ಜತೆ ಆತನ ಅಪಾರ್ಟ್‌ಮೆಂಟ್‌ಗೆ ಮೋಹಿನ್‌ ತೆರಳಿದ್ದಾನೆ. ಆತ್ಮೀಯ ಒಡನಾಡಿಯಾಗಿದ್ದರಿಂದ ಸಹಪಾಠಿ ಮನೆಗೆ ಮೊದಲಿನಿಂದಲೂ ಮೋಹಿನ್‌ ಬರುತ್ತಿದ್ದ. ಹೀಗಾಗಿ ಆತನಿಗೆ ಅಪಾರ್ಟ್‌ಮೆಂಟ್‌ನ ಬಗ್ಗೆ ಮಾಹಿತಿ ಇತ್ತು. ಶಾಲೆಯಲ್ಲಿ ಶಿಕ್ಷಕರು ಬೈದು ಶಿಕ್ಷೆ ಕೊಟ್ಟಿದ್ದರಿಂದ ನೊಂದಿದ್ದ ಮೋಹಿನ್‌, ಇದೇ ಯಾತನೆಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿರಬಹುದು. ಅಂತೆಯೇ ಶಾಲೆ ಮುಗಿದ ನಂತರ ಗೆಳೆಯನ ಜತೆ ಆತನ ಫ್ಲ್ಯಾಟ್‌ಗೆ ಬಂದ ಮೋಹಿನ್‌, ಸ್ನೇಹಿತನಿಗೆ ತಿಳಿಯದಂತೆ ಮಹಡಿಗೆ ತೆರಳಿ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಕ್ಷಿಸುವ ವೇಳೆ ಜಿಗಿದ ಮೋಹಿನ್‌: ಮಹಡಿಗೆ ತೆರಳಿ ಆತ್ಮಹತ್ಯೆ ಯತ್ನಿಸಿದ್ದ ಮೋಹಿನ್‌ನನ್ನು ನೋಡಿದ ಕೂಡಲೇ ಆತಂಕಗೊಂಡ ಅಪಾರ್ಟ್‌ಮೆಂಟ್‌ ನಿವಾಸಿಗಳು, ಆತನ ರಕ್ಷಣೆಗೆ ಮುಂದಾಗಿದ್ದಾರೆ. ಜನರ ಕೂಗಾಟ ಕೇಳಿ ಭೀತಿಗೊಂಡ ಆತ, 14ನೇ ಮಹಡಿಯಿಂದ ಜಿಗಿದು ಕಟ್ಟೆಯನ್ನು ಹಿಡಿದುಕೊಂಡು ನೇತಾಡುತ್ತಿದ್ದ. ಆಗ ಆತನನ್ನು ನೋಡಿದ ಸಾರ್ವಜನಿಕರು ಮತ್ತಷ್ಟುಜೋರಾಗಿ ಕೂಗಿಕೊಂಡಿದ್ದಾರೆ. ಕೂಡಲೇ ಆತನ ಕೈ ಹಿಡಿದುಕೊಳ್ಳಲು ಸ್ಥಳೀಯರು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಮಹಡಿಯ ಕಟ್ಟೆಹಿಡಿದಿದ್ದ ಆತನ ಕೈ ಜಾರಿದೆ. ಜನರು ಚೀರಾಟಗಳ ಮಧ್ಯೆಯೇ ಗೋಡೆ ಹಿಡಿದುಕೊಂಡಿದ್ದ ತನ್ನ ಕೈಯನ್ನು ಬಿಟ್ಟು ಕೆಲ ಸೆಕೆಂಡ್‌ಗಳಲ್ಲೇ ಮೋಹಿನ್‌ ನೆಲಕ್ಕೆ ಬಿದ್ದಿದ್ದಾನೆ. ಈ ಹೃದಯವಿದ್ರಾವಕ ಘಟನೆ ನೋಡಿದ ಸ್ಥಳೀಯರು ಸ್ತಬ್ಧರಾಗಿದ್ದಾರೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ವೈದ್ಯಕೀಯ ವಿದ್ಯಾರ್ಥಿ ಸಾವು: 8 ವರ್ಷಗಳ ಬಳಿಕ ಸಿಬಿಐಗೆ ವಹಿಸಿದ ಸುಪ್ರೀಂಕೋರ್ಟ್!

ಭದ್ರತಾ ಸಿಬ್ಬಂದಿ ವಿರುದ್ಧ ಆರೋಪ: ಈ ಘಟನೆಯಿಂದ ಕೆರಳಿದ ಮೃತನ ಪೋಷಕರು, ಅಪಾರ್ಟ್‌ಮೆಂಟ್‌ ಭದ್ರತಾ ಸಿಬ್ಬಂದಿ ಮೇಲೆ ಕಿಡಿಕಾರಿದ್ದಾರೆ. ಅಪಾರ್ಟ್‌ಮೆಂಟ್‌ನ ಟೆರೇಸ್‌ಗೆ ತೆರಳಲು ಬಾಲಕನಿಗೆ ಹೇಗೆ ಸಾಧ್ಯವಾಯಿತು. ಪ್ರವೇಶ ದ್ವಾರದಲ್ಲೇ ಆತನ ವಿಚಾರಣೆ ನಡೆಸದೆ ಒಳಗೆ ಬಿಟ್ಟಿದ್ದರಿಂದ ಈ ಘಟನೆ ನಡೆದಿದೆ ಎಂದು ಸಿಬ್ಬಂದಿ ಮೇಲೆ ಪೋಷಕರು ಆರೋಪಿಸಿದ್ದಾರೆ.

Follow Us:
Download App:
  • android
  • ios