ಹೈಕೋರ್ಟ್ ಛೀಮಾರಿ ಹಾಕಿದ್ರೂ ಬುದ್ಧಿ ಕಲಿಯದ BBMP: ರಸ್ತೆಗುಂಡಿಗಳಿಗೆ ಮುಕ್ತಿ ಎಂದು?
* ರಿಪೇರಿ ಬಗ್ಗೆ ಅಸಡ್ಡೆ
* ಬೆಂಗ್ಳೂರಿನ ಪ್ರಮುಖ ರಸ್ತೆಗಳು ಇಂದಿಗೂ ಗುಂಡಿಮಯ
* ತಪ್ಪದ ವಾಹನ ಸವಾರರ ಪರದಾಟ
ಬೆಂಗಳೂರು(ಫೆ.13): ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳ ನವೀಕರಣ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹೈಕೋರ್ಟ್‌ನಿಂದ(High Court) ಛೀಮಾರಿ ಹಾಕಿಸಿಕೊಂಡ ನಂತರವೂ ನಗರದ ಹಲವು ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳು ದುರಸ್ತಿಯಾಗದೇ ವಾಹನ ಸವಾರರು ನಿತ್ಯ ಪರದಾಡಬೇಕಾಗಿದೆ.
ಸಿಎನ್‌ಆರ್ ರಾವ್ ರಸ್ತೆ, ಮಾಗಡಿ ರಸ್ತೆ, ನಾಗರಭಾವಿಯ ಕೆಲ ಉಪ ಮುಖ್ಯರಸ್ತೆಗಳು ಸೇರಿದಂತೆ ಹಲವು ಪ್ರಮುಖ ರಸ್ತೆಗಳು ಇಂದಿಗೂ ದುರಸ್ತಿಯಾಗಿಲ್ಲ. ನಾಯಂಡಹಳ್ಳಿಯ ಮೆಟ್ರೋ ಲೇಔಟ್ ರಸ್ತೆ, ಗಾಂಧಿನಗರದ ಕೆಲವು ರಸ್ತೆಗಳು, ಶ್ರೀರಾಂಪುರ- ಓಕಳಿಪುರಂ 1ನೇ ಮುಖ್ಯರಸ್ತೆ, ಭಾಷ್ಯಂ ವೃತ್ತದಿಂದ ಮಾಗಡಿ ರಸ್ತೆ, ಕುವೆಂಪು ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ ಸಂಪರ್ಕ ಕಲ್ಪಿಸುವ ಶಿವನಗರ ಸಬ್ ಆರ್ಟಿರಿಯಲ್ ರಸ್ತೆ, ಭದ್ರಪ್ಪ ಲೇಔಟ್‌ನಿಂದ ಟಾಟಾ ನಗರ ಮಾರ್ಗವಾಗಿ ಸಾಗುವ ಕೊಡಿಗೆಹಳ್ಳಿ ರಸ್ತೆ, ಸಿಸಿಬಿ ಕೇಂದ್ರ ಕಚೇರಿಯಿಂದ ರಾಯನ್ ವೃತ್ತದಿಂದ ಚಾಮರಾಜಪೇಟೆಗೆ ಸಾಗುವ ರಸ್ತೆ ಮತ್ತು ಕೆ.ಆರ್.ಮಾರುಕಟ್ಟೆ ಮೆಟ್ರೋ ನಿಲ್ದಾಣದಿಂದ ಅಪೆಕ್ಸ್ ಬ್ಯಾಂಕ್‌ಗೆ ತೆರಳುವ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿನ ಗುಂಡಿಗಳನ್ನು(Pothole) ಸರಿಪಡಿಸುವ ಗೋಜಿಗೆ ಪಾಲಿಕೆ ಹೋಗಿಲ್ಲ.
Bengaluru: ರಸ್ತೆ ಗುಂಡಿ ತಪ್ಪಿಸಲು ಹೋಗಿ ಲಾರಿ ಹರಿದು ಮಹಿಳೆ ಸಾವು
ಪೈಪ್‌ಲೈನ್ ಕಾಮಗಾರಿ ಕಿರಿಕಿರಿ:
ಮಲ್ಲೇಶ್ವರಂನ ಸಿಎನ್‌ಆರ್ ರಾವ್ ರಸ್ತೆಯಲ್ಲಿ ಜಲಮಂಡಳಿ 700 ಎಂಎಂ ಮತ್ತು 300 ಎಂಎಂ ಪೈಪ್ ಹಾಕುವ ಕಾಮಗಾರಿ(Work) ನಡೆಸುತ್ತಿದೆ. ಕಾಮಗಾರಿ ವಿಳಂಬದಿಂದಾಗಿ ಜಲಮಂಡಳಿ(Water Board) ಪೈಪ್‌ಲೈನ್ ಅಳವಡಿಸಲು ತೆಗೆದ ಗುಂಡಿ ಮುಚ್ಚಿಲ್ಲ. ಒಂದು ತಿಂಗಳು ಕಳೆದರೂ ಸಹ ಈ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿ ಮುಗಿಯುವಂತೆ ಕಾಣುತ್ತಿಲ್ಲ. ಇದು ವಾಹನ ಸವಾರರ ಆಕ್ರೋಶಕ್ಕೆ ಗುರಿಯಾಗಿದೆ.
ಮತ್ತೆ ಕಿತ್ತು ಬಂದ ತೇಪೆ:
ಇನ್ನು ಭದ್ರಪ್ಪ ಲೇಔಟ್‌ನಿಂದ ಕೊಡಿಗೆಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಳೆದ ಎರಡು ತಿಂಗಳ ಹಿಂದೆ ರಸ್ತೆ ಗುಂಡಿಗಳಿಗೆ ಹಾಕಿದ್ದ ತೇಪೆ ಕಿತ್ತು ಬಂದಿದ್ದು, ಮತ್ತೆ ಎಲ್ಲೆಡೆ ರಸ್ತೆಗುಂಡಿಗಳು ಕಂಡು ಬಂದಿವೆ. ಒಂದೂವರೆ ವರ್ಷದಿಂದ ಈ ರಸ್ತೆ ಸಂಪೂರ್ಣ ಹಾಳಾಗಿದ್ದು, ಜೆಲ್ಲಿ ಕಲ್ಲುಗಳು ಹೊರ ಬಂದಿವೆ. ಜೊತೆಗೆ ಈ ರಸ್ತೆಯಲ್ಲಿ ಕೇವಲ 500 ಮೀಟರ್ ಅಂತರದಲ್ಲಿ ಏಳೆಂಟು ಮ್ಯಾನ್‌ಹೋಲ್‌ಗಳಿದ್ದು, ಅವುಗಳ ಸುತ್ತಮುತ್ತಲೂ ಗುಂಡಿ ಬಿದ್ದಿದೆ. ಈ ಕುರಿತು ಬಿಬಿಎಂಪಿ ನಿಯಂತ್ರಣ ಕೊಠಡಿಗೆ ನಾಲ್ಕೈದು ಬಾರಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ನಿವಾಸಿಗಳ ಆರೋಪಿಸುತ್ತಾರೆ.
ಈ ರಸ್ತೆಯು ಕೊಡಿಗೇಹಳ್ಳಿ, ಸಹಕಾರ ನಗರದಿಂದ ಹೆಬ್ಬಾಳ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ಜೊತೆಗೆ ಹೆಬ್ಬಾಳ ರಿಂಗ್ ರಸ್ತೆಯಿಂದ ಬಳ್ಳಾರಿ ರಸ್ತೆಗೆ ಸಂಪರ್ಕವನ್ನು ಒದಗಿಸುತ್ತದೆ. ಹಾಗಿದ್ದರೂ ಬಿಬಿಎಂಪಿ ರಸ್ತೆ ಗುಂಡಿ ಮುಚ್ಚು ಮತ್ತು ನವೀಕರಿಸುವ ಕೆಲಸಕ್ಕೆ ಮುಂದಾಗಿಲ್ಲ.
Bengaluru Roads: ರಸ್ತೆಗಳು ದೀರ್ಘಾವಧಿಗೆ ಏಕೆ ಬಾಳಲ್ಲ ಎಂದು ಪ್ರಶ್ನಿಸಿದ ಹೈಕೋರ್ಟ್
ಶ್ರೀರಾಂಪುರ, ಓಕಳಿಪುರ, ಗಾಂಧಿನಗರ, ಕುವೆಂಪು ನಗರ ಮತ್ತು ಶೇಷಾದ್ರಿಪುರಂ ಸೇರಿದಂತೆ ಹಲವಡೆ ಇಂತಹದ್ದೇ ಸಮಸ್ಯೆಗಳಿವೆ. ಹಲವು ರಸ್ತೆಗಳಲ್ಲಿ ಜಲಮಂಡಳಿ ಮತ್ತು ಬೆಸ್ಕಾಂ(BESCOM) ಕಾಮಗಾರಿಗಾಗಿ ತೆಗೆದ ಗುಂಡಿಗಳು ಹೊರತುಪಡಿಸಿ ಮಳೆ ಮತ್ತು ವಾಹನ ಸಂಚಾರದಿಂದ ಆಗಿರುವ ಗುಂಡಿಗಳು ಸಾಕಷ್ಟಿವೆ. ಇನ್ನಾದರೂ ಬಿಬಿಎಂಪಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಬೇಕೆಂದು ಶ್ರೀರಾಂಪುರದ ನಿವಾಸಿ ಅಜಿತ್ ಕುಮಾರ್ ಆಗ್ರಹಿಸಿದ್ದಾರೆ.
ಮುಖ್ಯರಸ್ತೆಗಳು ಮತ್ತು ಉಪ ರಸ್ತೆಗಳ ಗುಂಡಿಗಳಲ್ಲಿ ಶೇ.90ರಷ್ಟು ಮುಚ್ಚಿದ್ದೇವೆ. ದಾಸರಹಳ್ಳಿ ವಲಯವೊಂದನ್ನು ಬಿಟ್ಟು ಉಳಿದ ಎಲ್ಲ ಕಡೆ ಶೇ.100ರಷ್ಟು ಕೆಲಸವಾಗಿದೆ. ವಾರ್ಡ್ ಮಟ್ಟದಲ್ಲಿ 280 ಕಿ.ಮೀ. ಮಾತ್ರ ರಸ್ತೆ ಗುಂಡಿಗಳು ಇವೆ. ಈ ಕುರಿತು ಟೆಂಡರ್‌ಗಳನ್ನು(Tender) ಕರೆದು ಕಾರ್ಯಾದೇಶವನ್ನು ಕೊಟ್ಟಿದ್ದೇವೆ. ಆದಷ್ಟು ಬೇಗದಲ್ಲಿ ವಾರ್ಡ್ ರಸ್ತೆಗಳು, ಪ್ರಮುಖ ರಸ್ತೆಗಳ ಗುಂಡಿ ಮುಚ್ಚುತ್ತೇವೆ ಅಂತ ಬಿಬಿಎಂಪಿ ಮೂಲಸೌಕರ್ಯ ಮತ್ತು ರಸ್ತೆ ಮುಖ್ಯ ಎಂಜಿನಿಯರ್, ಪ್ರಹ್ಲಾದ್ ತಿಳಿಸಿದ್ದಾರೆ.