Asianet Suvarna News Asianet Suvarna News

ಬೆಂಗಳೂರಲ್ಲಿ ಅಕ್ರಮ ವಾಣಿಜ್ಯ ಕಟ್ಟಡ ಪತ್ತೆ ಶುರು!

ಅಕ್ರಮ ವಾಣಿಜ್ಯ ಉದ್ದಿಮೆಗಳನ್ನು ಪತ್ತೆಹಚ್ಚಿ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದ್ದು, ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ಅಧಿಕೃತ ಮತ್ತು ಅನಧಿಕೃತ ವಾಣಿಜ್ಯಉದ್ದಿಮೆಗಳ ಸಮೀಕ್ಷೆ ಆರಂಭಿಸಿದೆ.
 

BBMP Starts Survey on Illegal Building in Bengaluru
Author
Bengaluru, First Published Dec 13, 2019, 7:43 AM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಡಿ.13): ನಗರದಲ್ಲಿರುವ ಅನಧಿಕೃತ ಪಬ್‌, ಬಾರ್‌, ರೆಸ್ಟೋರೆಂಟ್‌ ಸೇರಿದಂತೆ ವಸತಿ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಕ್ರಮ ವಾಣಿಜ್ಯ ಉದ್ದಿಮೆಗಳನ್ನು ಪತ್ತೆಹಚ್ಚಿ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದ್ದು, ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ಅಧಿಕೃತ ಮತ್ತು ಅನಧಿಕೃತ ವಾಣಿಜ್ಯಉದ್ದಿಮೆಗಳ ಸಮೀಕ್ಷೆ ಆರಂಭಿಸಿದೆ.

ಕಳೆದ ಸೆಪ್ಟಂಬರ್‌ನಲ್ಲಿ ನಗರದ ವಸತಿ ಪ್ರದೇಶದಲ್ಲಿರುವ ಅನಧಿಕೃತ ವಾಣಿಜ್ಯಉದ್ದಿಮೆಗಳು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ಉದ್ದಿಮೆಗಳ ವಿರುದ್ಧ ಬಿಬಿಎಂಪಿಗೆ ದೂರು ನೀಡುವ ಆಂದೋಲನವನ್ನು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಆರಂಭಿಸಿದ್ದರು. ತದ ನಂತರ ನ.5ರಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅವರನ್ನು ಭೇಟಿ ಮಾಡಿ ವಸತಿ ಪ್ರದೇಶದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ಅನಧಿಕೃತ ಉದ್ದಿಮೆಗಳ ತೆರವಿಗೆ ರಾಜೀವ್‌ ಚಂದ್ರಶೇಖರ್‌ ಆಗ್ರಹಿಸಿದ್ದರು.

ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ನಗರ 198 ವಾರ್ಡ್‌ಗಳಲ್ಲಿ ‘ವಾರ್ಡ್‌ವಾರು’ ಅನಧಿಕೃತ ಪಬ್‌, ಬಾರ್‌, ರೆಸ್ಟೋರೆಂಟ್‌ ಸೇರಿದಂತೆ ವಾಣಿಜ್ಯ ಉದ್ದಿಮೆಗಳ ಸಮೀಕ್ಷೆಗೆ ಆದೇಶಿಸಿದ್ದು, ಡಿ.20ರೊಳಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಕಳೆದ ಐದು ದಿನಗಳಿಂದ ಬಿಬಿಎಂಪಿ 198 ವಾರ್ಡ್‌ಗಳ ಹಿರಿಯ ಆರೋಗ್ಯ ಪರಿವೀಕ್ಷಕರು ಅಧಿಕೃತ ಮತ್ತು ಅನಧಿಕೃತ ಉದ್ದಿಮೆಗಳ ಅಂಕಿ ಅಂಶಗಳನ್ನು ಕಲೆ ಹಾಕುತ್ತಿದ್ದಾರೆ.

ಸಮೀಕ್ಷೆ ವಿಧಾನ:

ಬಿಬಿಎಂಪಿಯ ಪ್ರತಿ ವಾರ್ಡ್‌ಗೆ ನೇಮಿಸಲಾಗಿರುವ ಆರೋಗ್ಯ ವಿಭಾಗ ಹಿರಿಯ ಪರಿವೀಕ್ಷಕರಿಗೆ ಸಮೀಕ್ಷೆ ನಡೆಸುವುದಕ್ಕೆ ಸೂಚನೆ ನೀಡಲಾಗಿದೆ. ಸಮೀಕ್ಷೆ 15 ದಿನ ಕಾಲಾವಕಾಶ ನೀಡಲಾಗಿದೆ. ಹಿರಿಯ ಪರಿವೀಕ್ಷಕರು ತಮ್ಮ ವಾರ್ಡ್‌ನ ಪ್ರತಿ ಬೀದಿಯಲ್ಲಿರುವ ವಾಣಿಜ್ಯ ಮಳಿಗೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಯಾವ ಉದ್ದಿಮೆ ನಡೆಸಲಾಗುತ್ತಿದೆ. ವಿಳಾಸ, ಉದ್ದಿಮೆದಾರರ ಹೆಸರು, ಬಿಬಿಎಂಪಿಯಿಂದ ಪರವಾನಗಿ ಪಡೆಯಲಾಗಿದೆಯೇ ಅಥವಾ ಇಲ್ಲವೇ? ಪರಿಶೀಲನೆ ನಡೆಸಲಿದ್ದಾರೆ.

ಒಂದು ವೇಳೆ ಪರವಾನಗಿ ಪಡೆದಿರುವ ಉದ್ದೇಶ, ಪರವಾನಗಿ ನವೀಕರಿಸಲಾಗಿದೆಯೇ? ಅಥವಾ ಇಲ್ಲವೇ ಎಂಬೆಲ್ಲ ಮಾಹಿತಿ ಸಂಗ್ರಹಿಸಲಿದ್ದಾರೆ. ಅದರೊಂದಿಗೆ ಯಾವ ರಸ್ತೆಯಲ್ಲಿ ಎಷ್ಟುವಾಣಿಜ್ಯ ಮಳಿಗೆಗಳಿವೆ. ಅದರಲ್ಲಿ ಎಷ್ಟುಅಧಿಕೃತ, ಎಷ್ಟುಅನಧಿಕೃತ ಎಂಬ ಮಾಹಿತಿಯನ್ನು ಪರಾಮರ್ಶಿಸಿ ವರದಿ ನೀಡಲಿದ್ದಾರೆ ಎಂದು ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗ ಮುಖ್ಯಆರೋಗ್ಯಅಧಿಕಾರಿ ಡಾ.ವಿಜಯೇಂದ್ರ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಸಮೀಕ್ಷೆ ಬಳಿಕ ಮುಂದಿನ ಕ್ರಮ:

ನಗರದಲ್ಲಿ ಲಕ್ಷಾಂತರ ಸಂಖ್ಯೆಯ ಉದ್ದಿಮೆಗಳಿದ್ದರೂ ಬಿಬಿಎಂಪಿಯಿಂದ ಅಧಿಕೃತವಾಗಿ ಉದ್ದಿಮೆ ಪರವಾನಗಿ ಪಡೆದು ಉದ್ದಿಮೆ ನಡೆಸುತ್ತಿರುವವರ ಸಂಖ್ಯೆ ಕೇವಲ 47 ಸಾವಿರ. ಆದರೆ, ಬೆಸ್ಕಾಂನಲ್ಲಿ ಸುಮಾರು ಐದು ಲಕ್ಷಕ್ಕೂ ಅಧಿಕ ಗ್ರಾಹಕರು ವಾಣಿಜ್ಯ ಬಳಕೆಗೆ ವಿದ್ಯುತ್‌ ಸಂಪರ್ಕ ಪಡೆದುಕೊಂಡಿದ್ದಾರೆ. ಎರಡೂ ಅಂಕಿ ಅಂಶಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಬಿಬಿಎಂಪಿಗೆ ವಂಚಿಸಿ ಉದ್ದಿಮೆ ನಡೆಸುವವರ ವಿರುದ್ಧ ಸಮೀಕ್ಷೆ ನಂತರ ಕ್ರಮ ಕೈಗೊಳ್ಳುವುದಕ್ಕೆ ಬಿಬಿಎಂಪಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ವಲಯ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ

ವಸತಿ ಪ್ರದೇಶದಲ್ಲಿ ಉದ್ದಿಮೆ ಪರವಾನಗಿ ನೀಡುವುದಕ್ಕೆ ಅವಕಾಶವಿಲ್ಲ. ಆದರೂ ನಗರದ ಹಲವು ವಸತಿ ಪ್ರದೇಶದಲ್ಲಿ ಹೋಟಲ್‌, ಔಷಧಿ ಅಂಗಡಿ, ತರಕಾರಿ ವ್ಯಾಪಾರ ನಡೆಯುತ್ತಿದೆ. ಇದರಿಂದ ಬಿಬಿಎಂಪಿಗೆ ಆದಾಯ ನಷ್ಟಉಂಟಾಗುತ್ತಿದೆ. ಅದನ್ನು ತಡೆಗಟ್ಟುವುದರ ಜತೆಗೆ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಕ್ರಮಕೈಗೊಳ್ಳಬೇಕಾದ ಹಿನ್ನೆಲೆಯಲ್ಲಿ ಅತ್ಯವಶ್ಯಕವಾದ ಉದ್ದಿಮೆಗೆ ಮಾತ್ರ ವಸತಿ ಪ್ರದೇಶದಲ್ಲಿ ಅವಕಾಶ ನೀಡುವ ಸಂಬಂಧಿಸಿದಂತೆ ‘ವಲಯ ನಿಯಂತ್ರಣ ಕಾಯ್ದೆ’ಗೆ ತಿದ್ದುಪಡಿಗೆ ಬಿಬಿಎಂಪಿ ಮುಂದಾಗಿದೆ. ಬೈಲಾ ತಿದ್ದುಪಡಿ ಮಾಡಿ ಸರ್ಕಾರ ಅನುಮೋದನೆಗೆ ಕಳುಹಿಸಿಕೊಟ್ಟಿದೆ.

ಉದ್ದಿಮೆ ಪರವಾನಗಿ ಪತ್ತೆಯಿಂದ ಆಸ್ತಿ ತೆರಿಗೆ ಹಾಗೂ ಪರವಾನಗಿ ಶುಲ್ಕು ಹೀಗೆ ಎರಡು ರೀತಿಯಲ್ಲಿ ಪಾಲಿಕೆಗೆ ಆದಾಯ ಬರಲಿದೆ. ಎಷ್ಟುಆದಾಯ ಎಂಬುದನ್ನು ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ. ಸಮೀಕ್ಷೆ ಪೂರ್ಣಗೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.

-ಬಿ.ಎಚ್‌.ಅನಿಲ್‌ ಕುಮಾರ್‌, ಬಿಬಿಎಂಪಿ ಆಯುಕ್ತರು.

ಅಧಿಕೃತ ಪರವಾನಗಿ ಪಡೆದ ಉದ್ದಿಮೆಗಳ ವಿವರ

ವಲಯ ಉದ್ದಿಮೆ ಸಂಖ್ಯೆ

ದಕ್ಷಿಣ 11,044

ಪೂರ್ವ 8,293

ಪಶ್ಚಿಮ 13,487

ಯಲಹಂಕ 4,770

ಮಹದೇವಪುರ 5,046

ಬೊಮ್ಮನಹಳ್ಳಿ 3,047

ದಾಸರಹಳ್ಳಿ 2,434

ಆರ್‌ಆರ್‌ನಗರ 319

ಒಟ್ಟು 48,440

Follow Us:
Download App:
  • android
  • ios