ಬೆಂಗಳೂರಿನಲ್ಲಿ ಇದೇ ಡಿಸೆಂಬರ್ 30 ರಂದು ಚುನಾವಣೆ ನಡೆಯಲಿದ್ದು, ಚುನಾವಣೆಗೆ ಪಕ್ಷಗಳು ಸಜ್ಜಾಗುತ್ತಿವೆ. ಚುನಾವಣಾ ತಯಾರಿಯೂ ಜೋರಾಗಿದೆ. 

ಬೆಂಗಳೂರು [ಡಿ.20]:  ಕಳೆದ ಎರಡು ಬಾರಿ ಬಿಬಿಎಂಪಿ ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಮುಂದೂಡಿದ್ದ ಚುನಾವಣೆಯನ್ನು ಡಿ.30ರಂದು ನಡೆಸುವ ಸಂಬಂಧ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಗುರುವಾರ ಅಧಿಸೂಚನೆ ಹೊರಡಿಸಿದ್ದಾರೆ.

12 ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಕ್ಕೆ ಡಿ.30ರ ಸೋಮವಾರ ಬೆಳಗ್ಗೆ 8.30ರಿಂದ 9.30ರವರೆಗೆ ನಾಮಪತ್ರ ಸ್ವೀಕರಿಸಲಾಗುವುದು. ನಂತರ 11.30ಕ್ಕೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ಬಿಬಿಎಂಪಿಯ ಕೇಂದ್ರ ಕಚೇರಿಯ ಕೆಂಪೇಗೌಡ ಪೌರಸಭಾಂಗಣದಲ್ಲಿ ನಡೆಯಲಿದೆ.

ಕಳೆದ ಅಕ್ಟೋಬರ್‌ ಒಂದು ಮತ್ತು ಡಿಸೆಂಬರ್‌ ನಾಲ್ಕರಂದು ಸ್ಥಾಯಿ ಸಮಿತಿಗಳ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿದ್ದರೂ ಯಾವ ಸದಸ್ಯರೂ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದ ಕಾರಣ ಚುನಾವಣೆಯನ್ನು ಮುಂದೂಡಲಾಗಿತ್ತು.

ಸ್ಥಾಯಿ ಸಮಿತಿ ಚುನಾವಣೆ ಹೇಗೆ?

ಪ್ರತಿ ಸ್ಥಾಯಿ ಸಮಿತಿಗೆ 11 ಜನ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. 11ಕ್ಕಿಂತ ಹೆಚ್ಚು ನಾಮಪತ್ರ ಬಂದಲ್ಲಿ ಮಾತ್ರ ಚುನಾವಣೆ ನಡೆಸಲಾಗುತ್ತದೆ. ಇಲ್ಲವಾದರೆ ಅವಿರೋಧ ಆಯ್ಕೆ ಎಂದು ಪ್ರಾದೇಶಿಕ ಆಯುಕ್ತರು ಘೋಷಿಸಲಿದ್ದಾರೆ.

ಆಡಳಿತ ಪಕ್ಷದ ಸಂಖ್ಯಾಬಲ ಏರಿಕೆ

ಇತ್ತೀಚೆಗೆ ನಡೆದ ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಜತೆಗೆ ರಾಜ್ಯಸಭಾ ಸದಸ್ಯ ಕೆ.ಸಿ.ರಾವåಮೂರ್ತಿ ಕಾಂಗ್ರೆಸ್‌ ತೊರೆದು ಬಿಜೆಪಿಯಿಂದ ರಾಜ್ಯಸಭೆಗೆ ಮರು ಆಯ್ಕೆಗೊಂಡಿರುವುದಕ್ಕೆ ಬಿಜೆಪಿಯ ಸಂಖ್ಯಾ ಬಲ 125ರಿಂದ 129ಕ್ಕೆ ಏರಿಕೆಯಾಗಿದೆ. ಶಿವಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಜಯಗಳಿಸಿದ ರಿಜ್ವಾನ್‌ ಅರ್ಷದ್‌, ಈ ಹಿಂದೆ ವಿಧಾನ ಪರಿಷತ್ತು ಸದಸ್ಯರಾಗಿದ್ದಾರೆ. ಆದರೆ ಕೆ.ಸಿ.ರಾಮಮೂರ್ತಿ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರ್ಪಡೆಗೊಂಡಿದ್ದರಿಂದ ಕಾಂಗ್ರೆಸ್‌ನ ಸಂಖ್ಯಾಬಲ 104ರಿಂದ 103ಕ್ಕೆ ಕುಸಿದಿದೆ. ಈ ಮೂಲಕ ಬಿಬಿಎಂಪಿ ಕೌನ್ಸಿಲ್‌ ಮತದಾರರ ಸಂಖ್ಯೆ257ರಿಂದ 260ಕ್ಕೆ ಏರಿಕೆಯಾಗಿದೆ.

ಕಳೆದ ಅ.1ರ ಮೇಯರ್‌ ಚುನಾವಣೆ ಸಂದರ್ಭದಲ್ಲಿ ಅನರ್ಹಗೊಂಡಿದ್ದ ನಗರ ಐದು ವಿಧಾನಸಭಾ ಕ್ಷೇತ್ರ ಶಾಸಕರನ್ನು ಕೌನ್ಸಿಲ್‌ ಮತದಾರ ಪಟ್ಟಿಯಿಂದ ಕೈಬಿಡಲಾಗಿತ್ತು. ಉಪಚುನಾವಣೆ ನಂತರ ವಿಜೇತ ಅಭ್ಯರ್ಥಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ.

12 ಸದಸ್ಯರ ಅನರ್ಹತೆಗೆ ಪತ್ರ

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕಾಂಗ್ರೆಸ್‌ ಪಕ್ಷದ 12 ಸದಸ್ಯರನ್ನು ಈಗಾಗಲೇ ಪಕ್ಷದಿಂದ ಉಚ್ಚಾಟಿಸಲಾಗಿದೆ. ಅವರ ಕೌನ್ಸಿಲ್‌ ಸದಸ್ಯತ್ವ ರದ್ದು ಪಡಿಸುವಂತೆ ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಶುಕ್ರವಾರ ಪತ್ರ ಬರೆಯಲಾಗುವುದು ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ಮಾಹಿತಿ ನೀಡಿದ್ದಾರೆ.

ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಹಂಚಿಕೆ ಬಗ್ಗೆ ಇನ್ನು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಬಿಜೆಪಿಯಿಂದ ಆಯ್ಕೆಗೊಂಡ ಸದಸ್ಯರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು. ಪಕ್ಷೇತರ ಸದಸ್ಯರು ಬಿಜೆಪಿಗೆ ಬೇಷರತ್‌ ಬೆಂಬಲ ನೀಡಿದ್ದಾರೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಕೆಲ ಪಾಲಿಕೆ ಸದಸ್ಯರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಯಾರಿಗೆ ಯಾವ ಸ್ಥಾನಮಾನ, ಗೌರವ ನೀಡಬೇಕು ಎಂಬುದರ ಬಗ್ಗೆ ಪಕ್ಷದ ವೇದಿಕೆಯಲ್ಲಿ ತೀರ್ಮಾನಿಸಲಾಗುವುದು.

- ಮುನೀಂದ್ರ ಕುಮಾರ್‌, ಆಡಳಿತ ಪಕ್ಷದ ನಾಯಕ

ಕಾಂಗ್ರೆಸ್‌ನಿಂದ ಉಚ್ಚಾಟನೆ ಮಾಡಿದ 12 ಬಿಬಿಎಂಪಿ ಸದಸ್ಯರಿಗೆ ಯಾವುದೇ ಸ್ಥಾಯಿ ಸಮಿತಿ ಸದಸ್ಯತ್ವ ನೀಡಬಾರದು. ಹಾಗಿದ್ದರೆ ಮಾತ್ರ ಹೊಂದಾಣಿಕೆಯಿಂದ ಸ್ಥಾಯಿ ಸಮಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆಗೆ ಅವಕಾಶ ನೀಡಲಾಗುವುದು. ಇಲ್ಲವಾದರೆ, ಚುನಾವಣೆ ನಡೆಸುವಂತೆ ಆಗ್ರಹಿಸುತ್ತೇವೆ.

- ಅಬ್ದುಲ್‌ ವಾಜೀದ್‌, ವಿರೋಧ ಪಕ್ಷದ ನಾಯಕ

ಪ್ರಮುಖ ಸ್ಥಾಯಿ ಸಮಿತಿ ಉಚ್ಚಾಟಿತರ ಪಾಲು

ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಉಚ್ಚಾಟಿತ ಸದಸ್ಯರಿಗೆ ಐದು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ನೀಡುವ ಬಗ್ಗೆ ಈಗಾಗಲೇ ಬಿಜೆಪಿ ಪಕ್ಷದ ಪ್ರಮುಖ ಮುಖಂಡರು ಭರವಸೆ ನೀಡಿದ್ದಾರೆ. ಅದರಲ್ಲೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ನಗರ ಯೋಜನೆ, ಬೃಹತ್‌ ಸಾರ್ವಜನಿಕ ಕಾಮಗಾರಿ, ವಾರ್ಡ್‌ ಮಟ್ಟದ ಸಾರ್ವಜನಿಕ ಕಾಮಗಾರಿ ಸೇರಿದಂತೆ ಪ್ರಮುಖ ಸ್ಥಾಯಿ ಸಮಿತಿಗಳನ್ನು ಉಚ್ಚಾಟಿತರ ಪಾಲಾಗಲಿವೆ. ಉಳಿದ ಏಳು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳು ಬಿಜೆಪಿ ಪಕ್ಷದ ಸದಸ್ಯರಿಗೆ ನೀಡುವ ಕುರಿತು ಚರ್ಚೆಯಾಗಿದೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.


ಮತದಾರರ ಲೆಕ್ಕಾಚಾರ:

ಒಟ್ಟು ಮತದಾರರು: 260

ಕಾಂಗ್ರೆಸ್‌:103

ಬಿಬಿಎಂಪಿ ಸದಸ್ಯರು: 76

ಲೋಕಸಭಾ ಸದಸ್ಯರು: 01

ರಾಜ್ಯಸಭಾ ಸದಸ್ಯರು: 05

ಶಾಸಕರು: 12

ವಿಧಾನಪರಿಷತ್‌ ಸದಸ್ಯರು: 9


ಜೆಡಿಎಸ್‌:21

ಬಿಬಿಎಂಪಿ ಸದಸ್ಯರು: 14

ರಾಜ್ಯಸಭಾ ಸದಸ್ಯರು: 01

ಶಾಸಕರು: 01

ವಿಧಾನಪರಿಷತ್‌ ಸದಸ್ಯರು: 05


ಬಿಜೆಪಿ:129

ಬಿಬಿಎಂಪಿ ಸದಸ್ಯರು: 101

ಲೋಕಸಭಾ ಸದಸ್ಯರು: 04

ರಾಜ್ಯಸಭಾ ಸದಸ್ಯರು: 03

ಶಾಸಕರು: 14

ವಿಧಾನಪರಿಷತ್‌ ಸದಸ್ಯರು: 07

ಬಿಬಿಎಂಪಿಯ ಪಕ್ಷೇತರರು: 07