ಬೆಂಗಳೂರು(ಡಿ.12): ಉಪಚುನಾವಣೆಯಲ್ಲಿ ನಗರದ ನಾಲ್ಕು ವಿಧಾನಸಭಾ ಕ್ಷೇತ್ರಕ್ಕೆ ಹೊಸ ಶಾಸಕರು ಆಯ್ಕೆ ಆಗಿರುವುದರಿಂದ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆಯ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕಾದ ಹಿನ್ನೆಲೆಯಲ್ಲಿ ಹೊಸ ವರ್ಷಕ್ಕೆ 12 ಸ್ಥಾಯಿ ಸಮಿತಿಯ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

ಪಾಲಿಕೆಯ 12 ಸ್ಥಾಯಿ ಸಮಿತಿಯ ಅಧಿಕಾರ ಅವಧಿ ಡಿ.5ಕ್ಕೆ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಡಿ.4ರಂದು ಸ್ಥಾಯಿ ಸಮಿತಿ ಸದಸ್ಯ ಆಯ್ಕೆಗೆ ಪ್ರಾದೇಶಿಕ ಆಯುಕ್ತರು ಚುನಾವಣೆ ಅಧಿಸೂಚನೆ ಹೊರಡಿಸಿದ್ದರು. ಆದರೆ, ಬಿಬಿಎಂಪಿ ಸದಸ್ಯರು ಉಪಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗಿ ಆಗಿದ್ದರಿಂದ ಸ್ಥಾಯಿ ಸಮಿತಿ ಚುನಾವಣೆಗೆ ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಡಿ.4ರ ಸ್ಥಾಯಿ ಸಮಿತಿ ಚುನಾವಣೆಯನ್ನು ಅನಿವಾರ್ಯವಾಗಿ ಮುಂದೂಡಲಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಉಪಚುನಾವಣೆಯಲ್ಲಿ ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಹೊಸದಾಗಿ ಶಾಸಕರು ಆಯ್ಕೆಯಾಗಿದ್ದಾರೆ. ಜತೆಗೆ ರಾಜ್ಯಸಭೆಗೆ ರಾಜ್ಯದಿಂದ ಕೆ.ಸಿ.ರಾಮಮೂರ್ತಿ ಆಯ್ಕೆಯಾಗಿದ್ದಾರೆ. ಹಾಗಾಗಿ, ಬಿಬಿಎಂಪಿಯ ಕೌನ್ಸಿಲ್‌ ಮತದಾರರ ಪಟ್ಟಿಪರಿಷ್ಕರಣೆ ಮಾಡಬೇಕಾಗಿದೆ. ಜತೆಗೆ ಸ್ಥಾಯಿ ಸಮಿತಿ ಚುನಾವಣೆಗೆ ಒಂದು ವಾರ ಮೊದಲು ಅಧಿಸೂಚನೆ ಹೊರಡಿಸಬೇಕಾಗಿದೆ. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೆ ಸುಮಾರು 15 ರಿಂದ 20 ದಿನ ಬೇಕಾಗುವುದರಿಂದ ಸ್ಥಾಯಿ ಸಮಿತಿ ಚುನಾವಣೆ ಹೊಸ ವರ್ಷಕ್ಕೆ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ.

ಕೇವಲ 8 ತಿಂಗಳ ಅಧಿಕಾರ:

ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿ 2020ರ ಸೆಪ್ಟಂಬರ್‌ಗೆ ಅಂತ್ಯಗೊಳ್ಳುವುದರಿಂದ ಜನವರಿಯಲ್ಲಿ ನೇಮಕವಾಗುವ 12 ಸ್ಥಾಯಿ ಸಮತಿ ಸದಸ್ಯರು, ಅಧ್ಯಕ್ಷರಿಗೆ ಕೇವಲ ಎಂಟು ತಿಂಗಳು ಮಾತ್ರ ಅಧಿಕಾರ ಸಿಗಲಿದೆ. ಕಳೆದ ನಾಲ್ಕು ವರ್ಷ ಸ್ಥಾಯಿ ಸಮಿತಿ ಚುನಾವಣೆ ವಿಳಂಬ ಮಾಡಿಕೊಂಡು ಬಂದ ಹಿನ್ನೆಲೆಯಲ್ಲಿ ಈ ಬಾರಿ ಆಯ್ಕೆಯಾಗುವ ಸ್ಥಾಯಿ ಸಮಿತಿ ಸದಸ್ಯರಿಗೆ ಮತ್ತು ಅಧ್ಯಕ್ಷರಿಗೆ ಅಧಿಕಾರಕ್ಕೆ ಕತ್ತರಿ ಬೀಳಲಿದೆ.