ಬೆಂಗಳೂರು(ಫೆ.16): ಮೂವತ್ತಕ್ಕೂ ಹೆಚ್ಚು ಜನರು ಶುಕ್ರವಾರ ಏಕಾಏಕಿ ತಮ್ಮ ಕಚೇರಿಗೆ ನುಗ್ಗಿ ಆಸ್ತಿ ಕಡತದ ವಿಚಾರವಾಗಿ ದೌರ್ಜನ್ಯ ನಡೆಸಿದ್ದಲ್ಲದೆ, ಕಚೇರಿಗೂ ಬೀಗ ಹಾಕಿ ಬಂಧನದಲ್ಲಿಟ್ಟಿದ್ದಾಗಿ ಆರೋಪಿಸಿ ಬಿಬಿಎಂಪಿ ವಿಜಯನಗರದ ಉಪ ವಿಭಾಗದ ಕಂದಾಯಾಧಿಕಾರಿ ಹಾಗೂ ಇತರೆ ಸಿಬ್ಬಂದಿ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಂದಾಯಾಧಿಕಾರಿ ನರಸಿಂಹನಾಯಕ, ಉಪ ಕಂದಾಯಾಧಿಕಾರಿ ಎಸ್‌.ಎಂ.ನಿರ್ಮಲ, ಟ್ಯಾಕ್ಸ್‌ ಇನ್‌ಸ್ಪೆಕ್ಟರ್‌ ಜೆ.ವಿಭ ಸೇರಿದಂತೆ ಒಟ್ಟು 18 ಜನ ಅಧಿಕಾರಿ ಹಾಗೂ ಸಿಬ್ಬಂದಿಗಳು ಶನಿವಾರ ಈ ಸಂಬಂಧ ದೂರು ದಾಖಲಿಸಿದ್ದಾರೆ.
ಸ್ಥಳೀಯರಾದ ಶಿವಕುಮಾರ್‌, ಓಂಕಾರ್‌, ಲಕ್ಷ್ಮೇನಾರಾಯಣ್‌, ಸಚೀವ್‌, ದಕ್ಷಿಣ ಮೂರ್ತಿ ಸೇರಿದಂತೆ ಒಟ್ಟು 30 ಜನ ಶುಕ್ರವಾರ ಸಂಜೆ 5ರ ವೇಳೆಗೆ ಹೊಸಹಳ್ಳಿ ವಾರ್ಡ್‌ನಲ್ಲಿರುವ ನಮ್ಮ ಕಚೇರಿಗೆ ಏಕಾಏಕಿ ನುಗ್ಗಿ ಸ್ವತ್ತಿನ ಸಂಖ್ಯೆ 13ಕ್ಕೆ ಸಂಬಂಧಿಸಿದ ಕಡತದ ವಿಚಾರವಾಗಿ ಗಲಾಟೆ ತೆಗೆದು ಅಧಿಕಾರಿಗಳು ಮತ್ತು ಸಿಬ್ಬಂದಿ ಮೊಬೈಲ್‌ ಕಿತ್ತುಕೊಂಡು ದೌರ್ಜನ್ಯ ನಡೆಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಲದೆ, ರಾತ್ರಿ 10 ಗಂಟೆ ವರೆಗೂ ಕಚೇರಿಗೆ ಬೀಗ ಹಾಕಿ ಯಾವುದೇ ಅಧಿಕಾರಿ, ಸಿಬ್ಬಂದಿ ಹೊರಗೆ ಬರದಂತೆ ಬಂಧನದಲ್ಲಿಟ್ಟಿದ್ದರು. ದೌರ್ಜನ್ಯ ನಡೆಸಿದವರನ್ನು ಬಂಧಿಸಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.
ಪೊಲೀಸ್‌ ಆಯುಕ್ತರಿಗೂ ದೂರು: 

ವಿಜಯನಗರ ಉಪ ವಿಭಾಗದ ಕಂದಾಯಾಧಿಕಾರಿ ಮತ್ತು ಸಿಬ್ಬಂದಿ ಮೇಲೆ ಸ್ಥಳೀಯರು ನಡೆಸಿದರು ದೌರ್ಜನ್ಯ ಪ್ರಕರಣಕ್ಕೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ನಗರ ಪೊಲೀಸ್‌ ಆಯುಕ್ತರಿಗೂ ದೂರು ನೀಡಿದೆ.