ಬೆಂಗಳೂರು :  ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಇಲಿಗಳ ಕಾಟ ಜಾಸ್ತಿಯಾಗಿದ್ದು, ಕಚೇರಿ ಕಡತ, ಜೆರಾಕ್ಸ್‌ ಯಂತ್ರದ ತಂತಿಗಳನ್ನು ಕಚ್ಚಿ ಹಾಳು ಮಾಡುತ್ತಿರುವುದರಿಂದ ಕಾಗದ ಪತ್ರಗಳ ಜೆರಾಕ್ಸ್‌ ಮಾಡಿಸಲು ಹೊರಗಡೆ ತೆಗೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಜೆರಾಕ್ಸ್‌ ಯಂತ್ರಗಳ ರಿಪೇರಿಗೆ ಹಣ ಖರ್ಚು ಮಾಡಬೇಕಾದ ಕಿರಿ ಕಿರಿ ಎದುರಿಸುತ್ತಿದೆ.

ಕೇಂದ್ರ ಕಚೇರಿಯಲ್ಲಿ 12 ಸ್ಥಾಯಿ ಸಮಿತಿ ಕಚೇರಿಗಳು, ಮೇಯರ್‌, ಆಯುಕ್ತರು, ಆಡಳಿತ, ವಿಪಕ್ಷ ನಾಯಕರ ಕಚೇರಿ ಸೇರಿದಂತೆ 50ಕ್ಕೂ ಹೆಚ್ಚು ಕಚೇರಿಗಳಲ್ಲಿ ನೂರಾರು ಜೆರಾಕ್ಸ್‌ ಯಂತ್ರ, ಪ್ರಿಂಟಿಂಗ್‌ ಮಿಷನ್‌, ಕಂಪ್ಯೂಟರ್‌ ಸೇರಿದಂತೆ ಇನ್ನಿತರ ಯಂತ್ರಗಳಿವೆ. ಆದರೆ, ಈ ಇಲಿಗಳು ಯಂತ್ರಗಳ ತಂತಿ ಕತ್ತರಿಸುವುದು, ಕಾಗದ ಪತ್ರಗಳನ್ನು ಕಡಿಯುವುದರಿಂದ ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆಗಳು ಉಂಟಾಗುತ್ತಿದೆ.

ಕಚೇರಿಯಲ್ಲಿ ಜೆರಾಕ್ಸ್‌, ಮುದ್ರಣಾ ಯಂತ್ರಗಳಿದ್ದರೂ ಬಿಬಿಎಂಪಿ ಸಿಬ್ಬಂದಿ ಮಾತ್ರ ಹತ್ತಾರು ಕಡತಗಳನ್ನು ತೆಗೆದುಕೊಂಡು ಹೋಗಿ ಜೆರಾಕ್ಸ್‌ ಮಾಡಿಕೊಂಡು ಬರುವ ಗೋಳು ಮಾತ್ರ ತಪ್ಪಿಲ್ಲ. ಜೊತೆಗೆ ಕಚೇರಿಯ ಸಮಯ ಹಾಗೂ ವೆಚ್ಚದ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ, ಇಷ್ಟೆಲ್ಲ ಸಮಸ್ಯೆ ಕಾರಣವಾದ ಇಲಿಗಳ ನಿಯಂತ್ರಣ ಮಾಡಲು ಮಾತ್ರ ಸಾಧ್ಯವಾಗುತ್ತಿಲ್ಲ.

ಬಿಬಿಎಂಪಿಯಲ್ಲಿ ಪದೇ-ಪದೇ ಕಡತ ಕಳೆದು ಹೋಗುತ್ತಿವೆ ಎಂಬ ದೂರುಗಳು ಕೇಳಿಬರುತ್ತವೆ. ಅಂತಹ ದೂರುಗಳಲ್ಲಿ ಬಹುತೇಕ ಕಡತಗಳು ಇಲಿಗಳಿಂದ ಹಾಳಾಗಿರುತ್ತವೆ. ಇಲಿಗಳು ಹಾಳು ಮಾಡಿವೆ ಎಂದು ಹೇಳಿದರೆ ಮರ್ಯಾದೆ ಹೋಗಲಿದೆ ಎಂಬ ಕಾರಣಕ್ಕೆ ಅಧಿಕಾರಿ ಮತ್ತು ಸಿಬ್ಬಂದಿ ಕಳೆದು ಹೋಗಿದೆ ಎಂದು ಸಬೂಬು ನೀಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

ಇಲಿ ಹಿಡಿಯದೇ ಕೈಕೊಟ್ಟಸಂಸ್ಥೆ:

ಇಲಿಗಳ ಕಾಟ ತಪ್ಪಿಸುವ ಸಲುವಾಗಿ ಬಿಬಿಎಂಪಿ ಕಳೆದೆರಡು ವರ್ಷಗಳ ಹಿಂದೆ .4.97 ಲಕ್ಷ ನೀಡಿ ಖಾಸಗಿ ಸಂಸ್ಥೆಯನ್ನು ನೇಮಿಸಿತ್ತು. ಸಂಸ್ಥೆಯು ಬಿಬಿಎಂಪಿ ಕೇಂದ್ರ ಕಚೇರಿ, ಟೌನ್‌ ಹಾಲ್‌, ಮಲ್ಲೇಶ್ವರದ ಐಪಿಪಿ ಕೇಂದ್ರದಲ್ಲಿ ಇಲಿಗಳನ್ನು ಹಿಡಿಯಬೇಕಿತ್ತು. ಆದರೆ, ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಮತ್ತೆ ಬಿಬಿಎಂಪಿಯಲ್ಲಿ ಇಲಿಗಳ ಕಾಟ ಹೆಚ್ಚಾಗಿದೆ.

ಒಂದು ಇಲಿ ಹಿಡಿಯಲು .10 ಸಾವಿರ!

2012ರಿಂದ 2013ರವರೆಗೆ ಇಲಿ ಹಿಡಿಯುವ ಕೆಲಸ ಮಾಡಲಾಗಿತ್ತು. ಆಗ 2012ರ ಅಕ್ಟೋಬರ್‌ನಿಂದ 2013ರ ಜನವರಿ ಹಾಗೂ 2013 ಆಗಸ್ಟ್‌ನಿಂದ ಅಕ್ಟೋಬರ್‌ವರೆಗಿನ 6 ತಿಂಗಳಲ್ಲಿ ಒಟ್ಟು .2 ಲಕ್ಷ ಖರ್ಚು ಮಾಡಿ 20 ಇಲಿಗಳನ್ನು ಹಿಡಿಯಲಾಗಿತ್ತು. ಅಂದರೆ ಒಂದು ಇಲಿಗೆ ಬಿಬಿಎಂಪಿ .10 ಸಾವಿರ ಖರ್ಚು ಮಾಡಿದಂತಾಗಿತ್ತು. ಈ ಬಗ್ಗೆ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಲಾಗಿತ್ತು. ಸಾರ್ವಜನಿಕ ವಲಯದಲ್ಲೂ ಭಾರೀ ಟೀಕೆ ವ್ಯಕ್ತವಾಗಿತ್ತು.

ಇಲಿಗಳ ಕಾಟ ಹೆಚ್ಚಾಗಿರುವುದು ನಿಜ, ನಿಯಂತ್ರಣ ಮಾಡಲು ವಿಷ ಹಾಕುವುದಕ್ಕೆ ಸಾಧ್ಯವಿಲ್ಲ. ಇಲಿಗಳ ನಿಯಂತ್ರಣಕ್ಕೆ ವೆಚ್ಚವಾಗುವ ಹಣ ಸಾರ್ವಜನಿಕರ ತೆರಿಗೆ ಹಣ. ಹಾಗಾಗಿ, ಆಯುಕ್ತರು ಸೇರಿದಂತೆ ಆಡಳಿತ ಮತ್ತು ವಿಪಕ್ಷ ನಾಯಕರೊಂದಿಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು.

-ಗಂಗಾಂಬಿಕೆ, ಮೇಯರ್‌