* ಬೆಂಗಳೂರಲ್ಲಿ ಕೊರೋನಾ ಸ್ಫೋಟ* ಬಿಬಿಎಂಪಿ 8 ವಲಯಗಳ ಸಹಾಯವಾಣಿ ಆರಂಭ* ದಿನದ 24 ಗಂಟೆಯೂ ಅಗತ್ಯ ಮಾಹಿತಿ 

ಬೆಂಗಳೂರು, (ಜ.04): ಎರಡು ಮೂರು ದಿನಗಳಿಂದ ಒಂದು ಸಾವಿರ ಆಸುಪಾಸಿನಲ್ಲಿದ್ದ ಕೊರೋನಾ (Coronavirus) ಕೇಸ್ ಗಳು ಇಂದು(ಮಂಗಳವಾರ) ಸುಮಾರು ಎರಡೂವರೆ ಸಾವಿರದ ಸನಿಹಕ್ಕೆ ಬಂದಿದೆ. ಪಾಸಿಟಿವಿಟಿ ದರ ಕೂಡ ಡಬಲ್ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಒಂದೇ ದಿನ ಎರಡು ಸಾವಿರ ಗಡಿದಾಟಿರುವುದು ಬೆಚ್ಚಿಬೀಳಿಸಿದೆ. 

 ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Benglauru) ಕೊರೋನಾ ಕೇಸ್ ಸಂಖ್ಯೆ ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದರಿಂದ ಎಚ್ಚೆತ್ತ ಸರ್ಕಾರ ಹಾಗೂ ಬಿಬಿಎಂಪಿ(BBMP) ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.

ಹೌದು...ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಬೆಂಗಳುರಿನ ವಿವಿಧ ವಲಯಗಳಿಗೆ ನೋಡಲ್ ಅಧಿಕಾರಿಗಳನ್ನ ನೇಮಿಸಿದೆ. ಇದರ ಬೆನ್ನಲ್ಲೇ ಇದೀಗ ಬಿಬಿಎಂಪಿ ಎಂಟು ವಲಗಳ ಕೊವಿಡ್ ಸಹಾಯವಾಣಿ ಆರಂಭಿಸಿದೆ.

Coronavirus ಕೊರೋನಾ ನಿಯಂತ್ರಣಕ್ಕೆ ನೋಡಲ್‌ ಅಧಿಕಾರಿಗಳನ್ನ ನೇಮಿಸಿದ ರಾಜ್ಯ ಸರ್ಕಾರ

ಎಂಟು ವಲಯಗಳಲ್ಲಿ ನಿಯಂತ್ರಣಾ ಕೊಠಡಿಗಳನ್ನು ತೆರೆಯಲಾಗಿದ್ದು, ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ಹೆಲ್ಪ್​ಲೈನ್ (Covid Helpline)​ ನಂಬರ್​ಗಳನ್ನ ತಿಳಿಸಿದೆ. ದಿನದ 24 ಗಂಟೆಯೂ ಅಗತ್ಯ ಮಾಹಿತಿ ನೀಡಲಿದ್ದಾರೆ ಎಂದು ಬಿಬಿಎಂಪಿ ಹೇಳಿದೆ.

ನಗರದ ಎಲ್ಲಾ ನಾಗರೀಕರು ಕೊವಿಡ್​ಗೆ ಸಂಬಂಧಿಸಿದಂತೆ ಟ್ರಯಾಜಿಂಗ್, ಕೊವಿಡ್ ಪರೀಕ್ಷೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾಹಿತಿ, ಆಸ್ಪತ್ರೆಗೆ ದಾಖಲು, ಲಸಿಕೆ ಪಡೆಯುವುದು ಸೇರಿದಂತೆ ಇತರೆ ವಿಷಯಗಳ ಬಗ್ಗೆ ನಿಯಂತ್ರಣ ಕೊಠಡಿಯ ಸಿಬ್ಬಂದಿಯಿಂದ ಮಾಹಿತಿ ಪಡೆಯಬಹುದು.

ಎಂಟು ವಲಗಳ ಕೊವಿಡ್ ಸಹಾಯವಾಣಿ ಇಂತಿದೆ.
ಬೊಮ್ಮನಹಳ್ಳಿ- 8884666670
ದಾಸರಹಳ್ಳಿ- 94806 83132
ಪೂರ್ವ- 9480685163
ಮಹದೇವಪುರ- 08023010102
ಆರ್.ಆರ್.ನಗರ- 08028601050.
ದಕ್ಷಿಣ- 8431816718
ಪಶ್ಚಿಮ- 08068248454
ಯಲಹಂಕ- 9480685961

ನೋಡಲ್ ಅಧಿಕಾರಿಗಳ ನೇಮಕ
ಕೋವಿಡ್‌ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ನೋಡಲ್‌ ಅಧಿಕಾರಿಗಳನ್ನ(Nodal Officers) ನೇಮಕ ಮಾಡಿ ಆದೇಶ ಹೊರಡಿಸಿದೆ. 

ಐಎಎಸ್‌, ಐಪಿಎಸ್‌ ಅಧಿಕಾರಿಗಳ(IAS IPS Officers) ನೇಮಕ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಬೆಡ್ ಮೀಸಲಿರಿಸಲು, ರೋಗಿಗಳ ಟ್ರೇಸಿಂಗ್, ಅನ್ ಟ್ರೇಸ್ಡ್ ಪೇಶೆಂಟ್, ಕಂಟೋನ್ಮೆಂಟ್ ಝೋನ್‌ಗಳಿಗೆ ನೋಡಲ್ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ. 

ಜವಾಬ್ದಾರಿ ನೀಡಲಾದ ಆಯಾ ವಲಯಗಳಲ್ಲಿನ ಕೊರೋನಾ ಸ್ಥಿತಿ-ಗತಿ ಬಗ್ಗೆ ನೇಮಕಗೊಂಡ ಅಧಿಕಾರಿಗಳು ನೋಡಿಕೊಳ್ಳಬೇಕು. ಹಾಗಾದ್ರೆ ಯಾರೆಲ್ಲ ನೇಮಕವಾಗಿದ್ದಾರೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

* ಬೆಂಗಳೂರು ಏರ್ಪೋರ್ಟ್‌ ಕೋವಿಡ್ ಉಸ್ತುವಾರಿಯನ್ನಾಗಿ ಸಿ. ಶಿಖಾ ಅವರನ್ನ ನೇಮಕ ಮಾಡಲಾಗಿದೆ. 
* ಖಾಸಗಿ ವೈದ್ಯಕೀಯ ಸಂಸ್ಥೆಯಲ್ಲಿ ಹಾಸಿಗೆ ಮೀಸಲು ಉಸ್ತುವಾರಿಗಳಾಗಿ ಪೂರ್ವವಲಯಕ್ಕೆ 1- ಕ್ಯಾ. ಮಣಿವಣ್ಣನ್ ಮತ್ತು ಅಲೋಕ್ ಕುಮಾರ್.
* ಪೂರ್ವ ವಲಯ-2 ಮೊಹಮ್ಮದ್ ಮೋಹಿಸಿನ್ ಮತ್ತು ಹರಿಶೇಖರನ್...
* ಮಹದೇವಪುರ- ಉಮಾ ಮಹದೇವನ್ ಮತ್ತು ಹಿತೇಂದ್ರ.
* ಪಶ್ಚಿಮ ವಲಯ- ಎಂ.ಟಿ ರೇಜು ಮತ್ತು ಕೆ.ಟಿ ಬಾಲಕೃಷ್ಣ.
* ದಕ್ಷಿಣ ವಲಯ -ರಾಜೇಂದ್ರ ಚೋಳನ್ ಮತ್ತು ಡಾ. ರಾಮಚಂದ್ರ ರಾವ್.
* ಆರ್.ಆರ್ ನಗರ- ಡಾ. ವಿ ರಾಮ್ ಪ್ರಸಾತ್ ಮನೋಹರ್ ಮತ್ತು ಹೇಮಂತ್ ನಿಂಬಾಳ್ಕರ್...
* ಯಲಹಂಕ ಮತ್ತು ದಾಸರಳ್ಳಿ- ಏಕ್ ರೂಪ್ ಕೌರ್ ಮತ್ತು ಎಸ್ ರವಿ.
*ಬಿಬಿಎಂಪಿ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಬೆಡ್ ಕಾದಿರಿಸೋ ಉಸ್ತುವಾರಿ- ಎನ್ ಜಯರಾಮ್
*ಟ್ರೇಸಿಂಗ್, ಅನ್ ಟ್ರೇಸ್ಡ್ ಪೇಶೆಂಟ್- ಉಸ್ತುವಾರಿ ಡಿ.ಸಿ.ಪಿ ಅನುಚೇತ್...
*ಕೋವಿಡ್ ಮೃತರ ಅಂತ್ಯಸಂಸ್ಕಾರ ಉಸ್ತುವಾರಿ- ರಾಜೇಂದ್ರ ಕುಮಾರ್ ಕಠಾರಿಯಾ.
*ಕಂಟೋನ್ಮೆಂಟ್ ಝೋನ್ ಉಸ್ತುವಾರಿ ಸತ್ಯವತಿ 

ಇಂದು(ಮಂಗಳವಾರ) ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನ 2053 ಹೊಸ ಕೇಸ್ ಗಳು ಪತ್ತೆಯಾಗಿದ್ದು, ಮೂವರು ಮೃತಪಟ್ಟಿದ್ದಾರೆ. 202 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 11,423 ಸಕ್ರಿಯ ಪ್ರಕರಣಗಳಿವೆ.