ಬೆಂಗಳೂರು [ಮಾ.07]:  ಬಿಬಿಎಂಪಿ ಗುತ್ತಿಗೆದಾರನ ಹೆಸರಿನಲ್ಲಿ ನಕಲಿ ಬ್ಯಾಂಕ್‌ ಖಾತೆ ಸೃಷ್ಟಿಸಿ 4.15 ಕೋಟಿ ರು. ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿ ರಾಘವೇಂದ್ರ ಎಂಬುವರನ್ನು ಬಿಎಂಟಿಎಫ್‌ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಬಿಬಿಎಂಪಿ ಮುಖ್ಯಲೆಕ್ಕಾಧಿಕಾರಿಯ ಕಚೇರಿಯ ದ್ವಿತೀಯ ದರ್ಜೆ ಸಹಾಯಕರಾಗಿದ್ದು, ಮಲೆಮಹದೇಶ್ವರ ಬೆಟ್ಟದಲ್ಲಿ ಮಾ.2ರಂದು ಬಂಧಿಸಲಾಗಿದೆ. ಆರೋಪಿಯಿಂದ 22 ಸಾವಿರ ರು. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಂಟಿಎಫ್‌ನ ಪೊಲೀಸ್‌ ಅಧೀಕ್ಷಕ ಓಬಳೇಶ್‌ ಮಾಹಿತಿ ನೀಡಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದಂತೆ ಆರೋಪಿ ರಾಘವೇಂದ್ರ ಮಲೆಮಹದೇಶ್ವರಬೆಟ್ಟದಲ್ಲಿ ತಲೆಮರೆಸಿಕೊಂಡಿದನ್ನು. ಅರಣ್ಯ ಪ್ರದೇಶದಲ್ಲಿ ತನ್ನ ಸಹಚರರೊಂದಿಗೆ ಇರುವ ಖಚಿತ ಮಾಹಿತಿಯೊಂದಿಗೆ ದಾಳಿ ಮಾಡಿ ಬಂಧಿಸಲಾಗಿದ್ದು, ಆರೋಪಿಯನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ರೌಡಿಶೀಟರ್‌ ಪಾನಿಪುರಿ ಮಂಜನ ಸಹೋದರ ಎಂದು ತಿಳಿದು ಬಂದಿದೆ. ಆದರೆ, ರಾಘವೇಂದ್ರ ವಿರುದ್ಧ ಬೇರೆ ಯಾವುದೇ ಪ್ರಕರಣಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಮುಖ ಆಧಾರವಾದ ಫೈಲ್‌ ಸಿಕ್ಕಿಲ್ಲ:

ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರ ಪ್ರಕರಣಕ್ಕೆ ಸಂಬಂಧಿಸಿದ ಮುಖ್ಯವಾದ ಕಡತ ತೆಗೆದುಕೊಂಡು ಹೋಗಿರುವುದಾಗಿ ಸಂಶಯ ವ್ಯಕ್ತವಾಗಿತ್ತು. ಆದರೆ, ಆರೋಪಿ ರಾಘವೇಂದ್ರ ವಿಚಾರಣೆ ವೇಳೆ ಕಡತ ತೆಗೆದುಕೊಂಡು ಹೋಗಿಲ್ಲ. ಕಡತ ಈಗಾಗಲೇ ಪೊಲೀಸ್‌ ವಶದಲ್ಲಿರುವ ಮತ್ತೊಬ್ಬ ಆರೋಪಿ ಲೆಕ್ಕ ಅಧೀಕ್ಷಕಿ ಅನಿತಾ ಬಳಿ ಇರುವುದಾಗಿ ಹೇಳುತ್ತಿದ್ದಾನೆ. ಹಾಗಾಗಿ, ಕೋರ್ಟ್‌ ಅನುಮತಿ ಪಡೆದು ಅನಿತಾಳನ್ನು ಮತ್ತೆ ವಿಚಾರಣೆಗೆ ಒಳಪಡಿಸಲಾಗುವುದು. ಪ್ರಕರಣದಲ್ಲಿ ಪ್ರಮುಖ ಆಧಾರವಾಗಿರುವ ಕಡತದ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ. ಕಡತ ಲಭ್ಯವಾದರೆ ಅಧಿಕಾರಿಗಳ ಸಹಿಯನ್ನು ನಕಲು ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದು ತಿಳಿದು ಬರಲಿದೆ ಎಂದು ಹೇಳಿದರು.

ಬೆಂಗಳೂರು: ಮಹಿಳೆಯ ಗುಪ್ತಾಂಗದಲ್ಲಿತ್ತು 8.30 ಕೋಟಿ ರಹಸ್ಯ...

ಲೆಕ್ಕ ಅಧೀಕ್ಷಕರ ನೇತೃತ್ವ

ಬಿಬಿಎಂಪಿ ಮುಖ್ಯಲೆಕ್ಕಾಧಿಕಾರಿಯ ಕಚೇರಿಯ ಲೆಕ್ಕ ಅಧೀಕ್ಷಕರಾದ ಅನಿತಾ ಮತ್ತು ರಾಮಮೂರ್ತಿ ಹಾಗೂ ಇದೇ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರ ಮೂವರು ಸೇರಿ, ಚಂದ್ರಪ್ಪ ಎಂಬ ಗುತ್ತಿಗೆದಾರರ ಹೆಸರಿನಲ್ಲಿ ಹಂಪಿನಗರದ ಜನತಾ ಕೋ-ಆಪರೇಟಿವ್‌ ಬ್ಯಾಂಕ್‌ನಲ್ಲಿ ನಕಲಿ ಬ್ಯಾಂಕ್‌ ಖಾತೆ ಸೃಷ್ಟಿಸಿದ್ದರು. ಮಹದೇವಪುರ ವಲಯದಲ್ಲಿ ಬಿಬಿಎಂಪಿ ಕಾಮಗಾರಿ ನಡೆಸಿದ್ದ ಗುತ್ತಿಗೆದಾರ ಚಂದ್ರಪ್ಪ ಅವರ ಬ್ಯಾಂಕ್‌ ಖಾತೆಗೆ ಜಮಾ ಮಾಡಬೇಕಾಗಿದ್ದ 4.15 ಕೋಟಿ ರು.ಗಳನ್ನು ತಾವು ಸೃಷ್ಟಿಸಿದ್ದ ನಕಲಿ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು.

ಗಾಂಜಾ ಕಿಕ್ಕಿನಲ್ಲಿದ್ದಾಗ ಬಂಧನ

ರಾಘವೇಂದ್ರ ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದನ್ನು ಖಚಿತ ಮಾಹಿತಿ ಪಡೆದ ಬಿಎಂಟಿಎಫ್‌ ಪೊಲೀಸರು ಫೆ.2ರ ಮಧ್ಯರಾತ್ರಿ ದಾಳಿ ನಡೆಸಿದರು. ಆ ವೇಳೆ ರಾಘವೇಂದ್ರ ಸುಮಾರು 3 ಕಿ.ಮೀ. ದಟ್ಟಅರಣ್ಯದ ಒಳಗೆ ಗಾಂಜಾ ಸೇವಿಸಿ ಮತ್ತಿನಲ್ಲಿದ್ದ, ಆ ವೇಳೆ ಬಂಧಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈವರೆಗೆ ಐದು ಮಂದಿ ಬಂಧನ

ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ಆರ್‌.ಗೋವಿಂದರಾಜು ತಮ್ಮ ಕಚೇರಿಯ ಅನಿತಾ, ರಾಮಮೂರ್ತಿ ಹಾಗೂ ರಾಘವೇಂದ್ರ ವಿರುದ್ದ ಫೆ. 12ರಂದು ಬಿಎಂಟಿಎಫ್‌ನಲ್ಲಿ ದೂರು ದಾಖಲಿಸಿದ್ದರು. ಕೂಡಲೇ ಬಿಎಂಟಿಎಫ್‌ ಪೊಲೀಸರು ಲೆಕ್ಕ ಅಧೀಕ್ಷಕರಾದ ಅನಿತಾ, ರಾಮಮೂರ್ತಿ ಬಂಧಿಸಿದ್ದರು. ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಮತ್ತಿಬ್ಬರು ಆರೋಪಿಗಳಾದ ಗಂಗಾಂಧರ್‌ ಹಾಗೂ ನಾಗೇಶ್‌ ಅವರನ್ನು ಫೆ. 16ರಂದು ಬಂಧಿಸಲಾಗಿತ್ತು. ಇದೀಗ ಮತ್ತೊಬ್ಬ ಆರೋಪಿ ಬಂಧನವಾಗಿದೆ.