ಬೆಂಗಳೂರು [ಡಿ.15]:  ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯಲ್ಲಿ (ಸಿರ್ಸಿ ಫ್ಲೈಓವರ್‌) ಮೈಸೂರು ರಸ್ತೆಯಿಂದ ಪುರಭವನ ಕಡೆಗೆ ಹೋಗುವ ಮಾರ್ಗದ ಡಾಂಬರೀಕರಣ ಕಾಮಗಾರಿಯನ್ನು ಡಿ.16ರದಿಂದ ಆರಂಭಿಸಲಾಗುವುದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ.

ಕಾಮಗಾರಿ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗ ಗುರುತಿಸಲಾಗಿದೆ. ಪರ್ಯಾಯ ಮಾರ್ಗಗಳ ಬಗ್ಗೆ ಸಾರ್ವಜನಿಕ ಮಾಹಿತಿ ನೀಡಿ ಬಳಿಕ ಆರಂಭಿಸಲಾಗುವುದು. 

ಸಿರ್ಸಿ ಮೇಲ್ಸೇತುವೆ 2.65 ಕಿ.ಮೀ ಉದ್ದವಿದ್ದು, ಟೌನ್‌ಹಾಲ್‌ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಸಾಗುವ ಒಂದು ಮಾರ್ಗವನ್ನು ಈಗಾಗಲೇ ಐದು ಕೋಟಿ ರು. ವೆಚ್ಚದಲ್ಲಿ ಕಳೆದ ಮಾರ್ಚಲ್ಲಿ ನೂತನ ತಂತ್ರಜ್ಞಾನ ಬಳಸಿಕೊಂಡು ಡಾಂಬರೀಕರಣ ಮಾಡಲಾಗಿತ್ತು. ಇದೀಗ ಮತ್ತೊಂದು ಭಾಗದ ರಸ್ತೆಗೆ ಡಾಂಬರೀಕರಣ ಕಾಮಗಾರಿ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 30 ದಿನಗಳೊಳಗೆ ಡಾಂಬರೀಕರಣ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಚಿಕ್ಕಪೇಟೆ ಇನ್‌ಸ್ಪೆಕ್ಟರ್‌ ಸಂಗನಗೌಡ ಮಾತನಾಡಿ, ಕಾಮಗಾರಿ ನಡೆಸುವುದಕ್ಕೆ ಪೊಲೀಸ್‌ ಇಲಾಖೆಯಿಂದ ಅನುಮತಿ ನೀಡಲಾಗಿದೆ. ಸಾರ್ವಜನಿಕ ಪ್ರಕಟಣೆ ನೀಡಿದ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.