ಬೆಂಗಳೂರು(ಆ.11): ನಗರದಲ್ಲಿ ಕೊರೋನಾ ಸೋಂಕು ಪತ್ತೆಯಾದ ಮನೆಗಳನ್ನು ಕಂಟೈನ್ಮೆಂಟ್‌ ಮಾಡುತ್ತಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಆಗುತ್ತಿರುವ ಅಡಚಣೆ ತಪ್ಪಿಸಲು ಮತ್ತು ಸೋಂಕಿಗೆ ಒಳಗಾದ ಮನೆ ಮಂದಿಗೆ ಮುಜುಗರ ತಪ್ಪಿಸಲು ಕಂಟೈನ್ಮೆಂಟ್‌ ಪದ್ಧತಿ ಕೈಬಿಡುವ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲು ಬಿಬಿಎಂಪಿ ಮುಂದಾಗಿದೆ.

ನಗರದಲ್ಲಿ ಈವರೆಗೆ 28,716 ಪ್ರದೇಶಗಳನ್ನು ಕಂಟೈನ್ಮೆಂಟ್‌ ಮಾಡಲಾಗಿದ್ದು, ಅದರಲ್ಲಿ 14,706 ಕಂಟೈನ್ಮೆಂಟ್‌ ಪ್ರದೇಶಗಳನ್ನು ಮುಕ್ತಗೊಳಿಸಲಾಗಿದೆ. ಪ್ರಸ್ತುತ 14,010 ಪ್ರದೇಶಗಳಲ್ಲಿ ಕಂಟೈನ್ಮೆಂಟ್‌ ಜಾರಿಯಲ್ಲಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕಂಟೈನ್ಮೆಂಟ್‌ ವಲಯಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ.

ಸ್ವಾತಂತ್ರ್ಯ ದಿನಾಚರಣೆ: ಮಹತ್ವದ ಸುತ್ತೋಲೆ ಹೊರಡಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ

ಜತೆಗೆ ಕಂಟೈನ್ಮೆಂಟ್‌ ಒಳಗಾದ ಮನೆಗಳಲ್ಲಿ ವಾಸಿಸುತ್ತಿರುವ ಜನರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಹಾಗಾಗಿ, ಕಂಟೈನ್ಮೆಂಟ್‌ ಮಾಡದಂತೆ ಮನವಿ ಮಾಡುತ್ತಿದ್ದಾರೆ. ಹೀಗಾಗಿ, ಬಿಬಿಎಂಪಿ ಕಂಟೈನ್ಮೆಂಟ್‌ ಪದ್ಧತಿ ಕೈ ಬಿಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಕ್ಕೆ ಮುಂದಾಗಿದೆ.

ಸರ್ಕಾರದ ನಿರ್ಧಾರದಂತೆ ಕ್ರಮ

ಈ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಕಂಟೈನ್ಮೆಂಟ್‌ ಕುರಿತು ಹಲವಾರು ದೂರುಗಳು ಬಂದಿವೆ. ಮನೆಗಳನ್ನು ಸೀಲ್‌ಡೌನ್‌ ಮಾಡಿ ತಗಡು ಹಾಕುವುದರಿಂದ ಮುಜುಗರ ಆಗುತ್ತಿದೆ. ಹಾಗಾಗಿ ಬೇಡ ಎಂದು ಜನ ಮನವಿ ಮಾಡಿದ್ದಾರೆ. ಜನರ ಈ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುತ್ತೇವೆ. ರಾಜ್ಯ ಸರ್ಕಾರ ಈ ಬಗ್ಗೆ ಯಾವ ಸೂಚನೆ ನೀಡುವುದೋ ಅದರಂತೆ ಕ್ರಮ ಕೈಗೊಳ್ಳುತ್ತೇವೆ. ಸದ್ಯ ಕಂಟೈನ್ಮೆಂಟ್‌ ಪದ್ಧತಿ ಕೈ ಬಿಡುವ ಬಗ್ಗೆ ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.