ಬಿಬಿಎಂಪಿ ಪಾರ್ಕ್   ಗಳಲ್ಲಿ ಇನ್ನು ಮುಂದೆ ಮಧ್ಯಾಹ್ನ 1-30ರಿಂದ ರಾತ್ರಿ 8ರವರೆಗೆ ಸಾರ್ವಜನಿಕರಿಗೆ ವಾಯುವಿಹಾರಕ್ಕೆ ಅವಕಾಶ ಕಲ್ಪಿಸಿ ಎಂದು  ಬೃಹತ್ ಬೆಂಗಳೂರು ಮಹಾನಗರ ಪಾಲಿಕ ಆದೇಶ ಹೊರಡಿಸಿದೆ.

ಬೆಂಗಳೂರು (ಜು.15): ಬಿಬಿಎಂಪಿ ಪಾರ್ಕ್ ಗಳಲ್ಲಿ ಇನ್ನು ಮುಂದೆ ಮಧ್ಯಾಹ್ನ 1-30ರಿಂದ ರಾತ್ರಿ 8ರವರೆಗೆ ಸಾರ್ವಜನಿಕರಿಗೆ ವಾಯುವಿಹಾರ ಮಾಡಲು ಅವಕಾಶ ಕಲ್ಪಿಸಿ ಬಿಬಿಎಂಪಿ ಆದೇಶಿಸಿದೆ. ಈ ಹಿಂದೆ ಬೆಳಗ್ಗೆ 5ರಿಂದ 10ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8ರವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಸದ್ಯ ಬೆಳಗ್ಗಿನ ಅವಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಸಂಜೆ 4 ಗಂಟೆಯ ಬದಲಾಗಿ ಮಧ್ಯಾಹ್ನ 1.30ರಿಂದ 8 ಗಂಟೆ ವರೆಗಿನ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಪಾರ್ಕ್ ಗಳ ನಿರ್ವಹಣೆಗೆ ಮೀಸಲಿಡಲಾಗಿದ್ದು, ಈ ಅವಧಿ ಸಾರ್ವಜನಿಕರು ಪ್ರವೇಶ ನಿಷೇಧಿಸಲಾಗಿರುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶದಲ್ಲಿ ತಿಳಿಸಲಾಗಿದೆ.

ವಿರುದ್ಧ ದಿಕ್ಕಿನಲ್ಲಿ ವಾಕ್‌ ನಿಷೇಧಿಸಿಲ್ಲ: ಬಿಬಿಎಂಪಿಯ ಕೆಲವು ಉದ್ಯಾನವನದಲ್ಲಿ ಗಡಿಯಾರದ ಮುಳ್ಳು ಸುತ್ತುವ ವಿರುದ್ಧ ದಿಕ್ಕಿನಲ್ಲಿ ವಾಯು ವಿಹಾರ ನಡೆಸುವಂತಿಲ್ಲ. ಎಲ್ಲರೂ ಕಡ್ಡಾಯವಾಗಿ ಗಡಿಯಾದ ಮುಳ್ಳು ಚಲಿಸುವ ರೀತಿಯಲ್ಲಿ ವಾಯು ವಿಹಾರ ಮಾಡುವಂತೆ ಬಿಬಿಎಂಪಿ ಆದೇಶಿಸಿದೆ ಎಂಬ ಫಲಕ ಅಳವಡಿಕೆ ಮಾಡಲಾಗಿದೆ. ಈ ರೀತಿ ಯಾವುದೇ ಆದೇಶವನ್ನು ಬಿಬಿಎಂಪಿ ಮಾಡಿಲ್ಲ. ಯಾವ ಪಾರ್ಕ್ ನಲ್ಲಿ ಈ ರೀತಿ ಫಲಕ ಅಳವಡಿಕೆ ಮಾಡಲಾಗಿದೆ ಎಂಬುದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದ್ದು, ಅನಧಿಕೃತವಾಗಿ ಅಳವಡಿಕೆ ಮಾಡಿರುವ ಫಲಕಗಳನ್ನು ತೆರವು ಮಾಡಲಾಗುವುದು ಎಂದು ಬಿಬಿಎಂಪಿ ತೋಟಗಾರಿಕೆ ವಿಭಾಗದ ಉಪ ನಿರ್ದೇಶಕ ಚಂದ್ರಶೇಖರ್‌ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಈ ಪಾರ್ಕ್‌ನಲ್ಲಿ ವಾಕಿಂಗ್ ರನ್ನಿಂಗ್ ಜಾಗಿಂಗ್ ಮಾಡಂಗಿಲ್ಲ: BBMP ಬೋರ್ಡ್ ವೈರಲ್

ಉದ್ಯಾನದ ಜಾಗದಲ್ಲಿ ವಸತಿ: ರಾಜ್ಯ ಸರ್ಕಾರಕ್ಕೆ ನೊಟೀಸ್‌
 ಬೆಂಗಳೂರು: ಉದ್ಯಾನವನಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಕೊಳಗೇರಿ ನಿವಾಸಿಗಳಿಗಾಗಿ ವಸತಿ ಸಮುಚ್ಛಯ ನಿರ್ಮಾಣ ಮಾಡಲು ಮುಂದಾಗಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಚ್‌ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ನಗರದ ನಾಗರಬಾವಿಯ ಶ್ರೀ ವಿನಾಯಕ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆಯ ಉದ್ಯಾನದಲ್ಲಿ ವಸತಿ ಸಮುಚ್ಛಯ ನಿರ್ಮಾಣಕ್ಕೆ ಮುಂದಾಗಿರುವ ಕ್ರಮ ಪ್ರಶ್ನಿಸಿ ನಾಗರಬಾವಿ 11ನೇ ಬ್ಲಾಕ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರಿದ್ದ ವಿಭಾಗೀಯ ಪೀಠ, ಕರ್ನಾಟಕ ಕೊಳಗೇರಿ ನಿರ್ಮೂಲನಾ ಮಂಡಳಿ, ಬಿಬಿಎಂಪಿ ಮತ್ತು ಬಿಡಿಎಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 1986ರಲ್ಲಿಯೇ ಬಡಾವಣೆಯ ಯೋಜನೆಗೆ ಬಿಡಿಎ ಅನುಮೋದನೆ ನೀಡಿದೆ. ಜತೆಗೆ, ಪಾರ್ಕ್ ಗಳ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿತ್ತು. ಆದರೆ, ಈಗ ಅದೇ ಸ್ಥಳದಲ್ಲಿ ಕೊಳಗೇರಿ ನಿರ್ಮೂಲನಾ ಮಂಡಳಿಯಿಂದ ಕೊಳಗೇರಿ ನಿವಾಸಿಗಳಿಗೆ ವಸತಿ ಸಮುಚ್ಛಯವನ್ನು ನಿರ್ಮಾಣ ಮಾಡುತ್ತಿದೆ. ಈ ನಿರ್ಮಾಣ ನಿಯಮಗಳಿಗೆ ವಿರುದ್ಧವಾಗಿದೆ ಎಂದು ವಾದಿಸಿದರು.