ವಿಶ್ವನಾಥ್‌ ಮಲೇಬೆನ್ನೂರು

ಬೆಂಗಳೂರು [ಆ.29]: ‘ವಿಷನ್‌-2050’ ಕಲ್ಪನೆಯೊಂದಿಗೆ ನಗರದ ಕಸ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದರ ಜತೆಗೆ ಕೆರೆ ಹಾಗೂ ಜಲ ಮೂಲಗಳ ಸಂರಕ್ಷಣೆ, ಪಾಲಿಕೆಯಿಂದ ಜನಸ್ನೇಹಿ ಆಡಳಿತ, ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮತ್ತು ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಪಡಿಸುವುದಕ್ಕೆ ಮೊದಲ ಪ್ರಾಶಸ್ತ್ಯ ನೀಡುವೆ.

ಹೀಗಂತ ಹೇಳುತ್ತಾರೆ ಬಿಬಿಎಂಪಿಗೆ ನೂತನ ಆಯುಕ್ತರಾಗಿ ಆಗಮಿಸಿರುವ ಬಿ.ಎಚ್‌.ಅನಿಲ್‌ ಕುಮಾರ್‌. ಬಿಬಿಎಂಪಿ ಆಯುಕ್ತರಾಗಿ ಬುಧವಾರ ಅಧಿಕಾರ ವಹಿಸಿಕೊಂಡ ನಂತರ ಅವರು ತಮ್ಮ ಮುಂದಿನ ಯೋಜನೆಗಳನ್ನು ಹಂಚಿಕೊಂಡಿದ್ದು ಹೀಗೆ-

ಬಿಬಿಎಂಪಿ ಇನ್ನು ಎಷ್ಟುದಿನ ಸರ್ಕಾರದ ಅನುದಾನ ನಂಬಿಕೊಂಡಿರಬೇಕು?

ಆಸ್ತಿ ತೆರಿಗೆ ಪಾಲಿಕೆಯ ದೊಡ್ಡ ಆದಾಯದ ಮೂಲವಾಗಿದೆ. ಆದರೆ, ನಗರದಲ್ಲಿರುವ ಸಾಕಷ್ಟುಆಸ್ತಿಗಳು ತೆರಿಗೆ ವ್ಯಾಪ್ತಿಯಲ್ಲಿ ಹೊರಗೆ ಉಳಿದಿವೆ. ಅವುಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸುವುದರ ಜತೆಗೆ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡವರಿಂದ ತೆರಿಗೆ ಸಂಗ್ರಹಣೆಗೆ ಒತ್ತು ನೀಡಲಾಗುವುದು. ಜತೆಗೆ ಅಗತ್ಯ ಆದಾಯದ ಸೋರಿಕೆ ತಡೆಗಟ್ಟುವುದು ಸೇರಿದಂತೆ ಬೇರೆ ಮೂಲಗಳಿಂದ ಪಾಲಿಕೆಗೆ ಆರ್ಥಿಕ ಸಂಪನ್ಮೂಲಗಳ ಕ್ರೋಢಿಕರಣಕ್ಕೆ ವಿಫುಲ ಅವಕಾಶಗಳಿವೆ. ಅವುಗಳನ್ನು ಬಳಸಿಕೊಂಡು ಸರ್ಕಾರದ ಅನುದಾನದ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಮಾಡಲಾಗುವುದು.

ಪಾಲಿಕೆ ಆಡಳಿತ ಸುಧಾರಣೆಯ ಮೊದಲ ಚಿಂತನೆ ಏನು?

ನಗರದಲ್ಲಿ ಯಾವುದೇ ಸಮಸ್ಯೆ ಉಂಟಾದರೆ, ತಕ್ಷಣ ಸ್ಪಂದಿಸಿ ಪರಿಹಾರ ನೀಡುವ ವ್ಯವಸ್ಥೆ ಪಾಲಿಕೆಯಲ್ಲಿ ಜಾರಿಯಲ್ಲಿದೆ. ಆದರೆ, ಮುಂದಿನ ದಿನಗಳಲ್ಲಿ ಸಮಸ್ಯೆ ಉದ್ಬವಿಸುವ ಮುನ್ನವೇ ಅರಿತು ಸಮಸ್ಯೆ ಉದ್ಬವ ಆಗದಂತೆ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಆಡಳಿತ ವ್ಯವಸ್ಥೆ ಜಾರಿಗೆ ಶ್ರಮಿಸುತ್ತೇನೆ.

ರಾಜ ಕಾಲುವೆ ಒತ್ತುವರಿ ತೆರವು ಮತ್ತೆ ಶುರು ಮಾಡುವಿರಾ?

ಸರ್ಕಾರಿ ಜಾಗ ಒತ್ತುವರಿ ತೆರವು ಅದೊಂದು ನಿರಂತರ ಪ್ರಕ್ರಿಯೆಯಾಗಿದೆ. ಯಾವುದೇ ಒತ್ತಡಕ್ಕೆ ಮಣಿದು ತೆರವು ನಿಲ್ಲಿಸುವ ಪ್ರಶ್ನೆ ಇಲ್ಲ. ತೆರವು ಕಾರ್ಯಾಚರಣೆ ಬಗ್ಗೆ ಹೈಕೋರ್ಟ್‌ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದೆ. ತೆರವು ಕಾರ್ಯಚರಣೆಯ ಬಗ್ಗೆ ನಾವೂ ಸಹ ಕೋರ್ಟ್‌ಗೆ ಮಾಹಿತಿ ಸಲ್ಲಿಕೆ ಮಾಡುತ್ತಿದ್ದೇವೆ. ಈಗಾಗಲೇ ಬಫರ್‌ ಜೋನ್‌ ನಿಗದಿ ಪಡಿಸಿ ಆದೇಶ ಮಾಡಲಾಗಿದೆ. ಅದರಂತೆ ತೆರವು ಕಾರ್ಯಚರಣೆ ಮುಂದುವರೆಯಲಿದೆ.

ನಗರದ ಇತರೆ ಸ್ಥಳೀಯ ಸಂಸ್ಥೆಗಳ ನಡುವಿನ ಸಮನ್ವತೆ ಕೊರತೆ ಹೇಗೆ ಪರಿಹಾರ ಮಾಡಿಕೊಳ್ಳುತ್ತೀರಾ?

ಪಾಲಿಕೆ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳಿಗೆ ಇತರೆ ಸ್ಥಳೀಯ ಸಂಸ್ಥೆಗಳ ಸಹಕಾರ ತುಂಬಾ ಅಗತ್ಯ. ಸಮನ್ವತೆ ಸಾಧಿಸುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚನೆಯಾಗಿದೆ. ಪ್ರತಿ 15 ದಿನಗಳಿಗೊಂದು ಬಾರಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತದೆ. ಏನೇ ಸಮಸ್ಯೆ ಇದ್ದರೂ ಸಭೆಯಲ್ಲಿ ಚರ್ಚಿಸಿ ಪರಿಹಾರ ಮಾಡಿಕೊಳ್ಳುತ್ತೇವೆ. ಕೆಲವು ಬಾರಿ ಸಂಹನ ಕೊರತೆಯಿಂದ ಸಮಸ್ಯೆ ಉಂಟಾಗುತ್ತವೆ. ಆ ರೀತಿ ಆಗದಂತೆ ಎಚ್ಚರಿಕೆ ವಹಿಸಲಾಗುವುದು.

-ಕಸದ ಸಮಸ್ಯೆ ಪರಿಹಾರಕ್ಕೆ ಎಷ್ಟುದಿನ ಬೇಕು?

ಈಗಾಗಲೇ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ. ಅಕ್ಟೋಬರ್‌ನಿಂದ ನಗರದಲ್ಲಿ ಕಡ್ಡಾಯವಾಗಿ ತ್ಯಾಜ್ಯ ವಿಂಗಡಣೆ ಜಾರಿಗೆ ಬರಲಿದ್ದು, ವಿಗಂಡಣೆ ಮಾಡದ ಸಾರ್ವಜನಿಕರಿಗೆ ದಂಡ ವಿಧಿಸಲಾಗುವುದು. ಇನ್ನು ಸೆಪ್ಟಂಬರ್‌ 1ರಿಂದ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ ಸೇರಿದಂತೆ ಒಂದು ಬಾರಿ ಬಳಕೆ ಮಾಡುವ ಎಲ್ಲ ಪ್ಲಾಸ್ಟಿಕ್‌ ಮಾರಾಟ ಮತ್ತು ಬಳಕೆ ನಿಷೇಧಿಸಲಾಗುತ್ತಿದೆ. ಮುಂದಿನ ಐದು ತಿಂಗಳಲ್ಲಿ ಬಹುತೇಕ ಕಸದ ಸಮಸ್ಯೆ ಪರಿಹಾರವಾಗಲಿದೆ.