ರಾಕೇಶ್‌ ಎನ್‌.ಎಸ್‌.

ನವದೆಹಲಿ [ಡಿ.17]:  ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದಾಗಿ ವಾಹನ ಸವಾರರು ಬಿದ್ದು ಅಪಘಾತದಲ್ಲಿ ಸಾವನ್ನಪ್ಪಿದರೆ ಅಥವಾ ಗಾಯಗೊಂಡರೆ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸುಪ್ರೀಂಕೋರ್ಟ್‌ ಅರ್ಜಿ ಸಲ್ಲಿಸಿದೆ. ಅಲ್ಲದೆ ರಸ್ತೆ ಗುಂಡಿಯಿಂದ ಆಗುವ ಅಪಘಾತಗಳಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯೇ ಪರಿಹಾರ ನೀಡಬೇಕು ಎಂದಾದರೆ ಅರಾಜಕತೆ ಸೃಷ್ಟಿಯಾಗಲಿದೆ ಎಂದು ಬಿಬಿಎಂಪಿ ಎಂದು ತನ್ನ ಅರ್ಜಿಯಲ್ಲಿ ಹೇಳಿದೆ.

ರಸ್ತೆ ಗುಂಡಿಗಳು ಮತ್ತು ರಸ್ತೆಯ ಅವ್ಯವಸ್ಥೆಗಳಿಂದ ಆಗುವ ಸಾವು- ನೋವುಗಳಿಗೆ ಬಿಬಿಎಂಪಿ ಪರಿಹಾರ ನೀಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಹೈಕೋರ್ಟ್‌ ನೀಡಿದ್ದ ನಿರ್ದೇಶನವನ್ನು ಪ್ರಶ್ನಿಸಿ ಬಿಬಿಎಂಪಿಯು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಅದು ತನ್ನ ಅಸಹಾಯಕತೆಯನ್ನು ತೋಡಿಕೊಂಡಿದೆ.

ರಸ್ತೆ ಅಪಘಾತಕ್ಕೆ ಸಂಬಂಧಿಸಿ ತನ್ನ ಮುಂದೆ ಪರಿಹಾರ ಕೇಳಿ ದಾಖಲಾಗುವ ಪ್ರತಿ ಪ್ರಕರಣವನ್ನು ನಿರ್ವಹಿಸಲು ಅಗತ್ಯ ವ್ಯವಸ್ಥೆಯಾಗಲಿ, ಸಂಪನ್ಮೂಲವಾಗಲಿ ಬಿಬಿಎಂಪಿ ಬಳಿ ಇಲ್ಲ. ಇದರಿಂದ ಬಿಬಿಎಂಪಿ ಗೊಂದಲಗಳ ಗೂಡಾಗಲಿದೆ ಎಂದು ಅರ್ಜಿಯಲ್ಲಿ ಹೇಳಿಕೊಂಡಿದೆ.

ಒಂದು ವೇಳೆ ಯಾವುದೇ ಅಪಘಾತ ನಡೆದರೂ ಬಿಬಿಎಂಪಿಯು ಅದಕ್ಕೆ ಪರಿಹಾರ ನೀಡಬೇಕು ಎಂಬ ಮಾಹಿತಿಗೆ ವ್ಯಾಪಕ ಪ್ರಚಾರ ನೀಡಬೇಕು ಎಂಬ ಹೈ ಕೋರ್ಟ್‌ ಆದೇಶವನ್ನು ಪಾಲಿಸಿದ್ದೇ ಆದರೆ ಜೇನುಗೂಡಿಗೆ ಕೈಹಾಕಿದಂತಾಗಲಿದೆ. ಆಗ ಬಿಬಿಎಂಪಿಯ ಯಾವುದೇ ತಪ್ಪಿಲ್ಲದಿದ್ದರೂ ಅನೇಕರು ಪರಿಹಾರಕ್ಕಾಗಿ ಬಿಬಿಎಂಪಿಯ ಕದ ಬಡಿಯಬಹುದು ಎಂಬ ಆತಂಕವನ್ನು ಬಿಬಿಎಂಪಿಯು ವಕೀಲ ಸಂಜಯ… ನೂಲಿ ಅವರ ಮೂಲಕ ಸಲ್ಲಿಸಿರುವ ಮೇಲ್ಮನವಿಯಲ್ಲಿ ವ್ಯಕ್ತಪಡಿಸಿದೆ.

ಬೆಂಗಳೂರು : ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ...

ರಸ್ತೆ ಅಪಘಾತಕ್ಕೆ ಬಿಬಿಎಂಪಿ ಪರಿಹಾರ ನೀಡಬೇಕು ಎಂಬ ನಿರ್ದೇಶನವನ್ನು ಪಾಲಿಸಿದ್ದೇ ಆದರೆ ಭಾರೀ ಗೊಂದಲ ಮತ್ತು ರಾಜ್ಯದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದಲ್ಲಿ ನಷ್ಟತರಲಿದೆ. ಇಂತಹದ್ದೆ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ ಬಲಿಪಶುಗಳಿಗೆ ಪರಿಹಾರ ನೀಡುವ ಬಗ್ಗೆ ಯಾವುದೇ ನಿರ್ದೇಶನವನ್ನು ನೀಡದೆ ಗುಂಡಿಗಳನ್ನು ಮುಚ್ಚುವಂತೆ ಅಲ್ಲಿನ ಪಾಲಿಕೆಗೆ ನಿರ್ದೇಶನ ನೀಡಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ.

ಪ್ರತ್ಯೇಕ ಪರಿಹಾರ ವ್ಯವಸ್ಥೆಯನ್ನು ಖುದ್ದು ಹೈಕೋರ್ಟ್‌ ರೂಪಿಸಿದೆ. ಹೈಕೋರ್ಟ್‌ ಈ ಮೂಲಕ ತನ್ನ ಅಧಿಕಾರ ವ್ಯಾಪ್ತಿ ಮೀರಿದೆ. ಅಪಘಾತವು ಚಾಲಕನ ತಪ್ಪಿನಿಂದಾಗಿ ಘಟಿಸಿತೇ ಅಥವಾ ರಸ್ತೆ ಗುಂಡಿಯಿಂದಾಗಿ ನಡೆಯಿತೇ ಎಂದು ಪತ್ತೆ ಹಚ್ಚುವುದು ಸಾಧ್ಯವಿಲ್ಲ. ಒಂದು ವೇಳೆ ರಸ್ತೆ ಗುಂಡಿಯಿಂದಾಗಿಯೇ ಅಪಘಾತ ಸಂಭವಿಸಿದೆ ಎಂದು ಖಚಿತವಾದರೆ ಅದಕ್ಕೆ ಕಾನೂನು ಪ್ರಕಾರವಾಗಿರುವ ಪ್ರಕ್ರಿಯೆಗಳನ್ನು ಅನ್ವಯಿಸಿ ಬಿಬಿಎಂಪಿಯನ್ನು ಹೊಣೆಯನ್ನಾಗಿಸಿ ಪರಿಹಾರ ಪಡೆಯಬಹುದು. ಇಂತಹ ವ್ಯವಸ್ಥೆಯೊಂದು ಮೊದಲೇ ಜಾರಿಯಲ್ಲಿದೆ ಎಂದು ಬಿಬಿಎಂಪಿ ತನ್ನ ಮೇಲ್ಮನವಿಯಲ್ಲಿ ಹೇಳಿಕೊಂಡಿದೆ.