ಬೆಂಗಳೂರು(ಫೆ.15): ಚಿಕ್ಕಪೇಟೆ ವಾರ್ಡ್‌ಗೆ ದಿಢೀರ್‌ ಭೇಟಿ ನೀಡಿದ ಮೇಯರ್‌ ಗೌತಮ್‌ ಕುಮಾರ್‌ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸದ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಮಾರ್ಷಲ್‌ಗಳನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆಯಿತು.

ತ್ಯಾಜ್ಯ ಸಮಸ್ಯೆ ನಿರ್ವಹಣೆಯಲ್ಲಿನ ಲೋಪಕ್ಕೆ ಅಧಿಕಾರಿಗಳು ಕಾರಣ ನೀಡಲು ಮುಂದಾದಾಗ ಕೆಂಡಾಮಂಡಲರಾದ ಮೇಯರ್‌, ‘ನೀವಿರುವುದು ವ್ಯವಸ್ಥೆ ಸರಿಪಡಿಸಲು. ನಿಮಗೆ ಮಾನ ಮರ್ಯಾದೆ ಇರಬೇಕು. ನೀವೇನಾದರೂ ನಮ್ಮ ವಾರ್ಡ್‌ನಲ್ಲಿದ್ದು ಇಂತಹ ಕೆಲಸ ಮಾಡಿದ್ದರೆ ಜನರು ಚಪ್ಪಲಿ ಹಾರ ಹಾಕುತ್ತಿದ್ದರು. ಈ ವಾರ್ಡ್‌ ಜನ ಒಳ್ಳೆಯವರಾಗಿರೋದ್ರಿಂದ ಸುಮ್ಮನೆ ಬಿಟ್ಟಿದ್ದಾರೆ’ ಎಂದು ತೀಕ್ಷ್ಣ ವಾಗಿ ನುಡಿದರು.

ಬೈಕ್‌ನಲ್ಲಿ ಪರಿಶೀಲನೆ:

ಶುಕ್ರವಾರ ಬೆಳಗ್ಗೆಯೇ ಮೇಯರ್‌ ದ್ವಿಚಕ್ರವಾಹನದಲ್ಲೇ ಚಿಕ್ಕಪೇಟೆ ವಾರ್ಡ್‌ನ ವಿವಿಧ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆ, ರಸ್ತೆಗುಂಡಿ, ಕುಡಿಯುವ ನೀರು ಸೇರಿದಂತೆ ಮೂಲಕಭೂತ ಸೌಕರ್ಯಗಳ ಸ್ಥಿತಿಗತಿ ಪರಿಶೀಲನೆ ನಡೆಸಿದರು. ಬಿವಿಕೆ ಅಯ್ಯಂಗಾರ್‌ ರಸ್ತೆದ ಅಭಿನಯ್‌ ಚಿತ್ರಮಂದಿರದಿಂದ ತಪಾಸಣೆ ಆರಂಭಿಸಿದ ಅವರು, ಅವೆನ್ಯೂ ರಸ್ತೆ, ಕಬ್ಬನ್‌ಪೇಟೆ, ನಗರ್ತಪೇಟೆ, ರಾಮನಪೇಟೆ, ಸುಲ್ತಾನ್‌ಪೇಟೆ ಮತ್ತಿತರ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ ಅಲ್ಲಿನ ಜನರಿಂದ ಅಹವಾಲು ಸ್ವೀಕರಿಸಿದ್ದಾರೆ.

ಈ ವೇಳೆ, ಸ್ಥಳೀಯ ಜನರು ಅತಿ ಹೆಚ್ಚು ಜನಸಾಂದ್ರತೆಯಿಂದ ಕೂಡಿರುವ ಹಾಗೂ ಅತಿ ಸಣ್ಣ ರಸ್ತೆಗಳಿಂದ ಕೂಡಿದ ಗಲ್ಲಿಗಳಿಂದ ಕೂಡಿದ ನಮ್ಮ ವಾರ್ಡ್‌ನಲ್ಲಿ ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆ ನಡೆಯುತ್ತಿಲ್ಲ. ಒಂದು ಗಲ್ಲಿ ಸ್ವಚ್ಛಗೊಳಿಸಿದರೆ ಇನ್ನೊಂದು ಗಲ್ಲಿಯಲ್ಲಿ ಹಾಗೇ ಇರುತ್ತದೆ. ಹಬ್ಬ ಹರಿದಿನಗಳಲ್ಲಂತೂ ಎರಡು ಮೂರು ದಿನವಾದರೂ ಕಸ ವಿಲೇವಾರಿ ಆಗುವುದಿಲ್ಲ ಎಂದು ಆರೋಪಿಸಿದರು. ಇದೇ ವೇಳೆ, ತಾವು ಪರಿಶೀಲನೆ ನಡೆಸಿದ ಪ್ರದೇಶಗಳಲ್ಲೂ ಸಮರ್ಪಕವಾಗಿ ತ್ಯಾಜ್ಯ ನಿರ್ವಹಿಸದಿರುವುದು ಕಂಡುಬಂತು. ಇದರಿಂದ ಸಿಟ್ಟಾದ ಮೇಯರ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜಂಟಿ ಆಯುಕ್ತರು ಸ್ವಲ್ಪ ತಲೆ ಉಪಯೋಗಿಸಬೇಕು. ಬೆಳಗಿನ ವೇಳೆ ಪೂರ್ಣ ಪ್ರಮಾಣದಲ್ಲಿ ತ್ಯಾಜ್ಯ ನಿರ್ವಹಣೆ ಸಾಧ್ಯವಾಗದಿದ್ದರೆ ರಾತ್ರಿ 9ರ ನಂತರ ಚಿಕ್ಕಪೇಟೆ ಹಾಗೂ ಸುತ್ತಮುತ್ತಲ ವಾರ್ಡುಗಳಲ್ಲಿ ಕಸ ಸಂಗ್ರಹಿಸಿ ಎಂದು ಸೂಚಿಸಿದ್ದಾರೆ.

ಪ್ರೇಮಿಗಳ ದಿನ: ಕುದುರೆಗಳಿಗೆ ಮದುವೆ ಮಾಡಿಸಿದ ವಾಟಾಳ್‌

ವಾರ್ಡ್‌ನಲ್ಲಿ ತ್ಯಾಜ್ಯ ನಿರ್ವಹಣೆ, ರಸ್ತೆ ದುರಸ್ತಿ ಕಾಮಗಾರಿ, ಚರಂಡಿ ಹಾಗೂ ಪಾದಚಾರಿ ಮಾರ್ಗಗಳ ದುರಸ್ತಿ ಸೇರಿದಂತೆ ಇನ್ನಿತರ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅಂದಾಜು ವೆಚ್ಚದ ಪಟ್ಟಿಸಿದ್ಧಪಡಿಸಿಕೊಡಿ ಎಂದು ಜಂಟಿ ಆಯುಕ್ತರಿಗೆ ಸೂಚಿಸಿದರು. ಇದೇ ವೇಳೆ ಪರಿಶೀಲನೆ ವೇಳೆ ಹಾಜರಿರದ ಆರೋಗ್ಯಾಧಿಕಾರಿಗಳಿಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸುವಂತೆಯೂ ಸೂಚಿಸಿದರು.