ಬೆಂಗಳೂರು[ಸೆ. 30]  ಬಿಬಿಎಂಪಿ ಮೇಯರ್ ಆಯ್ಕೆ ಕಸರತ್ತು ಶುರುವಾಗಿರುವಾಗಲೇ ಮಹಾನಗರ ಪಾಲಿಕೆಯ ಪಕ್ಷೇತರ ಸದಸ್ಯರು ಗೋವಾಕ್ಕೆ ಹೋಗಿ ಕುಳಿತಿದ್ದಾರೆ.

ಮೇಯರ್‌ ಆಯ್ಕೆಗೆ 7 ಮಂದಿ ಪಕ್ಷೇತರ ಮತವೇ ನಿರ್ಣಾಯಕ. ಸದಸ್ಯರ ಪೈಕಿ ಐವರ ಬೆಂಬಲ ಬಿಜೆಪಿಗೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಮೂರು ಮಂದಿ ಗೋವಾದಲ್ಲಿ ವಾಸ್ತವ್ಯ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಕ್ಷೇತರ ಕಾರ್ಪೊರೇಟರ್ಸ್ ರಮೇಶ್, ಲಕ್ಷ್ಮೀನಾರಾಯಣ, ಗಾಯಿತ್ರಿ ಗೋವಾದಲ್ಲಿದ್ದಾರೆ. ಇವರು ಬಿಜೆಪಿ ಕಡೆ ನಿಲ್ಲಲಿದ್ದಾರೆ ಎಂದು ಹೇಳಲಾಗಿದ್ದರೂ ಅಂತಿಮ ಕ್ಷಣದಲ್ಲಿ ಯಾವ ಬದಲಾವಣೆ ಆಗುತ್ತದೆ ಹೇಳಲು ಸಾಧ್ಯವಿಲ್ಲ.

ರಾಜಧಾನಿ ಬೆಂಗಳೂರಿನ ಮೇಯರ್ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ನಡುವೆ ಸಮನ್ವಯದ ಕೊರತೆ ಕಾಣಿಸಿಕೊಂಡಿರುವುದು ಗುಪ್ತವಾಗಿ ಉಳಿದಿಲ್ಲ.

ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ನೇತೃತ್ವದಲ್ಲಿ ನಡೆದಿದ್ದ ಶಾಸಕರು ಹಾಗೂ ಸಂಸದರ ಸಭೆಯಲ್ಲಿ ಮೇಯರ್ ಅಭ್ಯರ್ಥಿ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಿಸಲು ಶಾಸಕ ಎಸ್.ರಘು ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ರಚಿಸಿರುವ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಅಧಿಕೃತವಾಗಿ ಹೇಳಿಕೆಯನ್ನೂ ನೀಡಿದ್ದರು. ಜೊತೆಗೆ ಸಮಿತಿ ತನ್ನ ಕೆಲಸವನ್ನೂ ನಡೆಸಿತ್ತು. ಆದರೆ, ಎರಡು ದಿನಗಳ ನಂತರ ಆ ಸಮಿತಿ ರಚನೆಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಬಿಜೆಪಿ ಯಾರನ್ನು ಮೇಯರ್ ಅಭ್ಯರ್ಥಿ ಮಾಡಲಿದೆ ಎಂಬ ವಿಚಾರ ಸಹ ಅಷ್ಟೆ ಗೌಪ್ಯವಾಗಿ ಉಳಿದುಕೊಂಡಿದೆ.