ಬೆಂಗಳೂರು [ಅ.01]:  ಬಿಬಿಎಂಪಿ ಮೇಯರ್‌-ಉಪ ಮೇಯರ್‌ ಚುನಾವಣೆ ಮುಂದೂಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ, ಕಾನೂನು ನಿಯಮಗಳಿಗೆ ಕಟ್ಟುಬಿದ್ದ ಪ್ರಾದೇಶಿಕ ಆಯುಕ್ತರು ಇಂದು ಬಿಬಿಎಂಪಿ ಮೇಯರ್‌, ಉಪಮೇಯರ್‌ ಹಾಗೂ 4 ಸ್ಥಾಯಿ ಸಮಿತಿಗಳ ಚುನಾವಣೆ ನಡೆಸುತ್ತಿದ್ದಾರೆ.

ಈ ಮೂಲಕ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್‌- ಉಪಮೇಯರ್‌ ಚುನಾವಣೆ ನಡೆಯಲಿದೆಯೇ ಅಥವಾ ಮತ್ತೊಮ್ಮೆ ಮುಂದೂಡಲ್ಪಡುವುದೇ ಎಂಬ ಗೊಂದಲ ಹಾಗೂ ರಾಜಕೀಯ ಹೈಡ್ರಾಮಾಗಳಿಗೆ ತೆರೆ ಬಿದ್ದಿದೆ.

ಮೂರು JDS ಮತ ಬಿಜೆಪಿಗೆ

ಬಿಬಿಎಂಪಿಯ 14 ಮಂದಿ ಜೆಡಿಎಸ್‌ ಸದಸ್ಯರ ಪೈಕಿ ಲಗ್ಗೆರೆ ಮಂಜುಳಾ ನಾರಾಯಣಸ್ವಾಮಿ, ಬಿಟಿಎಂ ಬಡಾವಣೆ ವಾರ್ಡ್‌ನ ಕೆ.ದೇವದಾಸ್‌ ಬಿಜೆಪಿ ಜತೆ ಸಖ್ಯ ಬೆಳೆಸಿಕೊಂಡಿದ್ದಾರೆ. ಇನ್ನು ಅನರ್ಹ ಶಾಸಕ ಕೆ.ಗೋಪಾಲಯ್ಯ ಪತ್ನಿ ಹೇಮಲತಾ ಗೋಪಾಲಯ್ಯ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಆದರೆ, ಜೆಡಿಎಸ್‌ ಪಕ್ಷವು ತನ್ನೆಲ್ಲಾ ಸದಸ್ಯರಿಗೆ ವಿಪ್‌ ಜಾರಿ ಮಾಡಿದೆ.