Asianet Suvarna News Asianet Suvarna News

ತೆರಿಗೆ ಬಾಕಿ: 10533 ಆಸ್ತಿಗಳಿಗೆ ಬಿಬಿಎಂಪಿ ಬೀಗ..!

ಬಿಬಿಎಂಪಿಯ ಪ್ರಮುಖ ಆದಾಯದ ಮೂಲವಾದ ಆಸ್ತಿ ತೆರಿಗೆ ವಸೂಲಿ ಪ್ರಮಾಣ ಹೆಚ್ಚಿಸಲು ಬಿಬಿಎಂಪಿ ಕಂದಾಯ ವಿಭಾಗ ಹೊಸಹೊಸ ಮಾರ್ಗ ಕಂಡುಕೊಳ್ಳುತ್ತಿದೆ. ಅದರಂತೆ ಆಸ್ತಿ ಮಾಲೀಕರ ಆಸ್ತಿಗಳನ್ನು ಪರಿಶೀಲನೆ ನಡೆಸಿ, ಎಸ್‌ಎಎಸ್‌ ಅಡಿಯಲ್ಲಿ ತಪ್ಪು ಮಾಹಿತಿ ನೀಡಿದವರನ್ನು ಪತ್ತೆ ಮಾಡಿ ಅವರಿಂದ ಹೆಚ್ಚುವರಿ ಮೊತ್ತ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

BBMP lock for 10533 properties due to Tax Pending in Bengaluru grg
Author
First Published Feb 13, 2024, 5:19 AM IST

ಬೆಂಗಳೂರು(ಫೆ.13): ಆಸ್ತಿ ಮಾಲೀಕರ ಮೇಲೆ ಬಿಬಿಎಂಪಿಯ ಗದಾಪ್ರಹಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸ್ವಯಂ ಘೋಷಿತ ಆಸ್ತಿ ತೆರಿಗೆ (ಎಸ್‌ಎಎಸ್‌) ಪದ್ಧತಿ ಅಡಿಯಲ್ಲಿ ತಪ್ಪು ಮಾಹಿತಿ ನೀಡಿದವರಿಗೆ ಭಾರೀ ಪ್ರಮಾಣದ ದಂಡ ಮತ್ತು ಬಡ್ಡಿ ವಿಧಿಸುತ್ತಿದೆ. ಬಿಬಿಎಂಪಿಯ ಈ ಕ್ರಮಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅದರ ಜತೆಗೆ ತೆರಿಗೆ ಬಾಕಿ ಹಾಗೂ ಆಸ್ತಿ ವಿವರ ತಪ್ಪು ಮಾಹಿತಿ ನೀಡಿದ 10,533 ಆಸ್ತಿಗಳಿಗೆ ಬೀಗಮುದ್ರೆ ಹಾಕಿ ಕಠಿಣ ಕ್ರಮವನ್ನೂ ಕೈಗೊಳ್ಳಲಾಗಿದೆ.

ಬಿಬಿಎಂಪಿಯ ಪ್ರಮುಖ ಆದಾಯದ ಮೂಲವಾದ ಆಸ್ತಿ ತೆರಿಗೆ ವಸೂಲಿ ಪ್ರಮಾಣ ಹೆಚ್ಚಿಸಲು ಬಿಬಿಎಂಪಿ ಕಂದಾಯ ವಿಭಾಗ ಹೊಸಹೊಸ ಮಾರ್ಗ ಕಂಡುಕೊಳ್ಳುತ್ತಿದೆ. ಅದರಂತೆ ಆಸ್ತಿ ಮಾಲೀಕರ ಆಸ್ತಿಗಳನ್ನು ಪರಿಶೀಲನೆ ನಡೆಸಿ, ಎಸ್‌ಎಎಸ್‌ ಅಡಿಯಲ್ಲಿ ತಪ್ಪು ಮಾಹಿತಿ ನೀಡಿದವರನ್ನು ಪತ್ತೆ ಮಾಡಿ ಅವರಿಂದ ಹೆಚ್ಚುವರಿ ಮೊತ್ತ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಅದರಲ್ಲೂ ವಸತಿ ಕಟ್ಟಡವಿದ್ದು, ಅದರಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದರೆ, ಅಂತಹ ಆಸ್ತಿ ಮಾಲೀಕರಿಗೆ ದುಬಾರಿ ದಂಡ ಮತ್ತು ಬಡ್ಡಿಯನ್ನು ವಿಧಿಸಲಾಗುತ್ತಿದೆ. ಅದರ ಜತೆಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೂ ನೋಟಿಸ್‌ ಜಾರಿ ಮಾಡಿ ಎಚ್ಚರಿಕೆ ನೀಡಲಾಗುತ್ತಿದೆ. ಬಿಬಿಎಂಪಿಯ ಈ ಏಕಾಏಕಿ ಕ್ರಮದಿಂದಾಗಿ ಆಸ್ತಿ ಮಾಲೀಕರು ಕಂಗಾಲಾಗಿದ್ದಾರೆ.

₹10 ಲಕ್ಷಕ್ಕಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ, ಕಠಿಣ ಕ್ರಮದ ಎಚ್ಚರಿಕೆ ನೀಡಿದ ಬಿಬಿಎಂಪಿ ಆಯುಕ್ತ

₹20 ಲಕ್ಷಗೂ ಹೆಚ್ಚಿನ ದಂಡ, ಬಡ್ಡಿ:

ಬಿಬಿಎಂಪಿ ಕಂದಾಯ ವಿಭಾಗವು ತನ್ನ ಎಲ್ಲ ಕಂದಾಯ ಅಧಿಕಾರಿಗಳ ಮೂಲಕ ನಗರದಲ್ಲಿನ ಆಸ್ತಿಗಳ ಪರಿಶೀಲನೆ ನಡೆಸುತ್ತಿದೆ. ಈ ವೇಳೆ ಎಸ್‌ಎಎಸ್‌ ಅಡಿಯಲ್ಲಿ ಆಸ್ತಿಯ ವಿವಿರ ನೀಡುವಾಗ ತಪ್ಪು ಮಾಹಿತಿ ನೀಡಿದವರನ್ನು ಪತ್ತೆ ಮಾಡಿ ದಂಡ ಮತ್ತು ಬಡ್ಡಿ ಪಾವತಿಸುವಂತೆ ನೋಟಿಸ್‌ ನೀಡಲಾಗುತ್ತಿದೆ. ಅಲ್ಲದೆ ವಸತಿ ಕಟ್ಟಡಕ್ಕೆ ಬೆಸ್ಕಾಂನಿಂದ ವಾಣಿಜ್ಯ ವಿದ್ಯುತ್‌ ಸಂಪರ್ಕ ಪಡೆದಿದ್ದರೆ ಅಂತಹ ಕಟ್ಟಡಗಳನ್ನು ಮುಖ್ಯವಾಗಿ ಗುರಿಯಾಗಿಸಿ ನೋಟಿಸ್‌ ನೀಡಲಾಗುತ್ತಿದೆ. ಹೀಗೆ ನೋಟಿಸ್‌ ನೀಡುವಾಗ ಪ್ರಸಕ್ತ ವರ್ಷದಷ್ಟೇ ಅಲ್ಲದೆ, ಕಟ್ಟಡ ನಿರ್ಮಾಣಗೊಂಡ ವರ್ಷದಿಂದ ಈ ವರ್ಷದವರೆಗೆ ತೆರಿಗೆ ಬಾಕಿ ಹಾಗೂ ಅದಕ್ಕೆ ದಂಡ ಮತ್ತು ಬಡ್ಡಿಯನ್ನು ಸೇರಿಸಿ ಡಿಮ್ಯಾಂಡ್‌ ನೋಟಿಸ್‌ ನೀಡಲಾಗುತ್ತಿದೆ. ಬಿಬಿಎಂಪಿ ಕಂದಾಯ ವಿಭಾಗದ ಲೆಕ್ಕಾಚಾರದಂತೆ ಕೆಲ ಆಸ್ತಿಗಳಿಗೆ ₹20 ಲಕ್ಷ, ₹30 ಲಕ್ಷದವರೆಗೆ ದಂಡ ಮತ್ತು ಬಡ್ಡಿ ವಿಧಿಸಿ ನೋಟಿಸ್‌ ನೀಡಲಾಗಿದೆ. ಇದು ಆಸ್ತಿ ಮಾಲೀಕರನ್ನು ಕಂಗಾಲಾಗಿಸಿದೆ.

10,533 ಆಸ್ತಿಗಳಿಗೆ ಬೀಗಮುದ್ರೆ:

ಆಸ್ತಿ ವಿವರ ತಪ್ಪು ಮಾಹಿತಿ ನೀಡುವುದು ಹಾಗೂ ತೆರಿಗೆ ಬಾಕಿ ಉಳಿಸಿಕೊಂಡವರ ಪೈಕಿ ಈಗಾಗಲೇ 10,533 ಆಸ್ತಿಗಳಿಗೆ ಬೀಗಮುದ್ರೆ ಹಾಕಲಾಗಿದೆ. ಅದರಲ್ಲಿ ಪ್ರಮುಖವಾಗಿ ವಸತಿ ಕಟ್ಟಡದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವ ಆಸ್ತಿಗಳನ್ನು ಸೀಲ್‌ ಮಾಡಲಾಗಿದೆ.

ಬೆಂಗಳೂರು ಎಳೇನಹಳ್ಳಿ ಕೆರೆ ಮುಚ್ಚುತ್ತಿರುವ ರಿಯಲ್ ಎಸ್ಟೇಟ್ ಉದ್ಯಮಿಗಳು: ಬಿಬಿಎಂಪಿ ಅಧಿಕಾರಿಗಳೇ ಶಾಮೀಲಾಗಿದ್ದೀರಾ?

₹471.93 ಕೋಟಿಗೆ ನೋಟಿಸ್‌

ಬಿಬಿಎಂಪಿ ಕಂದಾಯ ವಿಭಾಗ ಎಸ್‌ಎಎಸ್‌ ಪದ್ಧತಿ ಅಡಿಯಲ್ಲಿ ತಪ್ಪು ಮಾಹಿತಿ ನೀಡಿದ 14,724 ಆಸ್ತಿಗಳಿಗೆ ನೋಟಿಸ್‌ ನೀಡಿದೆ. ಆ ಆಸ್ತಿಗಳು ಹೆಚ್ಚುವರಿ ತೆರಿಗೆ, ದಂಡ ಮತ್ತು ಬಡ್ಡಿ ರೂಪದಲ್ಲಿ ₹471.93 ಕೋಟಿ ಪಾವತಿಸಬೇಕು ಎಂದು ಡಿಮ್ಯಾಂಡ್‌ ನೋಟಿಸ್‌ ನೀಡಲಾಗಿದೆ. ಅದರ ಜತೆಗೆ ತೆರಿಗೆ ಬಾಕಿ ಉಳಿಸಿಕೊಂಡ 47,664 ಆಸ್ತಿಗಳಿಗೆ ತೆರಿಗೆ ಬಾಕಿ ಪಾವತಿಸುವಂತೆಯೂ ಸೂಚಿಸಲಾಗಿದೆ. ಆ ಆಸ್ತಿಗಳಿಗೆ ನೋಟಿಸ್‌ ನೀಡಿ, ಭಾರೀ ಪ್ರಮಾಣದ ತೆರಿಗೆ ಬಾಕಿ ಉಳಿಸಿಕೊಂಡವರು ಕೂಡಲೆ ತೆರಿಗೆ ಪಾವತಿಸುವಂತೆ ಸೂಚಿಸಲಾಗುತ್ತಿದೆ. ಒಂದು ವೇಳೆ ತೆರಿಗೆ ಪಾವತಿಸದಿದ್ದರೆ ಆಸ್ತಿಗಳಿಗೆ ಬೀಗಮುದ್ರೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗುತ್ತಿದೆ.

ನೋಟಿಸ್‌ ಹಾಗೂ ಬೀಗಮುದ್ರೆ ಹಾಕಲಾದ ಆಸ್ತಿಗಳ ವಿವರ: ವಲಯ ಎಲ್ಲ ವಿಧದ ನೋಟಿಸ್‌ ಬೀಗಮುದ್ರೆ ಹಾಕಿದ ಆಸ್ತಿಗಳು

ಬೊಮ್ಮನಹಳ್ಳಿ 6,005 936
ದಾಸರಹಳ್ಳಿ 2876 462
ಪೂರ್ವ 10,252 2,484
ಮಹದೇವಪುರ 6,042 1,319
ಆರ್‌.ಆರ್‌.ನಗರ 5,016 1,199
ದಕ್ಷಿಣ 11,309 1,687
ಪಶ್ಚಿಮ 15,153 1,764
ಯಲಹಂಕ 5,735 682
ಒಟ್ಟು 62,388 10,533

Follow Us:
Download App:
  • android
  • ios