ಕೆಂಪೇಗೌಡರು ನಿರ್ಮಿಸಿದ ಕೆರೆಗಳು ಮಾಯವಾಗಿದ್ಹೇಗೆ ಗೊತ್ತಾ? ಇಲ್ಲಿದೆ ನೋಡಿ ಎಳೇನಹಳ್ಳಿ ಕೆರೆಯ ಒತ್ತುವರಿ ನೈಜ ದೃಶ್ಯದ ವಿಡಿಯೋಗಳು. ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ತಡೆಯುತ್ತಾರಾ, ಇಲ್ಲ ಕಮಿಷನ್ ಪಡೆದು ಸುಮ್ಮನಾಗುತ್ತಾರಾ?
ಬೆಂಗಳೂರು (ಫೆ.05): ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಎಳೇನಹಳ್ಳಿ ಕೆರೆಯನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಒತ್ತುವರಿ ಮಾಡಿ, ಕೆರೆಯ ಒಡಲಿಗೆ ಮಣ್ಣು ಹಾಗೂ ಕಟ್ಟಡ ತಯಾಜ್ಯವನ್ನು ಸುರಿದು ಮುಚ್ಚುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡರೆ ಕೆರೆ ಉಳಿಯುತ್ತದೆ. ಹಣ ಪಡೆದು ಸುಮ್ಮನಾದರೆ, ಕೆರೆ ವಿನಾಶ ಕಟ್ಟಿಟ್ಟ ಬುತ್ತಿಯಾಗಿದೆ.
ಎಳೇನಹಳ್ಳಿ ಕೆರೆ ಒತ್ತುವರಿ ದೃಶ್ಯಗಳನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಹಾಗೂ ದೃಶ್ಯಗಳನ್ನು ಬಿಬಿಎಂಪಿ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಕಂಡೂ ಕಾಣದಂತೆ ಸುಮ್ಮನಿದ್ದಾರೆಂದರೆ ಅವರೂ ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ಕೆರೆ ನುಂಗಿದ ನಂತರ ಒತ್ತುವರಿ ತೆರವು ಎಂದು ನಾಟಕವಾಡತ್ತಾ ನ್ಯಾಯಾಲಯಕ್ಕೆ ಅಲೆಯುವ ಮೊದಲೇ ಎಚ್ಚೆತ್ತುಕೊಂಡು ಈ ಕೆರೆಯನ್ನು ಸಂರಕ್ಷಣೆ ಮಾಡಿ.. ಮಣ್ಣು ಮುಚ್ಚಿದ ಉದ್ಯಮಿಗಳಿಂದಲೇ ಈ ಕೆರೆ ಪುನರುಜ್ಜೀವನಗೊಳಿಸಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಅಂಧಭಕ್ತರ ರಾಜ್ಯಗಳಿಗೆ ಮಾತ್ರ ಹೆಚ್ಚಿನ ಅನುದಾನ, ದಕ್ಷಿಣದ ರಾಜ್ಯಗಳಿಗೆ ಮಲತಾಯಿ ಧೋರಣೆ: ಬಿ.ಕೆ. ಹರಿಪ್ರಸಾದ್
ಬೆಂಗಳೂರಿನಲ್ಲಿ ಕೆರೆಗಳನ್ನು ನುಂಗಿ ನೀರು ಕುಡಿದ ರಿಯಲ್ ಎಸ್ಟೇಟ್ ಉದ್ಯಮಿಗಳ ದಾಹ ಇನ್ನೂ ತೀರಿಲ್ಲ. ಬೆಂಗಳೂರು ದಕ್ಷಿನ ವಿಧಾನಸಭಾ ಕ್ಷೇತ್ರದ ಎಳೇನಹಳ್ಳಿ ಹಿಂಭಾಗದ ಕೆರೆಯ ಬಳಿ ದೊಡ್ಡ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಲಾಗಿದ್ದು, ಈಗ ಪಕ್ಕದಲ್ಲಿನ ಕೆರೆಯನ್ನೇ ಮುಚ್ಚಲು ಮುಂದಾಗಿದ್ದಾರೆ. ನೂರಾರು ಟಿಪ್ಪರ್‌ಗಳ ಮೂಲಕ ಮಣ್ಣು ಹಾಗೂ ಕಟ್ಟಡ ತ್ಯಾಜ್ಯವನ್ನು ಕೆರೆಗೆ ಸುರಿಯುತ್ತಿದ್ದಾರೆ. ಇದನ್ನು ಜೆಸಿಬಿ ಮೂಲಕ ಕೆರೆಗೆ ತಳ್ಳಿ ಮುಚ್ಚುತ್ತಿರುವ ವಿಡಿಯೋ ವೈರಲ್ ಆಗಿದ್ದು, ಬಿಬಿಎಂಪಿ ಅಧಿಕಾರಿಗಳೇ ಕೆರೆಯನ್ನು ಉಳಿಸಿ ಎಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರು ಉದ್ಯಾನ ನಗರಿ ಹಾಗೂ ಸಿಲಿಕಾನ್ ಸಿಟಿ ಆಗುವುದಕ್ಕೂ ಮುನ್ನ ಕೆರೆಗಳ ನಗರವಾಗಿತ್ತು. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಇಲ್ಲಿ 300ಕ್ಕೂ ಅಧಿಕ ಕೆರೆಗಳನ್ನು ನಿರ್ಮಿಸಿ ಕುಡಿಯುವ ನೀರಿನ ಹಾಹಾಕಾರ ತೀರಿಸಿದ್ದೂ ಅಲ್ಲದೇ, ಪ್ರವಾಹ ಪರಿಸ್ಥಿತಿಯನ್ನೂ ನಿಯಂತ್ರಣ ಮಾಡಿದ್ದರು. ಆದರೆ, ರಿಯಲ್ ಎಸ್ಟೇಟ್ ಉದ್ಯಮಿಗಳು ಸರ್ಕಾರಿ ಅಧಿಕಾರಿಗಳಿಗೆ ಪುಡಿಗಾಸು ನೀಡಿ ಕೆರೆಗಳನ್ನು ಒತ್ತುವರಿ ಮಾಡಿ ದೊಡ್ಡ ಲೇಔಟ್ ಹಾಗೂ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡಿದ್ದಾರೆ.
ಬೆಂಗಳೂರಿನ ಕೆರೆಗಳು ಹಾಗೂ ರಾಜಕಾಲವೆಯನ್ನು ಒತ್ತುವರಿ ಮಾಡಿಕೊಂಡ ನಂತರ ದೊಡ್ಡ ದೊಡ್ಡ ಉದ್ಯಮಿಗಳು ಕಟ್ಟಿಸಿದ ಅಪಾರ್ಟ್‌ಮೆಂಟ್‌ಗಳ ಫ್ಲ್ಯಾಟ್‌ಗಳನ್ನು ಬಿಬಿಎಂಪಿ ಅಧಿಕಾರಿಗಳು, ಐಎಎಸ್-ಕೆಎಎಸ್ ಅಧಿಕಾರಿಗಳು, ಭ್ರಷ್ಟ ನೌಕರರು, ರಾಜಕಾರಣಿಗಳು ಖರೀದಿ ಮಾಡುತ್ತಾರೆ. ನಂತರ, ಕೆರೆ ಒತ್ತುವರಿಯಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತೆರವು ಮಾಡಲು ಮುಂದಾದಾಗ ತಮ್ಮದೇ ಬುದ್ಧಿ ಉಪಯೋಗಿಸಿ ನ್ಯಾಯಾಲಯದ ಮೆಟ್ಟಿಲೇರತ್ತಾರೆ. ಆಗ, ಪಾಲಿಕೆಯಿಂದ ತೆರವು ಮಾಡಲಾಗದೇ ಕೈಕಟ್ಟಿ ಕುಳಿತುಕೊಳ್ಳಲಾಗುತ್ತದೆ. ಕೆರೆಯ ಮೇಲೆ ವಾಸ ಮಾಡುವವರು ನೆಮ್ಮದಿಯಾಗಿಯೇ ಇರುತ್ತಾರೆ.
ಆದಾಯ ಮೀರಿದ ಯೋಜನೆಗಳಿಂದ ಬಿಬಿಎಂಪಿಗೆ ₹13000 ಕೋಟಿ ಬಿಲ್ ಬಾಕಿ!
ಕೆರೆ ಒತ್ತುವರಿ ತೆರವು ನಾಟಕದಲ್ಲಿ ಬಡವರ ಮೇಲೆ ದೌರ್ಜನ್ಯ: ದೊಡ್ಡ ಅಪಾರ್ಟ್‌ಮೆಂಟ್ ಹಾಗೂ ಸುತ್ತಲಿನ ಖಾಲಿ ಸ್ಥಳದಲ್ಲಿ ಸಣ್ಣ ಪುಟ್ಟ ಬಡಜನರು ಕೂಡ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿಕೊಂಡಿರುತ್ತಾರೆ. ಇವರಿಗೆ ಕಾನೂನು ಮತ್ತು ನ್ಯಾಯಾಲಯ ಗೊತ್ತಿಲ್ಲದ್ದರಿಂದ ಬಿಬಿಎಂಪಿ ಅಧಿಕಾರಿಗಳು ಬಡಜನರ ಒತ್ತುವರಿಯನ್ನು ತೆರವುಗೊಳಿಸಿ ಕೆರೆ ರಕ್ಷಣೆ ಮಾಡಿದ್ದಾಗಿ ಲೆಕ್ಕ ಕೊಡುತ್ತಾರೆ. ಆದರೆ, ನುಂಗಣ್ಣರು ಮಾತ್ರ ಮತ್ತೊಂದು ಕೆರೆಯನ್ನು ನುಂಗುತ್ತಿರುತ್ತಾರೆ.
