ಬೆಂಗಳೂರು(ಜು.11): ಕೊರೋನಾ ಸೋಂಕು ಟೆಸ್ಟ್ ಮಾಡಿಕೊಂಡ ಬಳಿಕವೇ ಚಿಕಿತ್ಸೆ ನೀಡುವುದಾಗಿ ಹಾಗೂ ಬೆಡ್‌ ಇಲ್ಲ ಎಂದು ಸುಳ್ಳು ಹೇಳಿ ಚಿಕಿತ್ಸೆ ನೀಡಲು ನಿರಾಕರಿಸಿದ್ದ ನಗರದ 46 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟಿಸ್‌ ಜಾರಿ ಮಾಡಿದೆ. ಸರ್ಕಾರದ ಆದೇಶ ಉಲ್ಲಂಘಿಸಿ ಖಾಸಗಿ ಆಸ್ಪತ್ರೆಗಳು ಕೊರೋನಾ ಸೋಂಕಿತರು ಹಾಗೂ ಇತರೆ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿರಲಿಲ್ಲ.

ಈ ಬಗ್ಗೆ ಬಿಬಿಎಂಪಿ ಆರೋಗ್ಯ ವಿಭಾಗ ಮತ್ತು ಪೊಲೀಸ್‌ ಠಾಣೆಗಳಿಗೆ ಬರುತ್ತಿದ್ದ ದೂರುಗಳ ಸಂಖ್ಯೆ ಹೆಚ್ಚಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ, ನಗರ ಪೊಲೀಸ್‌ ಆಯುಕ್ತ ಸಹಯೋಗದಲ್ಲಿ ನಗರದ 46 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌ ಜಾರಿ ಮಾಡಿದೆ.

ರಾಜಾಜಿನಗರ ಆರ್‌ಟಿಒ ಕಚೇರಿ ಸೀಲ್‌ಡೌನ್‌

ಮಹಾಮಾರಿ ಕೊರೋನಾ ಸೋಂಕು ಸಾರಿಗೆ ಇಲಾಖೆಗೂ ದಾಂಗುಡಿ ಇರಿಸಿದ್ದು, ರಾಜಾಜಿನಗರದ ಆರ್‌ಟಿಒ ಕಚೇರಿಯ ಅಧಿಕಾರಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಭಾರತದಲ್ಲಿ ಕೊರೋನಾ ಲಸಿಕೆ 2021ರಲ್ಲಿ ಮಾತ್ರ ಲಭ್ಯ: ಕೇಂದ್ರ!

ಕಚೇರಿಗೆ ಸೋಂಕು ನಿವಾರಕ ಸಿಂಪಡಿಸಿ, ಸೀಲ್‌ಡೌನ್‌ ಮಾಡಲಾಗಿದೆ. ಶುಕ್ರವಾರದಿಂದ ಮೂರು ದಿನಗಳ ಕಾಲ ಕಚೇರಿಯನ್ನು ಬಂದ್‌ ಮಾಡಲಾಗಿದೆ. ಸೋಂಕಿತ ಅಧಿಕಾರಿ ನೀಡಿದ ಮಾಹಿತಿ ಮೇರೆಗೆ ಅವರ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.