ಬೆಂಗಳೂರು [ಜು.31]:  ನಗರದಲ್ಲಿ ರಸ್ತೆ ಗುಂಡಿಗಳಿಂದ ವಾಹನ ಸವಾರರು ಅಪಘಾತಕ್ಕೀಡಾಗಿ ಗಾಯಗೊಂಡರೆ ಅದಕ್ಕೆ ಸಂಬಂಧಪಟ್ಟಬಿಬಿಎಂಪಿ ಅಧಿಕಾರಿಗಳನ್ನೇ ಹೊಣೆಯಾಗಿಸಬೇಕು ಹಾಗೂ ಪಾಲಿಕೆ ಪರಿಹಾರ ನೀಡಬೇಕಾಗುತ್ತದೆ ಎಂದು ಇಂಗಿತ ವ್ಯಕ್ತಪಡಿಸಿರುವ ಹೈಕೊರ್ಟ್‌, ಆ ಕುರಿತು ಬುಧವಾರ ವಿವರವಾದ ಆದೇಶವನ್ನು ಹೊರಡಿಸುವುದಾಗಿ ತಿಳಿಸಿದೆ.

ನಗರದ ರಸ್ತೆಗಳು ಗುಂಡಿಗಳಿಂದ ಹಾಳಾಗಿರುವುದರಿಂದ ಅಪಘಾತಗಳು ಏರ್ಪಟ್ಟು ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ವಿಜಯ್‌ ಮೆನನ್‌ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಮತ್ತು ನ್ಯಾಯಮೂರ್ತಿ ಪಿ.ಎಂ.ನವಾಜ್‌ ಅವರಿದ್ದ ವಿಭಾಗೀಯ ಪೀಠ ಹೀಗೆ ಹೇಳಿತು.

ಅದಕ್ಕೂ ಮುನ್ನ ಬಿಬಿಎಂಪಿ ಪರ ವಕೀಲರು ಮೆಮೊ ಸಲ್ಲಿಸಿ, ನಗರದ 362 ಪ್ರಮುಖ ರಸ್ತೆಗಳ 943.74 ಕಿ.ಮೀ. ಉದ್ದದ ರಸ್ತೆಗಳಲ್ಲಿ ಗುಂಡಿಗಳಿಲ್ಲ. ಆದರೆ, 401 ಕಿ.ಮೀ. ಉದ್ದವಿರುವ 108 ಪ್ರಮುಖ ರಸ್ತೆಗಳು ಗುಂಡಿಗಳಿಂದ ಕೂಡಿದೆ. ಪಾಲಿಕೆಯು ಗುಂಡಿಗಳನ್ನು ಮುಚ್ಚುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದು ವಿವರಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಗುಂಡಿಗಳನ್ನು ಮುಚ್ಚುವುದು ನಿರಂತರ ಪ್ರಕ್ರಿಯೆಯೇ ಆಗಿರುವುದು ದುರದೃಷ್ಟಸಂಗತಿ. ರಸ್ತೆ ಗುಂಡಿಗಳಿಗೆ ಅಧಿಕಾರಿಗಳನ್ನು ಹೊಣೆ ಮಾಡಬೇಕು. ಇಲ್ಲವಾದರೆ ಸಮಸ್ಯೆ ಬಗೆಹರಿಸುವುದಿಲ್ಲ. ಅದರಂತೆ ಇನ್ನು ಮುಂದೆ ರಸ್ತೆಗಳ ದುಸ್ಥಿತಿಯಿಂದ ಜನರು ಗಾಯಗೊಂಡರೆ ಅದಕ್ಕೆ ಅಧಿಕಾರಿಗಳನ್ನು ಹೊಣೆ ಮಾಡಬೇಕು ಹಾಗೂ ಪಾಲಿಕೆಯೇ ಪರಿಹಾರ ನೀಡಬೇಕು ಎಂದು ತಿಳಿಸಿದರು.

ಬಿಬಿಎಂಪಿ ವಕೀಲರು ಉತ್ತರಿಸಿ, ರಸ್ತೆ ಹಾಳಾಗಲು ಮೆಟ್ರೋ ಸೇರಿದಂತೆ ವಿವಿಧ ಸಂಸ್ಥೆಗಳು ಕಾರಣವಾಗಿವೆ. ಅಭಿವೃದ್ಧಿ ಕಾರ್ಯಗಳನ್ನು ಬೇರೆ ಬೇರೆ ಸಂಸ್ಥೆಗಳಿಗೆ ನೀಡುವಾಗ ಆ ಬಗ್ಗೆ ಒಪ್ಪಂದವಾಗಿರುತ್ತದೆ. ಆದರೆ, ಆ ಸಂಸ್ಥೆಗಳು ಒಪ್ಪಂದ ಪಾಲಿಸುವುದಿಲ್ಲ. ಹೀಗಾಗಿ, ಅವುಗಳ ಮೇಲೆ ಸಮಾನ ಹೊಣೆಗಾರಿಕೆ ವಹಿಸಬೇಕು ಎಂದು ಕೋರಿದರು.

ಅದಕ್ಕೆ ನ್ಯಾಯಪೀಠ ಪ್ರತಿಕ್ರಿಯಿಸಿ, ಕೇವಲ ರಸ್ತೆ ಗುಂಡಿಗಳನ್ನು ಮುಚ್ಚುವುದಷ್ಟೇ ಬಿಬಿಎಂಪಿಯ ಕರ್ತವ್ಯವಲ್ಲ. ರಸ್ತೆಗಳು ಸಾರ್ವಜನಿಕರ ಸಂಚಾರಕ್ಕೆ ತೃಪ್ತಿದಾಯಕವಾಗಿರಬೇಕು. ರಸ್ತೆ ಅಭಿವೃದ್ಧಿಗೆ ಬೇರೆ ಬೇರೆ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೂ ಪಾಲಿಕೆಯು ತನ್ನ ಹೊಣೆಗಾರಿಕೆ ನಿರ್ವಹಿಸಬೇಕು. ರಸ್ತೆಗಳ ಸ್ಥಿತಿಗತಿ ಮೇಲೆ ನಿಗಾವಹಿಸಲು ಐಐಟಿ, ಐಐಎಸ್ಸಿಯಂತಹ ತಜ್ಞ ಸಂಸ್ಥೆಗಳನ್ನು ನೇಮಿಸಿಕೊಳ್ಳಬೇಕು ಎಂದು ಸಲಹೆ ನೀಡಿತು.

ಅರ್ಜಿದಾರರ ಪರ ವಕೀಲರು, ಪಾಲಿಕೆಯ ಎಲ್ಲ 198 ವಾರ್ಡ್‌ಗಳಲ್ಲಿ ರಚನೆ ಮಾಡಲಾಗಿರುವ ವಾರ್ಡ್‌ ಸಮಿತಿಗಳಿಗೆ ರಸ್ತೆ ನಿರ್ವಹಣೆಯ ಜವಾಬ್ದಾರಿ ವಹಿಸಬೇಕು ಹಾಗೂ ರಸ್ತೆ ಗುಂಡಿಗಳಿಂದ ಗಾಯಗೊಂಡವರಿಗೆ ಪಾಲಿಕೆ ಪರಿಹಾರ ನೀಡುವಂತೆ ಆದೇಶಿಸಬೇಕು ಎಂದು ಕೋರಿದರು.