ಸೈಟ್ ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದರೆ ಬಿಬಿಎಂಪಿಯಿಂದ ಬೀಳುತ್ತೆ 1 ಲಕ್ಷ ದಂಡ
ಸೈಟ್ ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದರೆ ಮಾಲಿಕರಿಗೆ 1 ಲಕ್ಷ ದಂಡ ವಿಧಿಸಲು ಬಿಬಿಎಂಪಿ ಆರ್‌ಆರ್ ನಗರ ವಲಯ ಜಂಟಿ ಆಯುಕ್ತ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು (ಜು.17): ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳಲ್ಲಿ ಕಸದ ರಾಶಿ ಮತ್ತು ಕಟ್ಟಡ ಭಗ್ನಾವಶೇಷಗಳನ್ನು ತೆರವುಗೊಳಿಸಿ ಶುಚಿತ್ವ ಕಾಪಾಡಿಕೊಳ್ಳಬೇಕು. ಇಲ್ಲವಾದಲ್ಲಿ ನಿವೇಶನ ಮಾಲಿಕರಿಗೆ .1 ಲಕ್ಷ ದವರೆಗೆ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಆರ್‌ಆರ್ ನಗರ ವಲಯ ಜಂಟಿ ಆಯುಕ್ತ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ರಾಜರಾಜೇಶ್ವರಿ ನಗರ ವಲಯದ ಜಾಲಹಳ್ಳಿ, ಜೆ.ಪಿ ಪಾರ್ಕ್, ಯಶವಂತಪುರ, ಎಚ್‌ಎಂಟಿ, ಲಕ್ಷ್ಮೇದೇವಿ ನಗರ, ಲಗ್ಗೆರೆ, ಕೊಟ್ಟಿಗೆಪಾಳ್ಯ, ಜ್ಞಾನಭಾರತಿ, ರಾಜರಾಜೇಶ್ವರಿ ನಗರ, ದೊಡ್ಡ ಬಿದರಕಲ್ಲು, ಹೆರೋಹಳ್ಳಿ, ಉಲ್ಲಾಳ, ಕೆಂಗೇರಿ ಮತ್ತು ಹೆಮ್ಮಿಗೆಪುರ ವಾರ್ಡ್‌ನಲ್ಲಿನ ಖಾಲಿ ನಿವೇಶನಗಳಲ್ಲಿ ಕಸದ ರಾಶಿ ಹಾಗೂ ಕಟ್ಟಡಗಳ ಭಗ್ನಾವಶೇಷ ಸುರಿದಿರುವುದು ಕಂಡು ಬಂದಿದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಕೂಡಲೇ ನಿವೇಶನದ ಮಾಲಿಕರು ತೆರವುಗೊಳಿಸಬೇಕು. ಇಲ್ಲವಾದರೆ, .50 ಸಾವಿರದಿಂದ .1 ಲಕ್ಷ ವರೆಗೆ ದಂಡ ವಿಧಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಬಿಎಂಪಿ 243 ವಾರ್ಡ್ ಅಂತಿಮ, 24 ವಾರ್ಡ್ ಹೆಸರು ಬದಲಿಸಿ ಸರ್ಕಾರ ಆದೇಶ
ನಗರದ ಬಹುತೇಕ ಕಡೆ ಭರ್ಜರಿ ಮಳೆ: ಶನಿವಾರ ಸಂಜೆ ನಗರದ ಬಹುತೇಕ ಭಾಗದಲ್ಲಿ ಭರ್ಜರಿ ಮಳೆಯಾಗಿದೆ. ಸಂಜೆ 4ರ ಹೊತ್ತಿಗೆ ಮಳೆ ಪ್ರಾರಂಭಗೊಂಡು ಸುಮಾರು ಅರ್ಧ ಗಂಟೆ ಮಳೆ ಸುರಿಯಿತು. ಅದಾದ ನಂತರವು ಆಗಾಗ ತುಂತುರು ಮಳೆ ಬಂದು ಹೋಗುತಿತ್ತು.
ಶೆಟ್ಟಿಹಳ್ಳಿಯಲ್ಲಿ 1.7 ಸೆಂ.ಮೀ, ಬಾಗಲಕುಂಟೆ 1.5, ವರ್ತೂರು 1.3, ಮಾರತ್‌ಹಳ್ಳಿ 1.2, ಕೋಡಿಗೆಹಳ್ಳಿಯಲ್ಲಿ 1 ಸೆಂ. ಮೀ. ಮಳೆಯಾಗಿದೆ. ಶನಿವಾರ ನಗರದ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 25.6 ಮತ್ತು 20.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಭಾನುವಾರ ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಒಂದೆರಡು ಬಾರಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಗಾಳಿಯ ವೇಗ ಹೆಚ್ಚಿರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಮತ್ತು 19 ಡಿಗ್ರಿ ಸೆಲ್ಸಿಯಸ್‌ನ ಸುತ್ತಮುತ್ತ ಇರುವ ಸಂಭವವಿದೆ ಎಂದು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಪಾರ್ಕ್‌ಗಳು ಇನ್ನು ಮಧ್ಯಾಹ್ನವೂ ತೆರೆದಿರುತ್ತೆ!
ಅನಧಿಕೃತವಾಗಿ ರಸ್ತೆ ಅಗೆಯುವರ ಮೇಲೆ ಮಾರ್ಷಲ್ಸ್ ನಿಗಾ: ಅನಧಿಕೃತವಾಗಿ ರಸ್ತೆ ಅಗೆಯುವುದರ ಮೇಲೆ ನಿಗಾ ವಹಿಸಲು ಮಾರ್ಷಲ್‌ಗಳನ್ನು ಬಳಕೆ ಮಾಡಿಕೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶುಕ್ರವಾರ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಡಿ ಮಹದೇವಪುರ ವಲಯ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಈ ವೇಳೆ ಬೆಸ್ಕಾಂ ಅನಧಿಕೃತವಾಗಿ ರಸ್ತೆ ಅಗೆದು ಕೇಬಲ್ ಅಳವಡಿಕೆ ಮಾಡುತ್ತಿರುವುದರಿಂದ ಗುಂಡಿಗಳು ನಿರ್ಮಾಣವಾಗುತ್ತಿದೆ ಎಂದು ಸ್ಥಳೀಯರ ದೂರಿಗೆ ಸ್ಪಂದಿಸಿದ ಮುಖ್ಯ ಆಯುಕ್ತರು, ಎಲ್ಲಂದರಲ್ಲಿ ರಸ್ತೆ ಅಗೆಯುವಂತಿಲ್ಲ. ನಿರ್ದಿಷ್ಟಮಾದರಿಯಲ್ಲಿ ರಸ್ತೆ ಅಗೆಯಬೇಕು. ಅದಕ್ಕೂ ಮುನ್ನ ಸಂಬಂಧಪಟ್ಟಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಅನಧಿಕೃತವಾಗಿ ರಸ್ತೆ ಅಗೆಯುವುದರ ಮೇಲೆ ನಿಗಾ ವಹಿಸಲು ಮಾರ್ಷಲ್‌ಗಳನ್ನು ಬಳಕೆ ಮಾಡಿಕೊಳ್ಳಿ. ಅನಧಿಕೃತವಾಗಿ ರಸ್ತೆ ಅಗೆಯುವವರಿಗೆ ದಂಡ ವಿಧಿಸುವಂತೆ ನಿರ್ದೇಶಿಸಿದರು.
ವಲಯ ಆಯುಕ್ತ ಡಾ. ತ್ರಿಲೋಕ್ ಚಂದ್ರ, ವಲಯ ಜಂಟಿ ಆಯುಕ್ತ ವೆಂಕಟಾಚಲಪತಿ, ವಲಯ ಉಪ ಆಯುಕ್ತೆ ಸರೋಜಾದೇವಿ, ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ ಉಪಸ್ಥಿತರಿದ್ದರು.