ಬೆಂಗಳೂರು ರಸ್ತೆಯಲ್ಲಿ ಅನಧಿಕೃತ ಬೋರ್‌ವೆಲ್: ಸರಿಯಾಗಿ ಬುದ್ಧಿ ಕಲಿಸಿದ ಬಿಬಿಎಂಪಿ!
ಬೆಂಗಳೂರಿನ ಹೇರೋಹಳ್ಳಿಯಲ್ಲಿ ಮುಖ್ಯ ರಸ್ತೆಯಲ್ಲಿ ಅನಧಿಕೃತವಾಗಿ ಬೋರ್‌ವೆಲ್ ಕೊರೆಸುತ್ತಿದ್ದವರ ಮೇಲೆ ಬಿಬಿಎಂಪಿ ದೂರು ದಾಖಲಿಸಿದೆ. ಪಾಲಿಕೆಯಿಂದ ಯಾವುದೇ ಅನುಮತಿ ಪಡೆಯದೆ ಕೊಳವೆ ಬಾವಿ ಕೊರೆಸಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಸಾರ್ವಜನಿಕ ರಸ್ತೆಯನ್ನು ಅಗೆದು ಹಾಳು ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಬೆಂಗಳೂರು (ಅ.07): ಸಿಲಿಕಾನ್ ಸಿಟಿ ಬೆಂಗಳೂರಿನ ಆರ್.ಆರ್. ನಗರ ವಲಯದ ಹೇರೋಹಳ್ಳಿಯಲ್ಲಿ ಮೂರ್ನಾಲ್ಕು ಜನರು ಸೇರಿಕೊಂಡು ಮುಖ್ಯ ರಸ್ತೆಯಲ್ಲಿಯೇ ಅನಧಿಕೃತವಾಗಿ ಬೋರ್‌ವೆಲ್ ಕೊರೆಸುತ್ತಿದ್ದವರ ಮೇಲೆ ಬಿಬಿಎಂಪಿ ದೂರು ದಾಖಲಿಸಿದೆ.
ಬೆಂಗಳೂರಿನಲ್ಲಿ ಪಾಲಿಕೆ ಹಾಗೂ ಸರ್ಕಾರಿ ಜಾಗಗಳನ್ನು ನುಂಗಿ ನೀರು ಕುಡಿದ ಭೂಗಳ್ಳರ ನಡುವೆ ಇದೀಗ, ಮುಖ್ಯ ರಸ್ತೆಗಳಲ್ಲಿಯೇ ಬೋರ್‌ವೆಲ್ ಕೊರೆಸಿ ನೀರು ಮಾರಿಕೊಳ್ಳುವ ಘಟನೆಗಳು ನಡೆಯುತ್ತಿವೆ. ಆದರೆ, ಇದೀಗ ಆರ್.ಆರ್ ನಗರ ವಲಯ ಹೇರೋಹಳ್ಳಿ ವಾರ್ಡ್‌ಮ ವೀರಭದ್ರೇಶ್ವರ ನಗರ ಓಂ ಸಾಯಿ ಪಬ್ಲಿಕ್ ಮುಖ್ಯ ರಸ್ತೆಯಲ್ಲಿ ಅನಧಿಕೃತವಾಗಿ ಹಾಗೂ ಪಾಲಿಕೆ ವತಿಯಿಂದ ಯಾವುದೇ ಅನುಮತಿ ಪಡೆಯದೆ ಕೊಳವೆ ಬಾವಿ ಕೊರೆಸುತ್ತಿರುವವರ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕೇಕ್ ದುರಂತ: ಅಪ್ಪ ತಂದುಕೊಟ್ಟ ಬರ್ತಡೇ ಕೇಕ್ ತಿಂದು ಪ್ರಾಣಬಿಟ್ಟ ಮಗು; ತಂದೆ-ತಾಯಿ ಗಂಭೀರ!
ವೀರಭದ್ರೇಶ್ವರ ನಗರ ಓಂ ಸಾಯಿ ಪಬ್ಲಿಕ್ ಮುಖ್ಯ ರಸ್ತೆಯಲ್ಲಿ ಪಾಲಿಕೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ 3ನೇ ಅಕ್ಟೋಬರ್ 2024 ರಿಂದ 4ನೇ ಅಕ್ಟೋಬರ್ 2024ರ ಸಂಜೆಯವರೆಗೆ ಕೊಳವೆ ಬಾವಿ ಕೊರೆಸುವ ಕಾರ್ಯ ನಡೆದಿರುತ್ತದೆ. ಈ ಸಂಬಂಧ ಪಾಲಿಕೆಗೆ ದೂರು ಬಂದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ. ಈ ವೇಳೆ ಜನರ ಸಂಚಾರಕ್ಕೆ ಅನುಕೂಲ ಆಗಲೆಂದು ಬಿಬಿಎಂಪಿ ವತಿಯಿಂದ ಕೋಟ್ಯಂತರ ರೂ. ಹಣವನ್ನು ಖರ್ಚು ಮಾಡಿದ ಅಭಿವೃದ್ಧಿ ಮಾಡಿದ ರಸ್ತೆಯಲ್ಲಿ ಅನಧಿಕೃತವಾಗಿ ಬೋರ್‌ವೆಲ್ ಕೊರೆಸುತ್ತಿರುವುದು ಕಂಡುಬಂದಿದೆ.
ಸಾರ್ವಜನಿಕ ರಸ್ತೆಯನ್ನು ಅಗೆದು ಹಾಳು ಮಾಡಿ ಕೊಳವೆ ಬಾವಿಯನ್ನು ಪಾಲಿಕೆಯ ರಸ್ತೆಯಲ್ಲಿ ಕೊರೆಸುತ್ತಿದ್ದು, ಸಾರ್ವಜನಿಕರಿಗಾಗಿ ನಿರ್ಮಾಣ ಮಾಡಿದ ಡಾಂಬರು ರಸ್ತೆಯನ್ನು ಹಾಳುಮಾಡಿರುತ್ತಾರೆ. ಈ ಸಂಬಂಧ 4ನೇ ಅಕ್ಟೋಬರ್ 2024ರಂದು ಪಾಲಿಕೆ ಅಧಿಕಾರಿಯು ಮಾಗಡಿ ಮುಖ್ಯ ರಸ್ತೆಯ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಳವೆ ಬಾವಿ ಕೊರೆಸಿದವರ ಹಾಗೂ ಬೋರ್‌ವೆಲ್ ಕೊರೆಯುವ ವಾಹನದ ಮೇಲೆ ಕಾನೂನ ಕ್ರಮ ಕೈಗೊಳ್ಳಲು ದೂರು ನೀಡಲಾಗಿದೆ.
Namo Bharat Rapid Rail: ಬೆಂಗಳೂರು, ಮೈಸೂರು, ತುಮಕೂರಿಗೆ ಬರಲಿದೆ ನಮೋ ಭಾರತ್ ರಾಪಿಡ್ ರೈಲ್!
ಮುಂದುವರಿದು, ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಥಮ ವರ್ತಮಾನ ವರದಿ(ಎಫ್.ಐ.ಆರ್) ದಾಖಲಿಸಿಕೊಳ್ಳಲಾಗಿದ್ದು, ಕೂಡಲೆ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಜರುಗಿಸಲು ಪೊಲೀಸ್ ಠಾಣೆಯಲ್ಲಿ ಕೋರಲಾಗಿದೆ. ಅಲ್ಲದೆ ಅನಧಿಕೃತವಾಗಿ ರಸ್ತೆಯಲ್ಲಿ ಕೊಳವೆ ಬಾವಿ ಕೊರೆದವರಿಗೆ ದಂಡ ವಿಧಿಸಲು ಕೂಡಾ ಕ್ರಮ ಕೈಗೊಳ್ಳಲಾಗುತ್ತಿದೆ.