Asianet Suvarna News Asianet Suvarna News

ಬೆಂಗಳೂರಲ್ಲಿ ಎಲ್ಲಿ ನೋಡಿದ್ರೂ ದಡಬಡ ರಸ್ತೆ..!

ನಗರದ 464 ಪ್ರಮುಖ ರಸ್ತೆಗಳಲ್ಲಿ 200ಕ್ಕೂ ಅಧಿಕ ರಸ್ತೆಗಳು ಗುಂಡಿಮಯ| ರಸ್ತೆ ನಿರ್ವಹಣೆಯಲ್ಲಿ ಬಿಬಿಎಂಪಿ ವಿಫಲ| ಪ್ರತಿವರ್ಷ ಕೋಟ್ಯಂತರ ರುಪಾಯಿ ವೆಚ್ಚ ಮಾಡಿದ್ರೂ ವ್ಯರ್ಥ| ಮುಗಿಯದ ಬವಣೆ| ಹೊಸ ಹೊಸ ರಸ್ತೆಗುಂಡಿ ಸೃಷ್ಟಿ| 

BBMP Failed to Manage the Road Pothole in Bengaluru grg
Author
Bengaluru, First Published Nov 8, 2020, 9:35 AM IST
  • Facebook
  • Twitter
  • Whatsapp

ಬೆಂಗಳೂರು(ನ.08): ರಾಜಧಾನಿ ರಸ್ತೆಗಳು ಗುಂಡಿಮಯವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಪ್ರತಿವರ್ಷ ರಸ್ತೆ ಗುಂಡಿ ಮುಚ್ಚಲು ಕೋಟ್ಯಂತರ ರು. ವ್ಯಯಿಸುತ್ತಿರುವ ಬಿಬಿಎಂಪಿ ಸಮಪರ್ಕವಾಗಿ ರಸ್ತೆಗಳ ನಿರ್ವಹಣೆ ಮಾಡುವಲ್ಲಿ ವಿಫಲವಾಗುತ್ತಿದೆ.

ಜಲಮಂಡಳಿ, ಬೆಸ್ಕಾಂ, ಕೇಬಲ್‌ ಕಂಪನಿಗಳು, ಟೆಂಡರ್‌ ಶ್ಯೂರ್‌, ಸ್ಮಾರ್ಟ್‌ ಸಿಟಿ, ವೈಟ್‌ ಟಾಪಿಂಗ್‌ ಸೇರಿದಂತೆ ವಿವಿಧ ಕಾಮಗಾರಿಗಳಿಗಾಗಿ ರಸ್ತೆಗಳನ್ನು ಕತ್ತರಿಸಲಾಗುತ್ತಿದೆ. ಆದರೆ, ಸಮರ್ಪಕವಾಗಿ ಈ ಗುಂಡಿಗಳನ್ನು ಮುಚ್ಚದಿರುವ ಪರಿಣಾಮ ವಾಹನಗಳು ಸಂಚರಿಸುವುದರಿಂದ ಈ ಗುಂಡಿಗಳು ಹೊಂಡದಂತಾಗಿ ಮೃತ್ಯು ಕೂಪಗಳಾಗಿ ಬದಲಾಗುತ್ತಿವೆ.

ಬಿಬಿಎಂಪಿ ಈ ರಸ್ತೆ ಗುಂಡಿ ಮುಚ್ಚಲು ಕೋಟ್ಯಂತ ರು. ವ್ಯಯಿಸುತ್ತಿದೆ. ಕೆಲವು ಕಡೆ ಗುಂಡಿ ಮುಚ್ಚಿದ್ದರೂ ಅವುಗಳ ಡಾಂಬರೀಕರಣ ತೀರಾ ವಿಳಂಬವಾಗಿ ನಡೆಯುತ್ತದೆ. ಬಹುತೇಕ ಕಡೆ ಈ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿರುವುದರಿಂದ ವಾರ ಅಥವಾ ಹದಿನೈದು ದಿನಗಳಲ್ಲಿ ಮತ್ತೆ ಗುಂಡಿಗಳು ಸೃಷ್ಟಿಯಾಗುತ್ತಿವೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 1300 ಕಿ.ಮೀ. ರಸ್ತೆಗಳಿವೆ. 464 ಪ್ರಮುಖ ರಸ್ತೆಗಳಿದ್ದು, ಈ ಪೈಕಿ 200ಕ್ಕೂ ಅಧಿಕ ರಸ್ತೆಗಳು ಗುಂಡಿಮಯವಾಗಿವೆ. ರಾಜಭವನ, ಗೂಡ್ಸ್‌ಶೆಡ್‌ ರಸ್ತೆ, ನಾಯಂಡಹಳ್ಳಿ, ಶೇಷಾದ್ರಿ ರಸ್ತೆ, ಆನಂದ್‌ರಾವ್‌ ವೃತ್ತ, ಕಾರ್ಡ್‌ ರಸ್ತೆ, ವಿಜಯನಗರ, ನಾಯಂಡಹಳ್ಳಿ, ಹನುಮಂತನಗರ, ಶ್ರೀನಿವಾಸನಗರ, ಬಸವನಗುಡಿ, ಮೈಸೂರು ರಸ್ತೆ ಸೇರಿದಂತೆ ನೂರಾರು ರಸ್ತೆಗಳಲ್ಲಿ ಸಾವಿರಾರು ಗುಂಡಿ ಸೃಷ್ಟಿಯಾಗಿದ್ದು, ಸವಾರರಿಗೆ ನಿತ್ಯ ನರಕಯಾತನೆ ಅನುಭವದ ಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಲ್ಲಿ ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಹೊಸ ಪ್ಲಾನ್‌

ಮಳೆಯಿಂದ ರಸ್ತೆಗಳಿಗೆ ಹಾನಿ

ಇತ್ತೀಚೆಗೆ ನಗರದಲ್ಲಿ ಸುರಿದ ಭಾರೀ ಮಳೆಯಿಂದ ಹೊಸಕೆರೆಹಳ್ಳಿ, ವೀರಭದ್ರೇಶ್ವರನಗರ, ದತ್ತಾತ್ರೇಯನಗರ, ರಾಜರಾಜೇಶ್ವರಿನಗರ, ಕೋರಮಂಗಲ, ಕೆಂಗೇರಿ, ಬೊಮ್ಮನಹಳ್ಳಿ ಸೇರಿದಂತೆ ಮಳೆ ಹಾನಿಗೊಳಗಾದ ಪ್ರದೇಶಗಳ ರಸ್ತೆಗಳಿಗೆ ಹಾನಿಯಾಗಿದ್ದು, ದೊಡ್ಡ ಗುಂಡಿಗಳು ಸೃಷ್ಟಿಯಾಗಿವೆ. ಬಿಬಿಎಂಪಿಯಿಂದ ಈ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಕೈಗೊಳ್ಳಲಾಗಿದ್ದರೂ ಕಾಮಗಾರಿಗಳು ನಿಧಾನಗತಿಯಲ್ಲಿ ಜರುಗುತ್ತಿವೆ. ಈ ನಡುವೆ ನಗರದಲ್ಲಿ ಮತ್ತೆ ಮಳೆಯಾದರೆ, ಈ ರಸ್ತೆ ಗುಂಡಿ ಸಮಸ್ಯೆ ಮತ್ತಷ್ಟುಉಲ್ಬಣಿಸಲಿದೆ. ಹೀಗಾಗಿ ತ್ವರಿತಗತಿಯಲ್ಲಿ ಈ ರಸ್ತೆಗಳ ಗುಂಡಿ ಮುಚ್ಚುವಂತೆ ನಿವಾಸಿಗಳು ಆಗ್ರಹಿಸುತ್ತಿದ್ದಾರೆ.

ಆಮೆ ವೇಗದಲ್ಲಿ ದುರಸ್ತಿ ಕಾರ್ಯ

ಪಾಲಿಕೆ ವ್ಯಾಪ್ತಿಯ ರಸ್ತೆ ಗುಂಡಿ ಮುಚ್ಚಲು ಸುಸಜ್ಜಿತ ಹಾಟ್‌ ಮಿಕ್ಸ್‌ ಪ್ಲಾಂಟ್‌ ಸ್ಥಾಪಿಸಲಾಗಿದೆ. ಆದರೂ ಸಮರ್ಪಕವಾಗಿ ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಬಿಬಿಎಂಪಿ ಆಯುಕ್ತರು ಇತ್ತೀಚೆಗೆ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ವಲಯವಾರು ರಸ್ತೆಗಳ ಗುಂಡಿಗಳನ್ನು ಗುರುತಿಸಿ, ತ್ವರಿತಗತಿಯಲ್ಲಿ ದುರಸ್ತಿಗೊಳಿಸಲು ತಂಡಗಳನ್ನು ರಚಿಸುವಂತೆ ಸೂಚಿಸಿದ್ದರು. ಆದರೂ ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ. ಹಳೆ ಗುಂಡಿ ಮುಚ್ಚುವ ವೇಳೆಗೆ ಹೊಸ ಗುಂಡಿಗಳು ಸೃಷ್ಟಿಯಾಗುತ್ತಿರುವುದು ಎಂದೆಂದಿಗೂ ಮುಗಿದ ಸಮಸ್ಯೆಯಾಗಿ ತಲೆದೋರಿದೆ.

ನಗರದ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು, ಮಳೆ ಸಂದರ್ಭದಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಬಿಬಿಎಂಪಿ ರಸ್ತೆ ಗುಂಡಿಗಳನ್ನು ಮುಚ್ಚುತ್ತೇವೆ ಎಂದು ಹೇಳುತ್ತಿದ್ದು, ಕಾರ್ಯಗತಗೊಳಿಸುವಲ್ಲಿ ವಿಫಲವಾಗಿದೆ ಎಂದು ರಾಜರಾಜೇಶ್ವರಿನಗರ ನಿವಾಸಿ ಶಿವಲಿಂಗಪ್ರಭು ತಿಳಿಸಿದ್ದಾರೆ.

ರಾತ್ರಿ ವೇಳೆ ಯಾವುದು ರಸ್ತೆ, ಯಾವುದು ಗುಂಡಿ ಎಂಬುದೇ ಗೊತ್ತಾಗುವುದಿಲ್ಲ. ಬಿಬಿಎಂಪಿ ಅಥವಾ ರಾಜ್ಯಸರ್ಕಾರ ಮೂಲಭೂತವಾಗಿ ರಸ್ತೆ, ನೀರು, ವಿದ್ಯುತ್‌, ಕಸದ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಹೊಸಕೆರೆಹಳ್ಳಿ ನಿವಾಸಿ ಶಿವಲಿಂಗಪ್ಪ ಹೇಳಿದ್ದಾರೆ. 
 

Follow Us:
Download App:
  • android
  • ios