ಬೆಂಗಳೂರಲ್ಲಿ ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಹೊಸ ಪ್ಲಾನ್
ಬೆಂಗಳೂರು(ಆ.30): ರಾಜಧಾನಿಯ ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ತೀವ್ರ ಟೀಕೆಗೆ ಗುರಿಯಾಗಿರುವ ಬಿಬಿಎಂಪಿಯು ಇದೀಗ ಸಮಪರ್ಕವಾಗಿ ರಸ್ತೆ ಗುಂಡಿ ಮುಚ್ಚಲು ವಿಧಾನಸಭಾ ಕ್ಷೇತ್ರವಾರು ‘ಲೇಬರ್ ಟೆಂಡರ್’ ಮೊರೆ ಹೋಗಲು ಪ್ಲಾನ್ ಮಾಡಿದೆ.
ನಗರದ ರಸ್ತೆ ಗುಂಡಿ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರ ಅಧ್ಯಕ್ಷೆಯಲ್ಲಿ ಶನಿವಾರ ಕರೆಯಲಾಗಿದ್ದ ಇಂಜಿನಿಯರ್‌ಗಳ ಸಭೆಯಲ್ಲಿ ಪಾಲಿಕೆಯ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಲೇಬರ್ ಟೆಂಡರ್ ಕರೆಯಲು ತೀರ್ಮಾನ
ಬಿಬಿಎಂಪಿ ವ್ಯಾಪ್ತಿಯ 27 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಏಕಕಾಲಕ್ಕೆ ಡಾಂಬರು, ಯಂತ್ರಗಳು ಹಾಗೂ ಸಿಬ್ಬಂದಿ ನಿಯೋಜನೆ ಸವಾಲಾಗಿದೆ. ಸೀಮಿತ ವ್ಯಾಪ್ತಿಯಲ್ಲಿ ಸಕಾಲಕ್ಕೆ ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚುವ ಹಿನ್ನೆಲೆಯಲ್ಲಿ ಲೇಬರ್ ಟೆಂಡರ್ ಕರೆಯಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಪ್ರತಿ ವಿಧಾನಸಭಾ ಕ್ಷೇತ್ರವಾರು ರಸ್ತೆ ಗುಂಡಿ ಮುಚ್ಚಲು ಲೇಬರ್ ಟೆಂಡರ್ ಕರೆಯಲಾಗುತ್ತದೆ. ಅಂದರೆ, ಟೆಂಡರ್ ಪಡೆಯುವ ಗುತ್ತಿಗೆದಾರರು ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ರಸ್ತೆ ಗುಂಡಿ ಮುಚ್ಚಲು ರೋಲರ್ ತರಬೇಕು. ಕಣ್ಣೂರಿನಲ್ಲಿರುವ ಪಾಲಿಕೆಯ ಡಾಂಬರು ಮಿಶ್ರಣ ಘಟಕದಿಂದ ರಸ್ತೆ ಗುಂಡಿ ಮುಚ್ಚಲು ಅಗತ್ಯವಿರುವ ಡಾಂಬರ್ ಒದಗಿಸಲಾಗುತ್ತದೆ. ಇದರಿಂದ ರಸ್ತೆಗಳ ಗುಣಮಟ್ಟಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 1,323 ಕಿ.ಮೀ.ಉದ್ದದ ರಸ್ತೆಗಳಿವೆ. ಪ್ರಸ್ತುತ 354 ರಸ್ತೆಗಳು ಗುಂಡಿ ಮುಕ್ತವಾಗಿದ್ದು, 459 ಗುಂಡಿ ರಸ್ತೆಗಳಿವೆ. ಅಂತೆಯೆ 234 ರಸ್ತೆಗಳ ದುರಸ್ತಿ ಬಾಕಿಯಿದ್ದರೆ, 236 ಗುಂಡಿ ರಸ್ತೆಗಳನ್ನು ಅಗೆಯಲಾಗಿದೆ.