ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಜ.26): ಹಸಿ, ಒಣ ಕಸ, ಪ್ಲಾಸ್ಟಿಕ್‌, ಕಟ್ಟಡ ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸಿ ಮನೆ ಬಾಗಿಲಿಗೆ ಬರುವ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ವಾಹನಗಳಿಗೆ ನೀಡದೆ, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದು ಸೇರಿದಂತೆ ವಿವಿಧ ಹಂತಗಳಲ್ಲಿ ನಿಯಮ ಉಲ್ಲಂಘನೆಯ ದಂಡ ಪ್ರಮಾಣವನ್ನು ದ್ವಿಗುಣಗೊಳಿಸಲು ಪಾಲಿಕೆ ತೀರ್ಮಾನಿಸಿದೆ.

ಕಳೆದ ಆಗಸ್ಟ್‌ನಲ್ಲಿ ‘ಬಿಬಿಎಂಪಿ ಕಸ ನಿರ್ವಹಣೆ ಬೈಲಾ-2019’ ಸಿದ್ಧಪಡಿಸಿ ಅದರಲ್ಲಿ ಕಸ ವಿಲೇವಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ದಂಡ ಪ್ರಮಾಣ ನಿಗದಿಪಡಿಸಿ ಸರ್ಕಾರಕ್ಕೆ ಕಳುಹಿಸಿ ಕೊಡಲಾಗಿತ್ತು. ರಾಜ್ಯ ಸರ್ಕಾರವೂ ಸೆಪ್ಟಂಬರ್‌ನಲ್ಲಿ ಅನುಮೋದನೆ ನೀಡಿ ಸಾರ್ವಜನಿಕರ ಆಕ್ಷೇಪಣೆ ಪಡೆದು ಅಗತ್ಯ ತಿದ್ದುಪಡಿ ತಂದು ಜಾರಿಗೊಳಿಸುವಂತೆ ಸೂಚನೆ ನೀಡಿತ್ತು. ಅದರಂತೆ ಬಿಬಿಎಂಪಿ ಸಾರ್ವಜನಿಕ ಆಕ್ಷೇಪಣೆ ಪಡೆದುಕೊಂಡಿದೆ. ಒಟ್ಟು 39 ಅಕ್ಷೇಪಣೆಗಳು ಬಂದಿವೆ.

ಅದರಲ್ಲಿ ಹೆಚ್ಚಿನ ಅಕ್ಷೇಪಣೆಗಳು ಕಸ ವಿಲೇವಾರಿ ನಿಯಮ ಉಲ್ಲಂಘನೆಗೆ ವಿಧಿಸಲಾಗಿರುವ ದಂಡದ ಪ್ರಮಾಣ ಹಾಗೂ ಸಗಟು ತ್ಯಾಜ್ಯ ಉತ್ಪಾದಕರಿಗೆ ವಿಧಿಸಲಾಗಿರುವ ಸೇವಾ ಶುಲ್ಕ ಪ್ರಮಾಣ ಕಡಿಮೆ ಇದ್ದು, ಏರಿಕೆ ಮಾಡುವಂತೆ ಪಾಲಿಕೆಗೆ ಆಕ್ಷೇಪಣೆ ಸಲ್ಲಿಸಲಾಗಿವೆ. ಬಿಬಿಎಂಪಿಯೂ ನಗರದ ಘನತ್ಯಾಜ್ಯ ವಿಲೇವಾರಿಗೆ .1 ಸಾವಿರ ಕೋಟಿಗೂ ಹೆಚ್ಚಿನ ಹಣ ವೆಚ್ಚ ಮಾಡುತ್ತಿದೆ. ಆದರೆ, ಸಾರ್ವಜನಿಕರಿಂದ ಕೇವಲ 40 ರಿಂದ 42 ಕೋಟಿ ರುಪಾಯಿ ಆಸ್ತಿ ತೆರಿಗೆಯೊಂದಿಗೆ ಘನತ್ಯಾಜ್ಯ ನಿರ್ವಹಣಾ ಕರ ಸಂಗ್ರಹಿಸಲಾಗುತ್ತಿದೆ. ಹೀಗಾಗಿ, ದಂಡ ಪ್ರಮಾಣವನ್ನು ದುಪಟ್ಟುಗೊಳಿಸುವುದಕ್ಕೆ ಬಿಬಿಎಂಪಿ ಮುಂದಾಗಿದೆ.

ಇನ್ನು ಸಗಟು ತ್ಯಾಜ್ಯ ಉತ್ಪಾದಕರಿಗೆ ಬೈಲಾದಲ್ಲಿ ವಿಧಿಸಲಾಗಿರುವ ಮಾಸಿಕ ಸೇವಾ ಶುಲ್ಕದ ಪ್ರಮಾಣವನ್ನು ಶೇ.15ರಿಂದ ಶೇ.30ರಷ್ಟುಏರಿಕೆಗೆ ಪ್ರಸ್ತಾವನೆ ಸಲ್ಲಿಕೆಗೆ ತೀರ್ಮಾನಿಸಲಾಗಿದೆ. ಈಗಾಗಲೇ ಬೈಲಾದ ದಂಡ ಪ್ರಮಾಣ ಹಾಗೂ ಸೇವಾ ಶುಲ್ಕದ ಪ್ರಮಾಣದ ಪರಿಷ್ಕರಣೆ ಮಾಡಲಾಗಿದ್ದು, ಮುಂದಿನ ಕೌನ್ಸಿಲ್‌ ಸಭೆಗೆ ಕಡತ ಮಂಡಿಸಿ ಒಪ್ಪಿಗೆ ಪಡೆದು ಸರ್ಕಾರಕ್ಕೆ ಕಳಹಿಸಿ ಕೊಡಲಾಗುವುದು. ಸರ್ಕಾರ ರಾಜ್ಯಪತ್ರ ಹೊರಡಿಸಲಿದೆ. ತದನಂತರ ದಂಡ ಮತ್ತು ಸೇವಾ ಶುಲ್ಕ ಜಾರಿಗೆ ಬರಲಿದೆ ಎಂದು ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ‘ಕನ್ನಡಪ್ರಭ’ ಹಾಗೂ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.

ಜತೆಗೆ ಕರಡು ಬೈಲಾದಲ್ಲಿ 10 ಕೆ.ಜಿ ವರೆಗೆ ತ್ಯಾಜ್ಯವನ್ನು ಬಿಬಿಎಂಪಿಯೇ ಸಂಗ್ರಹಿಸಲಿದೆ ಎಂದು ಹೇಳಿತ್ತು. ಆ ಪ್ರಮಾಣವನ್ನು ಕೇಂದ್ರ ಸರ್ಕಾರದ ಘನತ್ಯಾಜ್ಯ ನಿರ್ವಹಣೆ ನಿಯಮಾವಳಿ-2016ರ ಪ್ರಕಾರ 100 ಕೆ.ಜಿಗೆ ಏರಿಕೆ ಮಾಡುವುದಕ್ಕೆ ನಿರ್ಧರಿಸಿದೆ. ಇದರಿಂದ ಬಹುತೇಕ ಉದ್ದಿಮೆಗಳ ತ್ಯಾಜ್ಯವನ್ನು ಬಿಬಿಎಂಪಿಯೇ ಸಂಗ್ರಹಿಸಬೇಕಾಗುತ್ತದೆ. ಪಾಲಿಕೆ ಕಸ ವಿಲೇವಾರಿ ವೆಚ್ಚದ ಪ್ರಮಾಣ ಏರಿಕೆಯಾಗಲಿದೆ. ಹಾಗಾಗಿ, ಸಗಟು ತ್ಯಾಜ್ಯ ಉತ್ಪಾದಕರ ಸೇವಾ ಶುಲ್ಕ ಹೆಚ್ಚಳಕ್ಕೆ ತೀರ್ಮಾನಿಸಲಾಗಿದೆ. ಒಟ್ಟು 44 ಪ್ರಕಾರದ ಸಗಟು ತ್ಯಾಜ್ಯ ಉತ್ಪಾದಕರಿಗೆ ಸೇವಾ ಶುಲ್ಕದ ಪ್ರಮಾಣದ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಮುಖವಾಗಿ 50 ಆಸನ ಹೊಂದಿರುವ ಹೋಟೆಲ್‌, ರೆಸ್ಟೋರೆಂಟ್‌, ಡಾಬಾಗಳಿಗೆ ಮಾಸಿಕ 500, ಅದಕ್ಕಿಂತ ಹೆಚ್ಚು ಆಸನ ಇದ್ದರೆ 750, ಮೆಸ್‌, ಮೊಬೈಲ್‌ ಕ್ಯಾಂಟೀನ್‌ಗಳಿಗೆ 250, ಕಾಫಿ, ಟೀ, ಬೇಕರಿಗಳಿಗೆ 100, ಫಾಸ್ಟ್‌ ಫುಡ್‌ ಮಳಿಗೆಗಳಿಗೆ 200, ಮದುವೆ ಸಭೆ, ಸಮಾರಂಭ ಸಮುದಾಯ ಭವನಗಳಿಗೆ ಮಾಸಿಕ 1,000, ಹಾಸ್ಟೆಲ್‌, ಲಾಡ್ಜ್‌, ಪಬ್‌, ಬಾರ್‌, ರೆಸ್ಟೋರೆಂಟ್‌ಗಳಿಗೆ 750, ಎಲ್ಲಾ ರೀತಿಯ ಮಾಂಸ ವ್ಯಾಪಾರಿ ಮಳಿಗೆಗಳಿಗೆ 500, ಟೆಕ್ಸ್‌ಟೈಲ್ಸ್‌, ಗಾರ್ಮೆಂಟ್ಸ್‌ಗಳಿಗೆ 150, 50 ಆಸಿಗೆ ವರೆಗಿನ ಆಸ್ಪತ್ರೆ, ನಸಿಂರ್‍ಗ್‌ ಹೋಂಗಳಿಗೆ 400, ಅದಕ್ಕಿಂತ ಹೆಚ್ಚಿದ್ದರೆ 800, ಕ್ಲಿನಿಕ್‌ಗಳಿಗೆ 250, ಮೆಡಿಕಲ್‌ ಸ್ಟೋರ್‌ಗಳಿಗೆ 200, ಹಾರ್ಡ್‌ವೇರ್‌ ಶಾಪ್‌ಗೆ 100, ಚಿತ್ರಮಂದಿರಗಳಿಗೆ 500, ಎಲ್ಲಾ ರೀತಿಯ ವಾಹನಗಳ ಶೋರೂಂಗಳಿಗೆ 1,000, ವಾಹಸ ಸರ್ವಿಸ್‌ ಕೇಂದ್ರಗಳಿಗೆ 500 ಮಾಸಿಕ ಸೇವಾ ಶುಲ್ಕ ವಿಧಿಸಲಾಗಿತ್ತು. ಅದು ಶೇ.15ರಿಂದ 30 ರಷ್ಟು ಏರಿಕೆ ಆಗಲಿದೆ.

ಉಪಕರ ದರ ಏರಿಕೆ ಇಲ್ಲ

ಕರಡು ನೀತಿಯಲ್ಲಿ ಪ್ರಮುಖವಾಗಿ 1000 ಚದರ ಅಡಿವರೆಗಿನ ವಿಸ್ತೀರ್ಣದ ನಿವಾಸಿ ಕಟ್ಟಡಕ್ಕೆ ಪ್ರತಿ ತಿಂಗಳು 30, ಹಾಗೂ 1000 ಚ.ಅಡಿಯಿಂದ ಗರಿಷ್ಠ 5000 ಚ.ಅಡಿ ವರೆಗಿನ ನಿವಾಸಿ ಕಟ್ಟಡಗಳಿಗೆ ಆಯಾ ಕಟ್ಟಡ ವಿಸ್ತೀರ್ಣಕ್ಕೆ ಅನುಗುಣವಾಗಿ 200 ರವರೆಗೆ ಮಾಸಿಕ ಘನತ್ಯಾಜ್ಯ ಉಪಕರ ನಿಗಧಿಪಡಿಸಲಾಗಿದೆ. ಅದೇ ರೀತಿ ಕೈಗಾರಿಕಾ ಕಟ್ಟಡಗಳಿಗೆ 1000 ಚ.ಅಡಿ ವರೆಗೆ 100 ಹಾಗೂ ಅದಕ್ಕೆ ಮೇಲ್ಪಟ್ಟು 5000 ಚ.ಅಡಿ ವರೆಗೆ ಗರಿಷ್ಠ 300 ರವರೆಗೆ ಮಾಸಿಕ ತ್ಯಾಜ್ಯ ಉಪಕರ ವಿಧಿಸಲಾಗಿದೆ. ಜತೆಗೆ ಹೋಟೆಲ್‌, ಮಾಲ್‌, ಕಲ್ಯಾಣ ಮಂಟಪ ಸೇರಿದಂತೆ ಬೃಹತ್‌ ತ್ಯಾಜ್ಯ ಉತ್ಪಾದಕ ಸಂಸ್ಥೆಗಳಿಗೆ ಆರಂಭಿಕ 10 ಸಾವಿರ ಚ.ಅಡಿವರೆಗೆ .300ರಿಂದ ಗರಿಷ್ಠ 50 ಸಾವಿರ ಚ.ಅಡಿ ವರೆಗಿನ ಕಟ್ಟಡಗಳಿಗೆ .600 ರವರೆಗೆ ತ್ಯಾಜ್ಯ ನಿರ್ವಹಣಾ ಉಪಕರ ನಿಗದಿ ಪಡಿಸಲಾಗಿತ್ತು. ಈ ಯಾವುದೇ ಕರ ಏರಿಕೆ ಮಾಡಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬಿಬಿಎಂಪಿ ಕಸ ನಿರ್ವಹಣೆ ಕರಡು ಬೈಲಾ-2019ಕ್ಕೆ ಸಂಬಂಧಿಸಿದಂತೆ ಒಟ್ಟು 39 ಆಕ್ಷೇಪಣೆಗಳು ಬಂದಿವೆ. ಅದರಲ್ಲಿ ಕೆಲವು ಆಕ್ಷೇಪಣೆ ಅನುಷ್ಠಾನ ಸಾಧ್ಯವಿಲ್ಲ ಎಂದು ಕೈ ಬಿಡಲಾಗಿದೆ. ಉಳಿದಂತೆ ದಂಡ ಪ್ರಮಾಣ ಹಾಗೂ ಸೇವಾ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬಂದಿದ್ದರಿಂದ ಕರಡು ಬೈಲಾದಲ್ಲಿ ಕೆಲವು ತಿದ್ದುಪಡಿ ಮಾಡಲಾಗಿದೆ. ಕೌನ್ಸಿಲ್‌ ಸಭೆ ಮಂಡಿಸಿ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು. ಸರ್ಕಾರ ರಾಜ್ಯಪತ್ರ ಹೊರಡಿಸಿದ ಬಳಿಕ ಬೈಲಾ ಜಾರಿಗೆ ಬರಲಿದೆ ಎಂದು ವಿಶೇಷ ಆಯುಕ್ತರು ಪಾಲಿಕೆ ಘನತ್ಯಾಜ್ಯ ವಿಭಾಗ ಡಿ.ರಂದೀಪ್‌ ಅವರು ಹೇಳಿದ್ದಾರೆ. 

ಪ್ರಸ್ತಾಪಿತ ದಂಡ ಪ್ರಮಾಣ (ರುಪಾಯಿಗಳಲ್ಲಿ)

ಕೃತ್ಯ ಮೊದಲ ಹಂತದ ದಂಡ 2ನೇ ಬಾರಿ ಹಾಗೂ ನಂತರದ ದಂಡ
ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದು, ಉಗುಳುವುದು, ಮೂತ್ರ, ಮಲವಿಸರ್ಜನೆ 1,000 2,000
ತ್ಯಾಜ್ಯ ವಿಂಗಡಿಸದೆ ವಿಲೇವಾರಿಗೆ ನೀಡದಿದ್ದರೆ (ಬೃಹತ್‌ ತ್ಯಾಜ್ಯ ಉತ್ಪಾದಕರ ಹೊರತುಪಡಿಸಿ) 1,000 2,000
ತ್ಯಾಜ್ಯ ವಿಂಗಡಿಸದೆ ವಿಲೇವಾರಿಗೆ ನೀಡುವ ಸಣ್ಣ ವಾಣಿಜ್ಯ ಮಳಿಗೆಗಳಿಗೆ 2,000 5,000
ತ್ಯಾಜ್ಯ ವಿಂಗಡಿಸದೆ ವಿಲೇವಾರಿಗೆ ನೀಡುವ ಬೃಹತ್‌ ತ್ಯಾಜ್ಯ ಉತ್ಪಾದಕರಿಗೆ 4,000 10,000
ಮಾಂಸದಂಗಡಿ, ಕಸಾಯಿಖಾನೆ ತ್ಯಾಜ್ಯ ಪ್ರತ್ಯೇಕಿಸಿ ವಿಲೇವಾರಿಗೆ ನೀಡದಿದ್ದರೆ 2,000 4,000
ಕಟ್ಟಡ ತ್ಯಾಜ್ಯ ಬೇರ್ಪಡಿಸದಿರುವುದು, ಎಲ್ಲೆಂದರಲ್ಲಿ ಸುರಿಯುವುದು (ಪ್ರತಿ ಟನ್‌ಗೆ) 10,000 
ತ್ಯಾಜ್ಯ ಸುಡುವುದು, ಅನಧಿಕೃತ ವಿಲೇವಾರಿ, ಮುಚ್ಚುವುದು (ವಾಣಿಜ್ಯೇತರರಿಗೆ) 10,000 
ತ್ಯಾಜ್ಯ ಸುಡುವುದು, ಅನಧಿಕೃತ ವಿಲೇವರಿ, ಮುಚ್ಚುವುದು (ವಾಣಿಜ್ಯ ಉದ್ಯಮದಾರರಿಗೆ) 50,000