Asianet Suvarna News Asianet Suvarna News

‘ಒಂದೇ ಗಣೇಶ ಪ್ರತಿಷ್ಠಾಪಿಸಿ ಅಂದರೆ ನಮ್ಮನ್ನೇ ಹಿಂದೂ ವಿರೋಧಿ ಅಂತಾರೆ!’

ಗಣೇಶ ಹಬ್ಬ ಸಮೀಪಿಸುತ್ತಿದೆ. ಇದೇ ವೇಳೆ ಬಿಬಿಎಂಪಿಯಿಂದ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ. 

BBMP Creates Environmental Awareness For Ganesh Festival
Author
Bengaluru, First Published Jul 18, 2019, 8:58 AM IST

ಬೆಂಗಳೂರು [ಜು.18] :  ‘ಒಂದೇ ರಸ್ತೆಯಲ್ಲಿ ಗುಂಪುಗಾರಿಕೆ ಮಾಡಿಕೊಂಡು ಒಂದಕ್ಕಿಂತ ಹೆಚ್ಚು ಗಣೇಶಗಳನ್ನು ಪ್ರತಿಷ್ಠಾಪಿಸುವ ಬದಲು, ಎಲ್ಲರೂ ಒಟ್ಟಾಗಿ ಸೇರಿ ಒಂದು ರಸ್ತೆಯಲ್ಲಿ ಒಂದೇ ಗಣಪತಿ ಪ್ರತಿಷ್ಠಾಪಿಸಿ ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಲು ಹೋದರೆ ನಮ್ಮನ್ನೇ ಹಿಂದೂ ವಿರೋಧಿಗಳು ಎನ್ನುತ್ತಾರೆ, ನಮ್ಮನ್ನೇ ಆರೋಪಿಗಳಂತೆ ಬಿಂಬಿಸುತ್ತಾರೆ, ಏನು ಹೇಳೋಣ...’

ಇದು, ಬಿಬಿಎಂಪಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರ ವಿಷಾದದ ನುಡಿಗಳು.

ಗುರುವಾರ ಮಲ್ಲೇಶ್ವರದ ನಗರ ಆರೋಗ್ಯ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಬಿಬಿಎಂಪಿಯಿಂದ ಪರಿಸರ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಶಾಲಾ ಮುಖ್ಯಸ್ಥರೊಂದಿಗಿನ ಸಭೆಯಲ್ಲಿ ಶಿಕ್ಷಕರೊಬ್ಬರು ಮಾತನಾಡಿ, ಪ್ರತಿ ವರ್ಷ ಗಣೇಶ ಚತುರ್ಥಿಯ ಸಮಯದಲ್ಲಿ ಒಂದೊಂದು ರಸ್ತೆಯಲ್ಲೂ ಮೂರ್ನಾಲ್ಕು ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಇದರಿಂದ ಆ ರಸ್ತೆ ಸಂಚಾರ ಬಂದ್‌ ಮಾಡುವುದು ಸೇರಿದಂತೆ ವಿವಿಧ ಕಾರಣಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಅಲವತ್ತುಕೊಂಡರು.

ಇದಕ್ಕೆ ಉತ್ತರಿಸಿದ ಮೇಯರ್‌, ಇದು ಬಿಬಿಎಂಪಿ ಗಮನಕ್ಕೂ ಬಂದಿದೆ, ನಾವೂ ಕೂಡ ನಗರದ ವಿವಿಧೆಡೆ ಹೋದಾಗ ಒಂದೇ ರಸ್ತೆಯಲ್ಲಿ ಮೂರ್ನಾಲ್ಕು ಗಣೇಶಗಳನ್ನು ಪ್ರತಿಷ್ಠಾಪಿಸುವ ಬದಲು ರಸ್ತೆಯಲ್ಲಿರುವ ಎಲ್ಲರೂ ಒಟ್ಟಾಗಿ ಒಂದೇ ಮೂರ್ತಿ ಪ್ರತಿಷ್ಠಾಪಿಸಿ ಎಂದು ಮನವಿ ಮಾಡಿದ್ದೇವೆ. ಆದರೆ, ಏನು ಮಾಡೋದು, ಆ ರೀತಿ ಮನವಿ ಮಾಡಿದರೆ ನಮ್ಮನ್ನು ಆರೋಪಿಗಳಂತೆ ಬಿಂಬಿಸಲಾಗುತ್ತಿದೆ. ನಮ್ಮನ್ನೇ ಹಿಂದೂ ವಿರೋಧಿಗಳು ಎನ್ನುತ್ತಾರೆ. ಸಾರ್ವಜನಿಕರೇ ಇದನ್ನು ಸ್ವಯಂ ಪ್ರೇರಿತವಾಗಿ ಅರ್ಥಮಾಡಿಕೊಳ್ಳಬೇಕು ಅಸಹಾಯಕತೆ ವ್ಯಕ್ತಪಡಿಸಿದರು.

ಗಣೇಶ ಹಬ್ಬದಲ್ಲಿ ಮಣ್ಣಿನ ಗಣಪತಿ ಪ್ರತಿಷ್ಠಾಪನೆಯೇ ಶ್ರೇಷ್ಠ ಎನ್ನುವುದನ್ನು ಸಾರ್ವಜನಿಕರೇ ತಿಳಿದುಕೊಳ್ಳಬೇಕು. ಸಾರ್ವಜನಿಕರು ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶಗಳನ್ನು ಸಂಪೂರ್ಣ ನಿಲ್ಲಿಸಬೇಕು. ಈ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಬಿಬಿಎಂಪಿ ಜೊತೆ ಕೈಜೋಡಿಸಬೇಕು. ಪರಿಸರ ಸಂರಕ್ಷಣೆ, ನೀರು ಮಿತಬಳಕೆ, ಪ್ಲಾಸ್ಟಿಕ್‌ ಬಳಕೆ ನಿಷೇಧ, ಪಿಒಪಿ ಗಣೇಶ ಮೂರ್ತಿ ಬದಲು ಮಣ್ಣಿನ ಮೂರ್ತಿ ಬಳಕೆ ಹಾಗೂ ಕಸ ವಿಂಗಡಣೆ ಮಾಡುವ ಬಗ್ಗೆ ನಿತ್ಯ ಎರಡು ನಿಮಿಷಗಳ ಕಾಲ ಶಾಲೆಗಳಲ್ಲಿ ಅರಿವು ಮೂಡಿಸಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಶಾಲಾ ಮುಖ್ಯಸ್ಥರಿಗೆ ಮನವಿ ಮಾಡಿದರು.

8 ವಲಯದಲ್ಲೂ ಜಾಗೃತಿ ಕಾರ್ಯಕ್ರಮ

ಬಿಬಿಎಂಪಿ ವತಿಯಿಂದ ನಗರದ ಎಂಟು ವಲಯಗಳಲ್ಲೂ ಜಾಥಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಸಂಬಂಧ ದಕ್ಷಿಣ ವಲಯದಲ್ಲಿ ಜುಲೈ 20 (ಶನಿವಾರ) ರಂದು ಎಲ್ಲ ಶಾಲಾ ಮಕ್ಕಳ ಸಹಯೋಗದಲ್ಲಿ ಜಾಥಾ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಕಾರ್ಯಕ್ರಮ ಆಯಾ ವಾರ್ಡ್‌ ಪಾಲಿಕೆ ಸದಸ್ಯರುಗಳ ನೇತೃತ್ವದಲ್ಲಿ ನಡೆಯಲಿದೆ. ಅದೇ ರೀತಿ ಪಶ್ಚಿಮ ವಲಯದಲ್ಲಿ ಮುಂದಿನ ವಾರ ಆಯೋಜಿಸಲಾಗುತ್ತಿದ್ದು, ಈ ಬಗ್ಗೆ ಎಲ್ಲ ಶಾಲೆಗಳಿಗೂ ಸುತ್ತೋಲೆ ಕಳುಹಿಸಲಾಗುವುದು ಎಂದರು.

ಸಭೆಯಲ್ಲಿ ಜೆಡಿಎಸ್‌ ನಾಯಕಿ ನೇತ್ರಾವತಿ, ಶಾಲಾ ಮುಖ್ಯಸ್ಥರು ಮತ್ತಿತರರು ಹಾಜರಿದ್ದರು.

ಮೇಯರ್‌ ಅಸಮಾಧಾನ

ಸಭೆಗೆ ನಿರೀಕ್ಷಿತ ಮಟ್ಟದಲ್ಲಿ ಶಾಲಾ ಮುಖ್ಯಸ್ಥರು ಹಾಜರಾಗದೆ ಇರುವುದಕ್ಕೆ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರು ಅಸಮಾಧಾನ ವ್ಯಕ್ತಪಡಿಸಿದರು. ‘ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಸಭೆ ಹಮ್ಮಿಕೊಳ್ಳಲಾಗಿದೆ. ಇಂತಹ ಸಭೆಗೆ ಗೈರಾಜರಾಗುವುದು ಸರಿಯಲ್ಲ. ಈ ಭಾಗದಲ್ಲಿ140 ಖಾಸಗಿ ಶಾಲೆಗಳು ಮತ್ತು 33 ಬಿಬಿಎಂಪಿ ಶಾಲೆಗಳಿವೆ ಬಹುತೇಕರು ಹಾಜರಾಗದೆ ಇರುವುದು ಬೇಸರವುಂಟು ಮಾಡಿದೆ’ ಎಂದರು.

ಸಭೆಯಲ್ಲಿ ಶಾಲಾ ಮುಖ್ಯಸ್ಥರು ನೀಡಿದ ಸಲಹೆಗಳು

*ಗಣಪತಿ ಹಬ್ಬಕ್ಕೆ ಪಿಒಪಿ ಮೂರ್ತಿ ಬದಲು ಪರಿಸರ ಸ್ನೇಹಿ ಗಣಪತಿ ಮಾತ್ರ ಪ್ರತಿಷ್ಠಾಸಲು ತಿಳಿಸಿ.

*ಶಾಲಾ ಮಕ್ಕಳಿಗೆ ಸ್ಟೀಲ್‌ ಬಾಟಲ್‌ ಮಾತ್ರ ಬಳಸುವಂತೆ ಸೂಚಿಸಬೇಕು.

*ಪರಿಸರ ಜಾಗೃತಿ ಸ್ಲಂ ಪ್ರದೇಶಗಳಲ್ಲೂ ಹೆಚ್ಚಾಗಬೇಕು.

*ಮಳೆ ನೀರು ಕೊಯ್ಲು ಅಳವಡಿಕೆಗೆ ಅನುದಾನಿತ ಶಾಲೆಗಳಿಗೂ ಪಾಲಿಕೆ ನೆರವು ನೀಡಬೇಕು.

*ಪಿಒಪಿ ಗಣಪತಿ ಪೂಜೆಗೆ ಅಸಹಕಾರ ಚಳುವಳಿಯ ರೀತಿಯಲ್ಲೇ ವಿರೋಧ ವ್ಯಕ್ತಪಡಿಸಬೇಕು.

Follow Us:
Download App:
  • android
  • ios