ಬೆಂಗಳೂರು(ಸೆ.27): ನಗರದಲ್ಲಿ ಕೊರೋನಾ ಸೋಂಕು ತಡೆ ಸಂಬಂಧಿ ಮುನ್ನೆಚ್ಚರಿಕೆ ಕ್ರಮಗಳ ಉಲ್ಲಂಘನೆಯಿಂದ ಸೋಂಕು ಹೆಚ್ಚಾಗುತ್ತಿದ್ದು, ಹೀಗಾಗಿ, ದಂಡವನ್ನು 200ರಿಂದ 1 ಸಾವಿರಕ್ಕೆ ಹೆಚ್ಚಳಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ. 

ಶನಿವಾರ 198 ವಾರ್ಡ್‌ಗಳ ನೋಡಲ್‌ ಅಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರತಿನಿಧಿಗಳೊಂದಿಗೆ ನಗರದಲ್ಲಿ ಕೊರೋನಾ ಸೋಂಕು ನಿಯಂತ್ರಣ ಕುರಿತು ವಿಡಿಯೋ ಕಾನ್ಪರೆನ್ಸ್‌ ನಡೆಸಿದರು.
ಈ ವೇಳೆ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌, ಇಡೀ ಆರ್ಥಿಕ ವ್ಯವಸ್ಥೆ ತೆರೆದುಕೊಂಡಿದೆ. ಇಲ್ಲಿಗೆ ಕೊರೋನಾ ಸೋಂಕಿನ ಭೀತಿ ಮುಗಿಯಿತೆಂದು ಸಾರ್ವಜನಿಕರು ಸೋಂಕಿನ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ವಹಿಸುವ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ, ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಧರಿಸದಿದ್ದರೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ತಲಾ 200 ವಿಧಿಸುವ ದಂಡವನ್ನು 1 ಸಾವಿರಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಒಪ್ಪಿಗೆ ನೀಡಿದರೆ ದಂಡ ಪ್ರಮಾಣ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಪೊಲೀಸರಿಗೂ ಅಧಿಕಾರ:

ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಧರಿಸದಿದ್ದರೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ಬಿಬಿಎಂಪಿಯ ಮಾರ್ಷಲ್‌ ಮತ್ತು ಆರೋಗ್ಯ ಅಧಿಕಾರಿಗಳು ಮಾತ್ರ ದಂಡ ವಿಧಿಸುವ ಅಧಿಕಾರವಿತ್ತು. ಅದನ್ನು ಪೊಲೀಸ್‌ ಸಿಬ್ಬಂದಿಗೂ ನೀಡಲು ತೀರ್ಮಾನಿಸಲಾಗಿದೆ. ಸದ್ಯದಲ್ಲಿಯೇ ದಂಡ ವಿಧಿಸುವುದಕ್ಕೆ ಯಂತ್ರಗಳನ್ನು ಪೊಲೀಸರಿಗೂ ನೀಡಲಾಗುವುದು ಎಂದು ತಿಳಿಸಿದರು.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ಸೋಂಕು ಪರೀಕ್ಷೆ, ಸರ್ಕಾರದ ಕ್ರಮಗಳ ಬಗ್ಗೆ ಸುಳ್ಳು ಮಾಹಿತಿ ಹರಿಬಿಡಲಾಗುತ್ತಿದೆ. ಈ ಬಗ್ಗೆ ಪರಿಶೀಲಿಸಲು ಸೂಚಿಸಲಾಗಿದ್ದು, ತಪ್ಪಿತಸ್ಥರಿಗೆ ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಏರುತ್ತಿರುವ ಕೊರೋನಾ ಸೋಂಕು, ಮತ್ತೆ ಲಾಕ್‌ಡೌನ್ ಶಾಕ್..!

ಜಾಗೃತಿ ಹೆಚ್ಚಿಸಲು ಪಾಲಿಕೆಗೆ ಸಲಹೆ

ಹೋಟೆಲ್‌ಗಳು ಮತ್ತು ಸಾರ್ವಜನಿಕ ಸ್ಥಳದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುತ್ತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಬ್ಯಾನರ್‌ ಅಳವಡಿಕೆ ಮಾಡಿ, ಜಾಗೃತಿ ಹೆಚ್ಚಿಸುವಂತೆ ಬಿಬಿಎಂಪಿಗೆ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರತಿನಿಧಿಗಳು ಸಲಹೆ ನೀಡಿದರು.

ಯುವಕರಿಗೆ, ಮಕ್ಕಳಿಗೆ ಕೊರೋನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ರಸಪ್ರಶ್ನೆ ಕಾರ್ಯಕ್ರಮ ಸೇರಿದಂತೆ ಇನ್ನಿತರ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸಬೇಕು, ಆರೋಗ್ಯ ಶಿಬಿರ ಹಾಗೂ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ತಕ್ಷಣ ಚಿಕಿತ್ಸೆ ವ್ಯವಸ್ಥೆ ಮಾಡುವಂತೆ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಆಯುಕ್ತ ಮಂಜುನಾಥ ಪ್ರಸಾದ್‌ ಮನವಿ ಮಾಡಿದರು.

ಬೆಂಗಳೂರು ಹಾಗೂ ರಾಜ್ಯದಲ್ಲಿ ಕೊರೋನಾ ಸೋಂಕು ಇನ್ನೂ ನಿಂತಿಲ್ಲ, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುವುದರಿಂದ ಮಾತ್ರ ಸೋಂಕು ನಿಯಂತ್ರಣಕ್ಕೆ ತರುವುದಕ್ಕೆ ಸಾಧ್ಯ ಎಂದು ರಾಜ್ಯ ಮತ್ತು ಬಿಬಿಎಂಪಿ ಕೋವಿಡ್‌ ಕಾರ್ಯಪಡೆ ತಜ್ಞ ಸಮಿತಿಯ ಸದಸ್ಯ ಡಾ. ಗಿರಿಧರ್‌ ಬಾಬು ಅವರು ತಿಳಿಸಿದ್ದಾರೆ.