Asianet Suvarna News Asianet Suvarna News

ಕೊರೋನಾ ಚಿಕಿತ್ಸೆ: ಇನ್ಮುಂದೆ ಸರ್ಕಾರಿ ಆಸ್ಪತ್ರೆಗೆ ಆದ್ಯತೆ

ಬೆಂಗಳೂರಲ್ಲಿ ಕೊರೋನಾ ಸೋಂಕಿನ ಪ್ರಮಾಣ ಶೇ.3ಕ್ಕೆ ಇಳಿಕೆ ಹಿನ್ನೆಲೆ| ಇನ್ಮುಂದೆ ಖಾಸಗಿ ಆಸ್ಪತ್ರೆ ಶಿಫಾರಸ್ಸಿಗೆ ಬ್ರೇಕ್‌| ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ: ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌| ಖಾಸಗಿ ಆಸ್ಪತ್ರೆಗಳಿಗೆ ಒತ್ತಡ ಕಡಿಮೆ| 

BBMP Commissioner N Manjunath Prasad Talks Over Coronavirus Treatment grg
Author
Bengaluru, First Published Nov 19, 2020, 8:21 AM IST

ಬೆಂಗಳೂರು(ನ.19): ನಗರದಲ್ಲಿ ಕೊರೋನಾ ಸೋಂಕು ಪತ್ತೆ ಪ್ರಮಾಣ ಶೇ.3ಕ್ಕೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಆದೇಶಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಹಾಸಿಗೆಗಳು ಖಾಲಿ ಇದ್ದರೂ ಸಹ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಶಿಫಾರಸು ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಈ ಆದೇಶ ನೀಡಲಾಗಿದೆ. ಸೋಂಕು ಪ್ರಮಾಣ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಕೋವಿಡ್‌ ಹಾಸಿಗೆಯಲ್ಲಿಯೇ ಚಿಕಿತ್ಸೆ ನೀಡಬಹುದಾಗಿದೆ. ಹೊಸದಾಗಿ ಪತ್ತೆಯಾಗುವ ಯಾವುದೇ ಸೋಂಕಿತರನ್ನು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಶಿಫಾರಸು ಮಾಡದೆ, ಲಭ್ಯವಿರುವ ಸರ್ಕಾರಿ ಆಸ್ಪತ್ರೆಗಳಿಗೆ ವರ್ಗಾಯಿಸಿ ಚಿಕಿತ್ಸೆ ನೀಡಬೇಕು ಎಂದು ಸೂಚಿಸಲಾಗಿದೆ. ಒಂದು ವೇಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌ ಹಾಸಿಗೆಗಳು ಶೇ.90 ಭರ್ತಿಯಾದಲ್ಲಿ ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಬಹುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ನಗರದಲ್ಲಿ ಅ.1 ರಿಂದ ನ.15ರವರೆಗೆ ಪತ್ತೆಯಾದ ಸೋಂಕಿತ ಪ್ರಕರಣಗಳ ಪೈಕಿ ಸರ್ಕಾರಿ ಆಸ್ಪತ್ರೆಗಳ ಶೇ.30 ಹಾಸಿಗೆಯಲ್ಲಿ ಮಾತ್ರ ಚಿಕಿತ್ಸೆ ನೀಡಲಾಗಿದೆ. ಉಳಿದ ಶೇ.70 ಸರ್ಕಾರಿ ಆಸ್ಪತ್ರೆಗಳ ಕೋವಿಡ್‌ ಹಾಸಿಗೆಗಳು ಖಾಲಿಯಿದ್ದರೂ, ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್‌ ಕಾಲೇಜುಗಳಲ್ಲಿ ಶೇ.27 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನ.16ರ ಮಾಹಿತಿ ಪ್ರಕಾರ ಖಾಸಗಿ ಆಸ್ಪತ್ರೆಗಳಲ್ಲಿ 1,364 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 560 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ, ಸರ್ಕಾರಿ ಆಸ್ಪತ್ರೆಗಳ ಹಾಸಿಗೆ ಭರ್ತಿ ಆಗುವವರೆಗೆ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡುವುದನ್ನು ತಡೆಹಿಡಿಯಲಾಗಿದೆ ಎಂದು ವಿವರಿಸಿದ್ದಾರೆ.

ತರಗತಿ ಆರಂಭಕ್ಕೆ ಕೊರೋನಾ ಪರೀಕ್ಷೆ ವರದಿ ಅಡ್ಡಿ..!

ಖಾಸಗಿ ಆಸ್ಪತ್ರೆಗೆ ಶಿಫಾರಸು ಬಗ್ಗೆ ಆಕ್ಷೇಪ:

ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌ ಹಾಸಿಗೆ ಖಾಲಿಯಿದ್ದರೂ, ಖಾಸಗಿ ಆಸ್ಪತ್ರೆಗಳಿಗೆ ಸೋಂಕಿತರನ್ನು ಚಿಕಿತ್ಸೆಗೆ ಕಳುಹಿಸುವ ಮೂಲಕ ಸರ್ಕಾರದ ಹಣ ಪೋಲು ಮಾಡುತ್ತಿದೆ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ (ಎಸ್‌ಎಎಸ್‌ಟಿ) ಅಧಿಕಾರಿಗಳು, ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕಾರ್ಯದರ್ಶಿ ಅವರು ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗೆ ಆದ್ಯತೆ ನೀಡಬೇಕು. ಇಲ್ಲಿ ಭರ್ತಿಯಾದರೆ ಮಾತ್ರ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡುವಂತೆ ಸೂಚಿಸಿದ್ದರು.

ಖಾಸಗಿ ಆಸ್ಪತ್ರೆಗಳಿಗೆ ಒತ್ತಡ ಕಡಿಮೆ:

ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಶೇ.50 ರಷ್ಟು ಹಾಸಿಗೆ ನೀಡಬೇಕು. ಆದರೆ, ಪ್ರಸ್ತುತವಾಗಿ ಸೋಂಕು ಇಳಿಮುಖವಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಮೊದಲ ಆದ್ಯತೆ ಮೇರೆಗೆ ಚಿಕಿತ್ಸೆ ನೀಡಲು ಬಿಬಿಎಂಪಿ ತೀರ್ಮಾನಿಸಿದೆ. ಹೀಗಾಗಿ, ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಬಿಗಿ ಹಿಡಿತದಿಂದ ಕೊಂಚ ಸಡಿಲ ಸಿಕ್ಕಂತಾಗಿದೆ. ಸರ್ಕಾರಿ ಆಸ್ಪತ್ರೆ ಚಿಕಿತ್ಸೆ ಪಡೆಯಲಿಚ್ಛಿಸದ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿಸಿ ಚಿಕಿತ್ಸೆ ಪಡೆಯಬಹುದಾಗಿದೆ.

ಅ.1ರಿಂದ ನ.15ರ ತನಕ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಸೋಂಕಿತರು

ಅವಧಿ ಒಟ್ಟು ಸೋಂಕಿತರು ಸರ್ಕಾರಿ ಆಸ್ಪತ್ರೆಗೆ

ಅ.1ರಿಂದ ಅ.15 63,180 18,364 (ಶೇ.29)
ಅ.16ರಿಂದ ಅ.31 37,778 10,972 (ಶೇ.29)
ನ.1ರಿಂದ ನ.15 19,355 5,894 (ಶೇ.30)
 

Follow Us:
Download App:
  • android
  • ios