ಬೆಂಗಳೂರು(ಮಾ.10): ಕೊರೋನಾ ಭೀತಿ ಹಿನ್ನೆಲೆಯಲ್ಲಿ ನಗರದ ಮಾಲ್‌, ವಾಣಿಜ್ಯ ಮಳಿಗೆ ಹಾಗೂ ಜನದಟ್ಟಣೆ ಪ್ರದೇಶಗಳಲ್ಲೂ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಪಾಡುವ ಮಾದರಿಯಲ್ಲೇ ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ.

ಕೊರೋನಾ ವೈರಸ್‌ ಭೀತಿ ಹಾಗೂ ನಗರದ ವಿವಿಧ ಪ್ರದೇಶದಲ್ಲಿ ಕಾಲರಾ ರೋಗ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಟೌನ್‌ಹಾಲ್‌ನಲ್ಲಿ ಬಿಬಿಎಂಪಿ ಆರೋಗ್ಯಾಧಿಕಾರಿಗಳ ತುರ್ತು ಸಭೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಆಯುಕ್ತರು, ಈಗಾಗಲೇ ಮಾಲ್‌, ಹೋಟೆಲ್‌, ಅಪಾರ್ಟ್‌ಮೆಂಟ್‌, ವಾಣಿಜ್ಯ ಉದ್ದಿಮೆಗಳ ಮಾಲೀಕರೊಂದಿಗೆ ಸಭೆ ಮಾಡಿ ಹೆಚ್ಚಿನ ಸ್ವಚ್ಛತೆ ಹಾಗೂ ಮುನ್ನೆಚ್ಚರಿಕೆ ಕ್ರಮ ವಹಿಸುವುದಕ್ಕೆ ಸೂಚನೆ ನೀಡಲಾಗಿದೆ. ತಮ್ಮ ವ್ಯಾಪ್ತಿಗೆ ಬರುವ ಮಾಲ್‌ ಹಾಗೂ ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿ. ನಗರದ ಎಲ್ಲ ಶೌಚಾಲಯಗಳಲ್ಲಿ ಕೈ ತೊಳೆಯಲು ಸಾಬೂನು ಅಥವಾ ದ್ರವ ರೂಪದಲ್ಲಿ ಕೆಮಿಕಲ್‌ ಕಡ್ಡಾಯವಾಗಿ ಇಡುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೊರೋನಾ ವೈರೆಸ್‌ ತಡೆಯಲು ನ-97 ಮಾಸ್ಕ್‌ಗಳನ್ನೇ ಬಳಸಬೇಕಿಲ್ಲ. ಮೂರು ಪದರದ ಮಾಸ್ಕ್‌ ಬಳಸಿದರೆ ಸಾಕು. ಹಾಗಂತ ಭಾರೀ ಪ್ರಮಾಣ ಮಾಸ್ಕ್‌ ಖರೀದಿ ಬಳಕೆ ಅವಶ್ಯಕತೆ ಇಲ್ಲ. ಕೆಮ್ಮು, ಶೀತ, ಜ್ವರ ಸೇರಿದಂತೆ ಆರೋಗ್ಯ ಸಮಸ್ಯೆ ಇರುವವರು ಬಳಕೆ ಮಾಡಿಕೊಂಡರೆ ಮತ್ತೊಬ್ಬರಿಗೆ ಸೋಂಕು ಹರಡುವುದನ್ನು ತಡೆಯಬಹುದು. ಈ ಬಗ್ಗೆ ಸಾರ್ವಜನಿಕರಿಗೆ ಕೊರೋನಾ ವೈರಸ್‌ ಬಗ್ಗೆ ಸ್ಪಷ್ಟವಾದ ಮಾಹಿತಿ ಕೊಡಿ ಎಂದರು.

ನಗರ ಐಟಿ- ಬಿಟಿ ಹಬ್‌ ಆಗಿರುವುದರಿಂದ ವಿದೇಶಕ್ಕೆ ಹೋಗಿ ಬರುವವರನ್ನು ಶಂಕಿತ ವ್ಯಕ್ತಿಗಳನ್ನು ತಪಸಾಣೆ ನಡೆಸಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಗ್ಯಾಧಿಕಾರಿಗಳನ್ನು ನಿಯೋಜನೆ ಮಾಡಿದ್ದೇವೆ. ಇನ್ನು ಹೊರ ದೇಶಕ್ಕೆ ಹೋಗಿ ಬಂದವರ ಬಗ್ಗೆ ಎಚ್ಚರಿಕೆ ಇರಲಿ ಎಂದು ಹೇಳಿದರು.

ಮೇಯರ್‌ ಎಂ.ಗೌತಮ್‌ ಕುಮಾರ್‌ ಮಾತನಾಡಿ, ಆರೋಗ್ಯಾಧಿಕಾರಿಗಳು ಸದ್ಯ ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ. ಮುಂಜಾಗ್ರತಾ ಕ್ರಮವಾಗಿ ಹಸ್ತಲಾಘವ ಮಾಡುವ ಬದಲು ನಮಸ್ಕರಿಸುವುದು, ಕೈಯಿಂದ ಮೂಗು, ಬಾಯಿ ಹಾಗೂ ಕಣ್ಣು ಮುಟ್ಟಿಕೊಳ್ಳಬಾರದು. ಕೆಮ್ಮುವಾಗ ಬಟ್ಟೆಅಡ್ಡ ಇಡುವ ಮುಂಜಾಗ್ರತಾ ಕ್ರಮ ಅನುಸರಿಸುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಎಂದು ಹೇಳಿದರು.

ಸಭೆಯಲ್ಲಿ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಮಂಜುನಾಥ್‌ ರಾಜು, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌.ಶ್ರೀನಿವಾಸ್‌, ವಿಶೇಷ ಆಯುಕ್ತರಾದ ಡಾ.ರವಿಕುಮಾರ್‌ ಸುರಪುರ, ಡಿ.ರಂದೀಪ್‌, ಮುಖ್ಯ ಆರೋಗ್ಯಾಧಿಕಾರಿ(ಸಾರ್ವಜನಿಕ) ಡಾ.ವಿಜೇಂದ್ರ, ಮುಖ್ಯ ಆರೋಗ್ಯಾಧಿಕಾರಿ(ಕ್ಲಿನಿಕಲ್‌) ಡಾ.ನಿರ್ಮಲಾ ಬುಗ್ಗಿ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ರಾಮಚಂದ್ರ, ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಗಳು, ಸಾರ್ವಜನಿಕರು ಮೊದಲಾದವರು ಉಪಸ್ಥಿತರಿದ್ದರು.

ಸಭೆಗೆ ಬಂದವರಿಗೆಲ್ಲ ಸ್ಯಾನಿಟೈಸರ್‌!

ಬಿಬಿಎಂಪಿ ಅಧಿಕಾರಿಗಳು, ಸಾರ್ವಜನಿಕರು ಹಾಗೂ ವಿವಿಧ ಕ್ಷೇಮಾಭಿವೃದ್ಧಿ ಸಂಘಟನೆಗೆ ಪ್ರತಿನಿಧಿಗಳು ನೂರಾರು ಸಂಖ್ಯೆಯಲ್ಲಿ ಟೌನ್‌ಹಾಲ್‌ನಲ್ಲಿ ಸೇರಿದ್ದರಿಂದ ಸಭಾಂಗಣದ ಒಳಗೆ ಪ್ರದೇಶಿಸುವ ಮುನ್ನ ಕರೋನಾ ವೈರೆಸ್‌ ಮುನ್ನೆಚ್ಚರಿಕೆ ಕ್ರಮವಾಗಿ ಸ್ಯಾನಿಟೈಸರ್‌ ಬಳಕೆ ಮಾಡುವಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮೇಯರ್‌ ಗೌತಮ್‌ ಕುಮಾರ್‌, ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ಸೇರಿದಂತೆ ಎಲ್ಲರೂ ಸ್ಯಾನಿಟೈಸರ್‌ ಬಳಸಿದರು.

ಜನರಿಂದ ರಸ್ತೆಯಲ್ಲಿ ಹೊಡೆಸಿಕೊಳ್ಳುವ ಪರಿಸ್ಥಿತಿ ತಂದುಕೊಳ್ಳಬೇಡಿ

ಸಂಜಯ್‌ ಗಾಂಧಿ ಆಸ್ಪತ್ರೆ ಸೇರಿದಂತೆ ನಗರದ ವಿವಿಧ ಕಡೆ ಸೋಮವಾರ ನಡೆಸಿದ ತಪಾಸಣೆ ವೇಳೆ ರಸ್ತೆಯಲ್ಲಿ ಕಸ, ಬ್ಲಾಸ್‌ಸ್ಪಾಟ್‌ ಇರುವುದನ್ನು ಗಮನಿಸಿದ್ದ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌, ಟೌನ್‌ಹಾಲ್‌ ಸಭೆಯಲ್ಲಿ ಬಿಬಿಎಂಪಿ ಆರೋಗ್ಯಾಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಜನರಿಂದ ರಸ್ತೆಯಲ್ಲಿ ಹೊಡೆಸಿಕೊಳ್ಳುವ ಪರಿಸ್ಥಿತಿ ತಂದುಕೊಳ್ಳಬೇಡಿ. ಬಿಬಿಎಂಪಿ ನೀಡುವ ಸಂಬಳಕ್ಕೆ ನಿಷ್ಠೆಯಿಂದ ಕೆಲಸ ಮಾಡಿ. ಆಸ್ಪತ್ರೆಗಳು ಇರುವ ಪ್ರದೇಶದಲ್ಲಿ ಹೆಚ್ಚಿನ ಕಾಳಜಿ ವಹಿಸಿ ಸ್ವಚ್ಛತೆ ಕಾಪಾಡಿ. ಸಂಜಯ್‌ ಗಾಂಧಿ ಆಸ್ಪತ್ರೆಯ ಬಳಿ ಕಸ, ಒಳಚರಂಡಿ ನೀರು ಹರಿಯುವ ಸ್ಥಳದಲ್ಲಿಯೇ ಆ್ಯಂಬುಲೆನ್ಸ್‌ಗಳನ್ನು ನಿಲ್ಲಿಸಲಾಗಿದೆ. ಕಲ್ಲಂಗಡಿ ಸೇರಿದಂತೆ ವಿವಿಧ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿದೆ. ನಗರ ಸ್ವಚ್ಛತೆಗೆ ಆದ್ಯತೆ ನೀಡಿದರೆ ಅರ್ಧ ಸಾಂಕ್ರಾಮಿಕ ರೋಗ ನಿಯಂತ್ರಣ ಮಾಡಬಹುದು ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತಡೆದುಕೊಂಡ ಘಟನೆ ನಡೆಯಿತು.