*   ಬಿಬಿಎಂಪಿಯಲ್ಲಿ ದಾಖಲೆ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹ*  ಜೂನ್‌ನಿಂದ ಶೇ. 9 ರಷ್ಟು ದಂಡ*  ರಿಯಾಯಿತಿ ವಿಸ್ತರಣೆಯಿಂದ ಆರ್ಥಿಕ ನಷ್ಟ

ಬೆಂಗಳೂರು(ಏ.30):  ಬಿಬಿಎಂಪಿ(BBMP) ಇತಿಹಾಸದಲ್ಲಿ ಕೇವಲ 29 ದಿನದಲ್ಲಿ ಬರೋಬ್ಬರಿ ಒಂದು ಸಾವಿರ ಕೋಟಿಗೂ ಅಧಿಕ ಮೊತ್ತದ ಆಸ್ತಿ ತೆರಿಗೆ(Property Tax) ಸಂಗ್ರಹ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.

ಆರ್ಥಿಕ ವರ್ಷದ ಮೊದಲ ತಿಂಗಳಾದ ಏಪ್ರಿಲ್‌ನಲ್ಲಿ ಆಸ್ತಿ ತೆರಿಗೆ ಪಾವತಿದಾರರಿಗೆ ಶೇ.5 ರಷ್ಟು ರಿಯಾಯಿತಿ(Discount) ನೀಡಿದ ಹಿನ್ನೆಲೆಯಲ್ಲಿ ಹೆಚ್ಚಿನ ಮೊತ್ತದ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಪ್ರಸಕ್ತ 2022-23ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 4,500 ಕೋಟಿ ರು. ಆದಾಯ ಸಂಗ್ರಹ ಗುರಿಯನ್ನು ಪಾಲಿಕೆ ಇಟ್ಟುಕೊಂಡಿದೆ. ಮೊದಲ ತಿಂಗಳ 29 ದಿನಗಳಲ್ಲಿ 1 ಸಾವಿರ ಕೋಟಿ ರು. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಈ ಮೂಲಕ ಸದರಿ ವರ್ಷದ ಗುರಿಯ ಶೇ.22 ರಷ್ಟುಆಸ್ತಿ ತೆರಿಗೆ ಸಂಗ್ರಹ ಮಾಡಿದಂತಾಗಿದೆ.

Property Tax: ಆಸ್ತಿ ತೆರಿಗೆ ವಂಚನೆ ತಡೆಗೆ ಸಾಫ್ಟ್‌ವೇರ್‌ ಅಸ್ತ್ರ..!

ಕಳೆದ 2021-22ನೇ ಸಾಲಿನಲ್ಲಿ ಏ.29ರ ಅವಧಿಗೆ 860 ಕೋಟಿ ರು. 2020-21ನೇ ಸಾಲಿನಲ್ಲಿ ಕೇವಲ 312 ಕೋಟಿ ರು. ಸಂಗ್ರಹವಾಗಿತ್ತು ಎಂದು ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ರಿಯಾಯಿತಿ ಇಂದಿಗೆ ಕೊನೆ?

ಆಸ್ತಿ ತೆರಿಗೆ ಪಾವತಿದಾರರಿಗೆ ಶೇ.5 ರಷ್ಟು ರಿಯಾಯಿತಿ ನೀಡುವ ಅವಧಿ ಏ.30ಕ್ಕೆ ಕೊನೆಯಾಗಲಿದೆ. ಮೇ ತಿಂಗಳಾಂತ್ಯದವರೆಗೂ ರಿಯಾಯಿತಿ ವಿಸ್ತರಣೆಗೆ ಸಾರ್ವಜನಿಕರು ಸಲ್ಲಿಸಿದ್ದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಈ ಪ್ರಸ್ತಾವನೆಗಳನ್ನು ಬಿಬಿಎಂಪಿ ತಿರಸ್ಕರಿಸಿದೆ. ಪಾಲಿಕೆಗೆ ಆಸ್ತಿ ತೆರಿಗೆ ಪ್ರಮುಖ ಆದಾಯದ ಮೂಲವಾಗಿದೆ. ಸರ್ಕಾರದ ನಿಯಮಾವಳಿಯಂತೆ ಆರ್ಥಿಕ ವರ್ಷದ ಮೊದಲ ತಿಂಗಳು ರಿಯಾಯಿತಿ ನೀಡಲಾಗಿದೆ. ಮುಂದುವರೆಸುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಾಖಲೆಯ ತೆರಿಗೆ ಸಂಗ್ರಹಿಸಿದರೂ ನಿಗದಿತ ಗುರಿ ಮುಟ್ಟದ ಬಿಬಿಎಂಪಿ..

ರಿಯಾಯಿತಿ ವಿಸ್ತರಣೆಯಿಂದ ಆರ್ಥಿಕ ನಷ್ಟ

ಆರ್ಥಿಕ ವರ್ಷದ(Financial Year) ಮೊದಲ ತಿಂಗಳಲ್ಲಿಯೇ 1 ಸಾವಿರ ಕೋಟಿ ರು. ತೆರಿಗೆ ಪಾವತಿ ಆಗಿದ್ದು, ಇದರಲ್ಲಿ ಶೇ.5 ರಿಯಾಯಿತಿ ಅಧಾರದಲ್ಲಿ 50 ಕೋಟಿ ರು. ಪಾಲಿಕೆಗೆ ನಷ್ಟವಾಗಿದೆ. ರಿಯಾಯಿತಿ ಅವಧಿಯನ್ನು ಮೇ 30ರವರೆಗೆ ವಿಸ್ತರಣೆ ಮಾಡಿದರೆ ಮತ್ತಷ್ಟು ನಷ್ಟ ಉಂಟಾಗಲಿದೆ. ಹಾಗಾಗಿ, ರಿಯಾಯಿತಿ ವಿಸ್ತರಣೆಗೆ ಪಾಲಿಕೆ ಅಧಿಕಾರಿಗಳು ಆಸಕ್ತ ವಹಿಸುತ್ತಿಲ್ಲ. ಆಸ್ತಿ ತೆರಿಗೆ ಮೇಲಿನ ಶೇ.5 ರಿಯಾಯಿತಿಯನ್ನು ವಿಸ್ತರಣೆ ಮಾಡುವುದಿಲ್ಲ. ಒಂದು ವೇಳೆ ಸರ್ಕಾರದಿಂದ ಸೂಚನೆ ಬಂದಲ್ಲಿ ವಿಸ್ತರಣೆ ಮಾಡಲಾಗುತ್ತದೆ ಅಂತ ಕಂದಾಯ ವಿಭಾಗದ ವಿಶೇಷ ಆಯುಕ್ತ ಡಾ. ದೀಪಕ್‌ ತಿಳಿಸಿದ್ದಾರೆ. 

ಜೂನ್‌ನಿಂದ ಶೇ. 9 ರಷ್ಟು ದಂಡ

ಒಂದು ವೇಳೆ ರಿಯಾಯಿತಿ ಅವಧಿ ವಿಸ್ತರಣೆ ಆಗದಿದ್ದರೆ ಮೇ 1 ರಿಂದ 31ರ ವರೆಗೆ ಆಸ್ತಿ ತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಪಾವತಿ ಮಾಡಬೇಕಾಗಲಿದೆ. ಯಾವುದೇ ದಂಡ ಅಥವಾ ಬಡ್ಡಿ ಇರುವುದಿಲ್ಲ. ಒಂದು ವೇಳೆ ಜೂನ್‌ 1ರಿಂದ 2024ರ ಮಾರ್ಚ್‌ 31ರ ಅವಧಿಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವವರಿಗೆ ಶೇ.9 ರಷ್ಟುದಂಡ ಸಹಿತ ಪಾವತಿಸಬೇಕಾಗಲಿದೆ.